ತಾಯಿ ಬಿಟ್ಟು ಹೋದ ಚಿರತೆ ಮರಿಯೊಂದನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಯುವಕನೋರ್ವ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಕಾರಿನಲ್ಲಿ ಮರಿಯನ್ನು ಕರೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಯಿ ಬಿಟ್ಟು ಹೋದ ಚಿರತೆ ಮರಿಯೊಂದನ್ನು ಯುವಕನೋರ್ವ ರಕ್ಷಿಸಿ ಕಾರಿನಲ್ಲಿ ಸಾಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಈ ಘಟನೆ ನಡೆದಿದೆ. ಶಿಮ್ಲಾದ ಕೊಟ್ಖೈ ಪ್ರದೇಶದಲ್ಲಿನ ಪೊದೆಯೊಂದರಲ್ಲಿ ಈ ಚಿರತೆ ಮರಿ ಆಯಾಸ ಹಾಗೂ ಭಯದಿಂದ ನಡುಗುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜನಿಸಿ ಕೇವಲ 25 ದಿನಗಳಷ್ಟೇ ಆಗಿದ್ದ ಈ ಮರಿಯನ್ನು ಸ್ಥಳೀಯರೊಬ್ಬರು ರಕ್ಷಣೆ ಮಾಡಿದ್ದಾರೆ.
ರಸ್ತೆ ಬದಿಯ ಪೊದೆಯಲ್ಲಿದ್ದ ಚಿರತೆ ಮರಿ:
ಶಿಮ್ಲಾದ ಕೊಟ್ಖೈ ನಿವಾಸಿ ಅಂಕುಶ್ ಚೌಹಾಣ್ ಚಿರತೆ ಮರಿಯನ್ನು ರಕ್ಷಿಸಿದವರು ಅವರಿಗೆ ರಸ್ತೆಬದಿಯಲ್ಲಿ ಬಿಟ್ಟು ಹೋದಂತಹ ದುರ್ಬಲ ಸ್ಥಿತಿಯಲ್ಲಿ ಚಿರತೆ ಮರಿ ಸಿಕ್ಕಿದೆ. ರಸ್ತೆಬದಿಯ ಪೊದೆಯೊಂದರಲ್ಲಿ ಮರಿ ಭಯದಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದು, ಅದರ ತಾಯಿ ಮರಿಯನ್ನು ತೆಗೆದುಕೊಂಡು ಹೋಗಲು ಬರಬಹುದು ಎಂದು ಅವರು ಕೆಲ ದಿನಗಳ ಕಾಲ ಕಾದು ನೋಡಿದರು ಆದರೆ ತಾಯಿ ಮರಳಿ ಬಾರದ ಹಿನ್ನೆಲೆ ಇತ್ತ ಮರಿಯ ಆರೋಗ್ಯವೂ ಕೂಡ ಹದಗೆಡುತ್ತಿತ್ತು ಇದರ ಜೊತೆಗೆ ಅಲ್ಲಿ ಬೀದಿನಾಯಿಗಳು ಕೂಡ ಈ ಮರಿಯ ಮೇಲೆ ದಾಳಿ ಮಾಡುವ ಭಯವಿತ್ತು. ಇದರಿಂದಾಗಿ ಅಂಕುಶ್ ಅವರು ಈ ಚಿರತೆ ಮರಿ ಅಲ್ಲೇ ಇರುವುದು ಸುರಕ್ಷಿತವಲ್ಲ ಎಂದು ಭಾವಿಸಿ ಅದನ್ನು ರಕ್ಷಿಸಿದ್ದಾರೆ.
ಕಾರಿನಲ್ಲಿ ಕರೆದೊಯ್ದು ಚಿರತೆ ಮರಿಯ ಹಸ್ತಾಂತರ:
ಬಹಳ ಜಾಗರೂಕವಾಗಿ ಮರಿಯನ್ನು ಆ ಸ್ಥಳದಿಂದ ಹಿಡಿದುಕೊಂಡು ಬಂದ ಅವರು ನಂತರ ಅದನ್ನು ಕಾರಿನಲ್ಲಿ ಇರಿಸಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಅವರು ಆ ಚಿರತೆ ಮರಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಥಿಯೋಗ್ ವಿಭಾಗೀಯ ಅರಣ್ಯ ಅಧಿಕಾರಿ ಮನೀಶ್ ರಾಮ್‌ಪಾಲ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಈ ಚಿರತೆ ಮರಿ ಕಾರಿನ ಮುಂದಿನ ಸೀಟಿನಲ್ಲಿ ಕಿಟಿಕಿ ಪಕ್ಕ ನೇತಾಡುತ್ತಾ ಸಾಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಕುಶ್ ಅವರು ಕಾರಿನ ಮುಂದಿನ ಸೀಟಿನಲ್ಲಿ ಚಿರತೆಮರಿಯನ್ನು ಕೂರಿಸಿದ್ದಾರೆ. ಆದರೆ ಅಮ್ಮನಿಲ್ಲದ ಈ ಮರಿಗೆ ಕಾರಿನ ಪಯಣದ ಅನುಭವ ಇಲ್ಲದಿರುವುದರ ಜೊತೆಗ ಹೊಸ ಜಾಗ ಹೊಸ ಜನರಿಂದ ಭಯಗೊಂಡಿದ್ದ ಈ ಚಿರತೆ ಮರಿ ಕಾರಿನ ಕಿಟಕಿಗೆ ತನ್ನ ಮುಂಗಾಲುಗಳನ್ನು ಇಟ್ಟು ಹಾದು ಹೋಗುತ್ತಿರುವ ಹಸಿರು ಗಿಡಮರಗಳನ್ನು ನೋಡುತ್ತಾ ತನ್ನ ಆವಾಸ ಸ್ಥಾನಕ್ಕೆ ಮರಳುವ ಯತ್ನ ಮಾಡಿದೆ.
ಚಿಕ್ಕ ಮರಿ ತೀವ್ರ ಒತ್ತಡದಲ್ಲಿತ್ತು ಆದರೆ ಈಗ ಅದು ಹೆಚ್ಚು ಸ್ಥಿರವಾಗಿದೆ ಮರಿಯನ್ನು ತಕ್ಷಣವೇ ಪಶುವೈದ್ಯರ ಆರೈಕೆಗಾಗಿ ಹಸ್ತಾಂತರಿಸಲಾಯಿತು ಎಂದು ಮರಿಯನ್ನು ಸ್ವೀಕರಿಸಿದ ಮನೀಶ್ ರಾಮ್‌ಪಾಲ್ ಮಾಹಿತಿ ನೀಡಿದ್ದಾರೆ. ವನ್ಯಜೀವಿ ರಕ್ಷಣಾ ಶಿಷ್ಟಾಚಾರಗಳ ಪ್ರಕಾರ ತಾಯಿ ಚಿರತೆ ಹಿಂತಿರುಗುತ್ತದೆಯೇ ಎಂದು ನೋಡಲು ಅರಣ್ಯ ಅಧಿಕಾರಿಗಳು ಮೂರು ದಿನಗಳ ಕಾಲ ಚಿರತೆ ಮರಿ ಸಿಕ್ಕಿದ ಸ್ಥಳವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಒಂದು ವೇಳೆ ತಾಯಿ ಚಿರತೆ ಹಿಂತಿರುಗದಿದ್ದರೆ, ಮರಿಯನ್ನು ಅದರ ಸುರಕ್ಷತೆ ಮತ್ತು ಆರೈಕೆಗಾಗಿ ಶಾಶ್ವತ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗುತ್ತದೆ.
ಚಿರತೆ ಉಷ್ಣವಲಯದ ಮಳೆ ಕಾಡುಗಳು, ಒಣ ಕಾಡುಗಳು, ಸಮಶೀತೋಷ್ಣ ಕಾಡುಗಳು ಮತ್ತು ಉತ್ತರ ಕೋನಿಫೆರಸ್ ಕಾಡುಗಳು ಸೇರಿದಂತೆ ವ್ಯಾಪಕ ಆವಾಸಸ್ಥಾನಗಳಲ್ಲಿ ಕಂಡುಬರುವ ಎಲ್ಲಾ ಕಡೆಗೂ ಹೆಚ್ಚು ಹೊಂದಿಕೊಳ್ಳುವ ಬೆಕ್ಕಿನ ಜಾತಿಗೆ ಸೇರಿದ ಕಾಡುಪ್ರಾಣಿ. ಭಾರತವು ಜಾಗತಿಕವಾಗಿ ಅತಿಹೆಚ್ಚು ಚಿರತೆ ಜನಸಂಖ್ಯೆಯನ್ನು ಹೊಂದಿದೆ. ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳಂತಹ ಬೇಟೆಯಿಂದ ಸಮೃದ್ಧ ಅರಣ್ಯ ಭೂಪ್ರದೇಶಗಳಲ್ಲಿ ಚಿರತೆ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿದೆ. ಅವುಗಳ ಹೊಂದಿಕೊಳ್ಳುವಿಕೆಯ ಹೊರತಾಗಿಯೂ ಚಿರತೆಗಳು ತಮ್ಮ ಆವಾಸಸ್ಥಾನ ನಷ್ಟಗಳಿಂದ ಮಾನವ ವನ್ಯಜೀವಿ ಸಂಘರ್ಷ ಮತ್ತು ಮನುಷ್ಯರ ಬೇಟೆಯಿಂದ ನಿರಂತರ ಬೆದರಿಕೆಗಳನ್ನು ಎದುರಿಸುತ್ತಿವೆ.
ಕಳೆದ ತಿಂಗಳು, ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡ ವೀಡಿಯೊದಲ್ಲಿ ರಕ್ಷಿಸಲ್ಪಟ್ಟ ಚಿರತೆಯೊಂದನ್ನು ಕಾಡಿಗೆ ಮರಳಿ ಬಿಟ್ಟ ನಂತರ ನದಿಗೆ ಅಡ್ಡಲಾಗಿ ಈಜುತ್ತಿರುವುದನ್ನು ತೋರಿಸಲಾಗಿದೆ. ಪರಿಸರ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ, ಭಾರತದ ಚಿರತೆಗಳ ಸಂಖ್ಯೆ ಸುಮಾರು 13,874 ವ್ಯಕ್ತಿಗಳಲ್ಲಿ ಸ್ಥಿರವಾಗಿದೆ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಚಿರತೆಗಳಿವೆ.
