ಜರ್ಮನ್ ಶೆಪರ್ಡ್ ನಾಯಿಯೊಂದು ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಮೊದಲ ಮಹಡಿಯಿಂದ ಹಾರಿದ ಘಟನೆ ವೈರಲ್ ಆಗಿದೆ. ಮಕ್ಕಳ ಮೇಲೆ ಬೀದಿ ನಾಯಿ ದಾಳಿ ಮಾಡುವುದನ್ನು ತಪ್ಪಿಸಲು ನಾಯಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಈ ವೀಡಿಯೋ ಲಕ್ಷಾಂತರ ಜನರ ಸೆಳೆದಿದೆ.
ನಾಯಿಗಳು ಬಹಳ ನಿಯತ್ತಿನ ಪ್ರಾಣಿಗಳು, ತಮ್ಮವರಿಗಾಗಿ ಜೀವ ಬಿಡುವುದಕ್ಕೂ ಸಿದ್ಧರಿರುತ್ತವೆ. ಸಾಕುನಾಯಿಗಳು ತಮ್ಮ ಪ್ರಾಣ ಕೊಟ್ಟು ಮಾಲೀಕರನ್ನು ರಕ್ಷಿಸಿದಂತಹ ಹಲವು ಕತೆಗಳಿವೆ. ಬುದ್ಧಿವಂತಿಕೆ ಸೂಕ್ಷ್ಮತೆಗೆ ಹೆಸರುವಾಸಿಯಾಗಿರುವ ನಾಯಿಗಳು ಅಪಾಯವನ್ನು ಮನುಷ್ಯರಿಗೂ ಮೊದಲೇ ಗೃಹಿಸುತ್ತವೆ. ಅದೇ ರೀತಿ ಇಲ್ಲೊಂದು ಜರ್ಮನ್ ಶೆಪರ್ಡ್ ನಾಯಿ ಮಕ್ಕಳನ್ನು ಬೀದಿ ನಾಯಿಯಿಂದ ರಕ್ಷಿಸಲು ಕಟ್ಟಡದ ಮೊದಲನೇ ಮಹಡಿಯಿಂದ ಕೆಳಗೆ ಹಾರಿದ್ದು ಅದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಬೀದಿನಾಯಿಗಳೆಲ್ಲವನ್ನು ಆಶ್ರಯ ಕೇಂದ್ರಗಳಿಗೆ ಸಾಗಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಒಂದೆಡೆ ಜನ ಪ್ರತಿಭಟನೆ ಮಾಡುತ್ತಿರುವುದ ಮಧ್ಯೆಯೇ ಇಲ್ಲೊಂದು ಕಡೆ ಜರ್ಮನ್ ಶೆಪರ್ಡ್ ನಾಯಿ ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಿಸಿದ ವೀಡಿಯೋ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರಾಖಂಡ್‌ನ ರಿಷಿಕೇಶದಲ್ಲಿ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ Ghar Ke Kalesh(@gharkekalesh)ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. 13 ಸೆಕೆಂಡ್‌ಗಳ ಈ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಹೀರೋನಂತೆ ಮಹಡಿಯಿಂದ ಹಾರಿದ ಜರ್ಮನ್ ಶೆಪರ್ಡ್:
ವೀಡಿಯೋದಲ್ಲಿ ಒಂದೆಡೆ ಸೈಕಲ್ ನಿಲ್ಲಿಸಿ ಬಾಲಕನೋರ್ವ ಬ್ಯಾಟ್ ಹಿಡಿದುಕೊಂಡು ಓಡಿ ಬರುತ್ತಾನೆ. ಇದಾಗಿ ಕೆಲ ನಿಮಿಷದಲ್ಲಿ ಆ ಬಾಲಕನೂ ಮತ್ತೊಬ್ಬಳು ಬಾಲಕಿ ಹಾಗೂ ಪುಟ್ಟ ಮಗು ವಾಪಸ್ ಹಿಂದಕ್ಕೆ ಓಡಿ ಬರುತ್ತಾರೆ. ಅವರನ್ನು ಬೀದಿ ನಾಯಿಯೊಂದು ಓಡಿಸಿಕೊಂಡು ಬಂದಿದೆ. ಇವೆಲ್ಲವನ್ನು ಮನೆಯ ಮೊದಲ ಮಹಡಿಯ ಬಾಲ್ಕಿನಿಯಲ್ಲಿ ಕುಳಿತು ನೋಡುತ್ತಿದ್ದ ಜರ್ಮನ್ ಶೆಪರ್ಡ್ ಶ್ವಾನ ಅಲ್ಲಿಂದ ಕೆಳಗೆ ಜಿಗಿದಿದ್ದು, ಮಕ್ಕಳನ್ನು ಹಿಂದಿನಿಂದ ಓಡಿಸಿಕೊಂಡು ಹೋದ ಬೀದಿ ನಾಯಿಯನ್ನು ಓಡಿಸಿಕೊಂಡು ಹೋಗಿದೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಇದೀಗ ಭಾರಿ ವೈರಲ್ ಆಗ್ತಿದೆ.
ಒಂದು ನಾಯಿ ಮತ್ತೊಂದು ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಸೂಪರ್ ಹೀರೋನಂತೆ ಕೆಳಗೆ ಹಾರಿತು ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಿದ್ದು, ಜರ್ಮನ್ ಶೆಪರ್ಡ್ ಶ್ವಾನದ ಸಮಯಪ್ರಜ್ಞೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಲ್ಲಿ ಜರ್ಮನ್ ಶೆಪರ್ಡ್ ಶ್ವಾನ ಮಧ್ಯಪ್ರವೇಶಿಸದಿದ್ದರೆ, ಆ ಬೀದಿನಾಯಿ ಪುಟ್ಟ ಮಗುವಿನ ಮೇಲೆ ದಾಳಿ ಮಾಡುತ್ತಿದ್ದಿದ್ದಂತು ಪಕ್ಕಾ. ಶ್ವಾನಗಳು ಮನುಷ್ಯನಿಗಿಂತ ಪ್ರಾಮಾಣಿಕ ಎಂಬುದು ಮತ್ತೊಮ್ಮೆ ಸಾಬೀತಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನಾನು ನಾಯಿಗಳನ್ನು ಅವುಗಳ ಅಚಲ ನಿಷ್ಠೆ ಮತ್ತು ರಕ್ಷಣಾತ್ಮಕ ಪ್ರವೃತ್ತಿಗಾಗಿ ಮೆಚ್ಚುತ್ತೇನೆ. ಮಕ್ಕಳನ್ನು ರಕ್ಷಿಸಲು ಈ ನಾಯಿಯ ಧೈರ್ಯಶಾಲಿ ಹೆಜ್ಜೆ ನಿಜಕ್ಕೂ ವೀರೋಚಿತವಾಗಿದೆ. ಅವು ಮನುಷ್ಯನ ಅತ್ಯುತ್ತಮ ಸ್ನೇಹಿತ ಏಕೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಕೆಲ ದಿವಸಗಳ ಹಿಂದೆ ಉತ್ತರಕಾಶಿಯ ಧಾರಾಲಿಯಲ್ಲಿ ಪ್ರವಾಹಕ್ಕೆ ಇಡೀ ಗ್ರಾಮವೇ ಕುಸಿದು ಹೋಗಿ ಹಲವು ಭೂಸಮಾಧಿಯಾದ ಘಟನೆ ನಡೆದಿರುವುದು ಗೊತ್ತೆ ಇದೆ. ಈ ದುರಂತದಲ್ಲಿ ಬದುಕಿದ ಶ್ವಾನವೊಂದು ತನ್ನ ಮನೆಯವರ ಕಳೆದುಕೊಂಡು ಮಣ್ಣಿನಲ್ಲಿ ಹುಡುಕಾಟ ನಡೆಸುತ್ತಿರುವ ವೀಡಿಯೋವೊಂದು ಇತ್ತೀಚೆಗೆ ಭಾರಿ ವೈರಲ್ ಆಗಿತ್ತು.
