ಶಿಮ್ಲಾ(ಸೆ.11);  ನಟಿ ಕಂಗನಾ ರನೌತ್ ಹಾಗೂ ಮಹಾರಾಷ್ಟ್ರ ಸರ್ಕಾರ ನಡುವಿನ ವಾಕ್ಸಮರ ಮತ್ತೊಂದು ಹಂತ ಪಡೆದು ಕೆಲ ದಿನಗಳಾಗಿವೆ. ಕಂಗನಾ ವಿರುದ್ಧ ಪ್ರತೀಕಾರಕ್ಕಾಗಿ ಮಹಾರಾಷ್ಟ್ರದ ಶಿವ ಸೇನಾ ಸರ್ಕಾರ ನಟಿ ಕಚೇರಿಯನ್ನು ಧ್ವಂಸಗೊಳಿಸಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಹಿಮಾಚಲ ಪ್ರದೇಶ ಮಹಿಳಾ ಬಿಜೆಪಿ ನಾಯಕಿ ರಶೀಮ್ ದಾರ್ ಸೂದ್ ಮತ್ತೊಂದು  ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ದಿಢೀರ್ ಮಧ್ಯಪ್ರವೇಶಿಸಿದ ಹಿಮಾಚಲ ಪ್ರದೇಶ ಸಿಎಂ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ.

ಕಂಗನಾ ರನೌತ್ ಕಚೇರಿ ಧ್ವಂಸಕ್ಕೆ ಪ್ರತೀಕಾರವಾಗಿ ಶಿಮ್ಲಾದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮನೆಯನ್ನು ಧ್ವಂಸಗೊಳಿಸಬೇಕು ಎಂದು ರಶೀಮ್ ದಾರ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹಲವರು ಸೇಡಿಗೆ ಸೇಡು ತೀರಿಸಿಕೊಳ್ಳುವಂತೆ ಆಗ್ರಹಿಸಿದ್ದರು. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಶಿವಸೇನಾ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಆಂದೋಲನವೇ ನಡೆಯುತ್ತಿದೆ. ಇದರ ನಡುವೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಂ ಠಾಕೂರ್,  ಯಾವುದೇ ಕಾರಣಕ್ಕೂ ಪ್ರಿಯಾಂಕ ಗಾಂಧಿ ಮನೆ ಕೆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಂಗನಾಗೆ ಗೆಲುವು: ತೆರವು ಕಾರ್ಯಾಚರಣೆಗೆ ಸ್ಟೇ ಕೊಟ್ಟ ಬಾಂಬೆ ಹೈಕೋರ್ಟ್

ಶಿಮ್ಲಾದಲ್ಲಿರುವ ಪ್ರಿಯಾಂಕ ಗಾಂಧಿ ಮನೆ ಧ್ವಂಸಗೊಳಿಸುವ ಒತ್ತಾಯ ಸರಿಯಲ್ಲ. ಬದಲಾಗಿ ಹಿಮಾಚಲ ಪ್ರದೇಶದಲ್ಲಿರುವ ಪ್ರಿಯಾಂಕ ಮನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗುವುದು. ರಾಜ್ಯದಲ್ಲಿರುವ ಪ್ರಿಯಾಂಕ ಮನೆಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಒಡೆಯುವ ಸಂಸ್ಕೃತಿ ನಮ್ಮದ್ದಲ್ಲ ಎಂದಿದ್ದಾರೆ. ಈ ಮೂಲಕ ಬಿಜೆಪಿ ಮಹಿಳಾ ನಾಯಕಿ ವಿವಾದಕ್ಕೆ ತೆರೆ ಎಳೆದರೆ, ಮಹಾರಾಷ್ಟ್ರದ ಮೈತ್ರಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಅನ್ಯಾಯದ ವಿರುದ್ಧ ದ್ವನಿ ಎತ್ತಿದ ರಾಜ್ಯ ಬಿಜೆಪಿ ಮಹಿಳಾ ಮುಖ್ಯಸ್ಥೆ ರಶೀಮ್ ದಾರ್ ಸೂದ್ , ತಕ್ಷಣಕ್ಕೆ ಆ ರೀತಿ ಹೇಳಿಕೆ ನೀಡಿದ್ದಾರೆ. ಕಂಗನಾ ರನೌತ್ ಹಿಮಾಚಲ ಪ್ರದೇಶ ಮೂಲವಾಗಿರುವ ಕಾರಣ ರಶೀಮ್ ದಾರ್‌ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೇಳಿಕೆಯನ್ನು ನಾವು ಪುರಸ್ಕರಿಸುವುದಿಲ್ಲ ಎಂದು ಜೈರಾಂ ಠಾಕೂರ್ ಹೇಳಿದ್ದಾರೆ.