ಕೋಲ್ಕತಾ ವೈದ್ಯೆ ರೇಪ್, ಹತ್ಯೆ ವಿರುದ್ಧ ಮುಷ್ಕರ: ಇಂದು 24 ತಾಸು ದೇಶದ ಆಸ್ಪತ್ರೆಗಳು ಬಂದ್..!
ಈ ಅವಧಿಯಲ್ಲಿ ತುರ್ತು ಸೇವೆಗಳು ಆಸ್ಪತ್ರೆಗಳಲ್ಲಿ ಲಭ್ಯವಿರುತ್ತವೆ. ಆದರೆ, ಹೊರರೋಗಿ ವಿಭಾಗಗಳು (ಒಪಿಡಿ) ಕೆಲಸ ಮಾಡುವುದಿಲ್ಲ. ಇಡೀ ದಿನ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಿಲ್ಲ. ಆಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಈ ಬಂದ್ ಅನ್ವಯಿಸುತ್ತದೆ ಎಂದು ಐಎಂಎ ಹೇಳಿದೆ.
ನವದೆಹಲಿ(ಆ.17): ಕೋಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಹತ್ಯೆ ಹಾಗೂ ನಂತರ ನಡೆದ ದಾಂಧಲೆಗಳ ವಿರುದ್ಧ ಪ್ರತಿಭಟಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆ.17ರ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.
ಈ ಅವಧಿಯಲ್ಲಿ ತುರ್ತು ಸೇವೆಗಳು ಆಸ್ಪತ್ರೆಗಳಲ್ಲಿ ಲಭ್ಯವಿರುತ್ತವೆ. ಆದರೆ, ಹೊರರೋಗಿ ವಿಭಾಗಗಳು (ಒಪಿಡಿ) ಕೆಲಸ ಮಾಡುವುದಿಲ್ಲ. ಇಡೀ ದಿನ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದಿಲ್ಲ. ಆಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಈ ಬಂದ್ ಅನ್ವಯಿಸುತ್ತದೆ ಎಂದು ಐಎಂಎ ಹೇಳಿದೆ.
ಕೋಲ್ಕತಾ ವೈದ್ಯೆ ಹತ್ಯೆ ಪ್ರತಿಭಟನೆ ಬೆನ್ನಲ್ಲೇ ನರ್ಸ್ ಎಳೆದೊಯ್ದು ಅತ್ಯಾಚಾರ ಎಸಗಿ ಕೊಲೆ!
‘ಇಂದು ಮಹಿಳಾ ವೈದ್ಯರಿಗೆ ಭದ್ರತೆ ಇಲ್ಲದಂತಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ನೀಡುವುದು ಅಧಿಕಾರಿಗಳ ಹೊಣೆ. ಅವರು ತಮ್ಮ ಜವಾಬ್ದಾರಿಯಲ್ಲಿ ವಿಫಲರಾಗಿರುವುದರಿಂದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ಹಾಗೂ ಅಪರಾಧ ಕೃತ್ಯಗಳು ಸಂಭವಿಸುತ್ತಿವೆ’ ಎಂದು ಐಎಂಎ ವಿಷಾದ ವ್ಯಕ್ತಪಡಿಸಿದೆ.
ಇದೇ ವೇಳೆ ದೇಶದಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳನ್ನು ವಿಮಾನ ನಿಲ್ದಾಣಗಳಂತೆ ಸುರಕ್ಷಿತ ವಲಯಗಳಾಗಿ ಘೋಷಿಸಿಬೇಕು. ಆರೋಗ್ಯ ಸೇವೆಯಲ್ಲಿರುವ ಸಿಬ್ಬಂದಿ ಮೇಲೆ ನಡೆಯುವ ಹಿಂಸಾಚಾರ ತಡೆಯಲು ಕಾನೂನು ತರಬೇಕು. ಅತ್ಯಾಚಾರ ಹಾಗೂ ಕೊಲೆಯಾದ ವೈದ್ಯೆ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು. ರೇಪ್ ಪ್ರಕರಣವನ್ನು ಶೀಘ್ರವಾಗಿ ತನಿಖೆ ಮಾಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಹಾಗೂ ಕೊನೆಯದಾಗಿ ಸ್ಥಾನಿಕ ವೈದ್ಯರ ಕರ್ತವ್ಯದ ಅವಧಿ ಮತ್ತು ಕರ್ತವ್ಯದ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂದುಭಾರತೀಯ ವೈದ್ಯಕೀಯ ಸಂಘದ ಮುಖ್ಯಸ್ಥ ಡಾ। ಆರ್.ವಿ. ಅಶೋಕನ್ ಒತ್ತಾಯಿಸಿದ್ದಾರೆ.
ಕೋಲ್ಕತಾ ವೈದ್ಯೆಯ ಹತ್ಯೆ ಖಂಡಿಸಿ ಆ.9ರಿಂದಲೇ ದೇಶದ ವಿವಿಧೆಡೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆ ಸಂಭವಿಸಿದ ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯಲ್ಲೂ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಆ.14ರ ರಾತ್ರಿ 40ಕ್ಕೂ ಹೆಚ್ಚು ಜನರು ಆರ್.ಜಿ.ಕರ್ ಆಸ್ಪತ್ರೆಗೆ ನುಗ್ಗಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಶ್ರುವಾಯು ಪ್ರಯೋಗಿಸಿ ದಾಂಧಲೆ ನಿಯಂತ್ರಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಐಎಂಎ ಮುಷ್ಕರಕ್ಕೆ ಕರೆ ನೀಡಿದೆ.