ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಐದು ವರ್ಷದ ಆದ್ಯಾಳ ಚಿಕಿತ್ಸೆಗೆ ಹಣ ಹೊಂದಿಸಲು ದೊಡ್ಡಮ್ಮ ಸೆರಗೊಡ್ಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆದ್ಯಾ ಮೃತಪಟ್ಟಿದ್ದಾಳೆ.

ನಂಜನಗೂಡು (ಸೆ.13): ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಗುವನ್ನು ಉಳಿಸಿಕೊಳ್ಳಲು ಹಣಕ್ಕಾಗಿ ಭಿಕ್ಷೆ ಬೇಡಿ ಹೋರಾಟ ಮಾಡಿದ್ದ ದೊಡ್ಡಮ್ಮನ ಪ್ರಯತ್ನ ವಿಫಲವಾಗಿದೆ. 

ಎರಡು ಬೈಕ್‌ಗಳ ನಡುವೆ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಬಾಲಕಿ ಆದ್ಯಾ (5) ಶುಕ್ರವಾರ ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. 

ಇದನ್ನೂ ಓದಿ: ಸಣ್ಣ ಜ್ವರಕ್ಕೆ 82 ಲಕ್ಷ ಬಿಲ್‌: ಮಗಳ ನೋಡಲು ಕೆನಡಾಗೆ ಹೋಗಿದ್ದ ಮಹಿಳೆಗೆ ಆಘಾತ

ಈಕೆಯನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಸ್ಪತ್ರೆಯು ಚಿಕಿತ್ಸೆಗಾಗಿ ಒಂದೂವರೆ ಲಕ್ಷ ರು. ಬಿಲ್‌ ಮಾಡಿತ್ತು. ಇದನ್ನು ಕಟ್ಟಲು ಆದ್ಯಾಳ ದೊಡ್ಡಮ್ಮ ಮಂಗಳಮ್ಮ ತನ್ನ ಗ್ರಾಮದಲ್ಲಿ ಸೆರಗೊಡ್ಡಿ ಹಣ ಹೊಂದಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಆಸ್ಪತ್ರೆಯು ಕೇವಲ ₹25000 ಶುಲ್ಕ ಪಡೆದಿತ್ತು. ಬಳಿಕ ಕುಟುಂಬಸ್ಥರು ಮಗುವನ್ನು ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿ ಬದುಕಿಸಲು ಪ್ರಯತ್ನಿಸಿದ್ದರು. ಆದರೆ ಮಗು ಬದುಕಿಳಿಯಲಿಲ್ಲ. ಆದ್ಯಾಳ ತಂದೆ ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.