ದೆಹಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಅನಾಹುತ ಸೃಷ್ಟಿಸಿದೆ. ಮಂಡಿಯಲ್ಲಿ ಪ್ರವಾಹದಿಂದಾಗಿ ವಾಹನಗಳು ಜಲಸಮಾಧಿಯಾಗಿ, ಮನೆಗಳು ಜಲಾವೃತಗೊಂಡಿವೆ. ಮೂವರು ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಂಡಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇತ್ತ ರಾಜಧಾನಿ ದೆಹಲಿಯಲ್ಲಿ ಬಹಳ ದಿನಗಳಿಂದ ಸೆಕೆಯಿಂದ ಕಂಗೆಟ್ಟಿದ್ದ ಜನರಿಗೆ ಮುಂಜಾನೆ ಮಳೆ ತಂಪೆರೆದಿದ್ದು, ಜನರಿಗೆ ಸೆಖೆಯಿಂದ ಮುಕ್ತಿ ನೀಡಿದೆ.

ಅತ್ತ ಹಿಮಾಚಲ ಪ್ರದೇಶದಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದ್ದು, ವಿಶೇಷವಾಗಿ ನಟಿ ಕಂಗನಾ ರಾಣಾವತ್ ಪ್ರತಿನಿಧಿಸುವ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಮಳೆಯಿಂದಾಗಿ ತೀವ್ರ ಹಾನಿಯಾಗಿದೆ. ಹಠಾತ್ ಪ್ರವಾಹದಿಂದ 20ಕ್ಕೂ ಹೆಚ್ಚು ವಾಹನಗಳು ಜಲಸಮಾಧಿಯಾಗಿದ್ದು, ಹಲವಾರು ಮನೆಗಳು ಜಲಾವೃತವಾಗಿವೆ. ಮೂವರು ನೀರುಪಾಲಾಗಿದ್ದಾರೆ.

ಮಂಡಿಯಲ್ಲಿ ಮಳೆಯ ರಭಸ ಎಷ್ಟು ತೀವ್ರವಾಗಿತ್ತೆಂದರೆ, ನಗರದ ಮೂಲಕ ಹರಿಯುವ ಸುಕತಿ ನಲ್ಲಾಗಳಲ್ಲಿ ನೀರು ಉಕ್ಕಿ ಬಂದಿದ್ದು,, ಸುಮಾರು ಐದು ಕಿಲೋಮೀಟರ್ ಪ್ರದೇಶದವರೆಗೆ ಹಲವಾರು ಪ್ರದೇಶಗಳಿಗೆ ನೀರು ನುಗ್ಗಿದೆ. ವಿಶೇಷವಾಗಿ ಜೈಲ್ ರಸ್ತೆ, ಸೈನಿ ಮೊಹಲ್ಲಾ ಮತ್ತು ವಲಯ ಆಸ್ಪತ್ರೆ ಪ್ರದೇಶಗಳು ಮಳೆಯಿಂದ ತೀವ್ರ ಹಾನಿಗೊಳಗಾಗಿವೆ.

ಮಳೆಯಿಂದಾಗಿ ಮೂವರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, 20 ಜನರನ್ನು ಜಲಾವೃತ ಪ್ರದೇಶದಿಂದ ರಕ್ಷಿಸಲಾಗಿದೆ. ಮಳೆಯಿಂದಾಗಿ ಚಂಡಿಘಡ ಮನಾಲಿ ರಾಷ್ಟ್ರೀಯ ಹೆದ್ದಾರಿ 4 ಮೈಲಿ, 9 ಮೈಲಿ ಮತ್ತು ದ್ವಾಡಾದಲ್ಲಿ ರಸ್ತೆಗಳು ಕೊಚ್ಚಿಹೋಗಿರುವುದರಿಂದ ಅದನ್ನು ಮುಚ್ಚಲಾಗಿದೆ.

ಕಳೆದ ಜೂನ್ 30 ಹಾಗೂ ಜುಲೈ 1 ರ ರಾತ್ರಿ ಸುರಿದ ಮಳೆಯಿಂದಾಗಿ ಮಂಡಿ ಜಿಲ್ಲೆಯ ಸೆರಾಜ್, ನಾಚನ್, ಧರಂಪುರ್ ಮತ್ತು ಕರ್ಸೋಗ್ ವಿಧಾನಸಭಾ ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.