Asianet Suvarna News Asianet Suvarna News

Republic Day 2022: ಹಲವು ಹೊಸತನಗಳ ಗಣರಾಜ್ಯ ಸಂಭ್ರಮ

* 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಹಲವು ಮೊದಲು, ವಿಭಿನ್ನ ಆಚರಣೆ
* 30 ನಿಮಿಷ ವಿಳಂಬವಾಗಿ ಆರಂಭ, 24,000 ಜನರು ಮಾತ್ರ ಭಾಗಿ
* 75 ವಿಮಾನಗಳ ವೈಮಾನಿಕ ಪ್ರದರ್ಶನ, 12 ರಾಜ್ಯಗಳ 21 ಸ್ತಬ್ಧಚಿತ್ರ ಪ್ರದರ್ಶನ
 

Here are the new initiatives for Republic Day Celebration this year san
Author
Bengaluru, First Published Jan 26, 2022, 4:30 AM IST

ನವದೆಹಲಿ (ಜ. 26): ಕೊರೋನಾ (Corona) ಸಾಂಕ್ರಾಮಿಕದ ನಡುವೆಯೇ 73ನೇ ಗಣರಾಜ್ಯೋತ್ಸವ (73rd Republic Day ) ಆಚರಣೆಗೆ ಇಡೀ ರಾಷ್ಟ್ರ ಸಿದ್ಧವಾಗಿದೆ. ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಸ್ವತಂತ್ರಗೊಂಡು 75 ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಈ ಭಾರಿ ವಿಭಿನ್ನವಾಗಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ನವದೆಹಲಿಯ ರಾಜಪಥದಲ್ಲಿ (Rajpath) ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ‘ಇಂಡಿಯಾ 75’ (India@75)ಎಂಬ ಥೀಮ್ ಇದೆ. ಈ ಬಾರಿ ಗಣರಾಜ್ಯೋತ್ಸವ ಹೇಗೆ ಭಿನ್ನ ಎಂಬ ಮಾಹಿತಿ ಇಲ್ಲಿದೆ.

ಗಣರಾಜ್ಯ ಕಾರ್ಯಕ್ರಮ 30 ನಿಮಿಷ ವಿಳಂಬ: ಗಣರಾಜ್ಯೋತ್ಸವ ಆರಂಭದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನವದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲನ 30 ನಿಮಿಷ ವಿಳಂಬ ಆಗಲಿದೆ. ಜ.26ರ ಬೆಳಗ್ಗೆ 10 ಗಂಟೆಯ ಬದಲಾಗಿ 10:30ರಿಂದ ಆರಂಭವಾಗಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಅದರ ಮುನ್ನೆಚ್ಚರಿಕೆ, ಬಿಗಿ ಕ್ರಮದಿಂದಾಗಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರತವಾಗಿದ್ದ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ 30 ನಿಮಿಷ ತಡವಾಗಿ ಆರಂಭವಾಗುತ್ತಿದೆ.

90 ನಿಮಿಷಗಳ ಪಥ ಸಂಚಲನ: ಕಳೆದ ವರ್ಷದಂತೆ ಈ ಬಾರಿಯೂ ಪಥಸಂಚಲನ 90 ನಿಮಿಷಗಳ ಕಾಲ ನಡೆಯಲಿದೆ. ಪರೇಡ್‌ಗೂ (Parade) ಮುನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial) ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ದೆಹಲಿ ವಲಯದ ಕಮಾಂಡಿಂಗ್‌ ಜನರಲ್ ಅಧಿಕಾರಿ ಲೆಫ್ಟಿನೆಂಟ್‌ ಜನರಲ್ ವಿಜಯ್ ಕುಮಾರ ಮಿಶ್ರಾ ಅವರು ಪರೇಡ್‌ ಕಮಾಂಡರ್‌ ಆಗಿ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ 10:30ರಿಂದ ಆರಂಭವಾಗಿ ಮಧ್ಯಾಹ್ನ12ಕ್ಕೆ ಮುಕ್ತಾಯವಾಗಲಿದೆ.

ಸತತ 2ನೇ ವರ್ಷ ವಿದೇಶಿ ಅತಿಥಿ ಇಲ್ಲ: ರಾಜತಾಂತ್ರಿಕ ಕಾರಣಗಳಿಗಾಗಿ ಪ್ರತಿ ವರ್ಷ ಗಣರಾಜ್ಯೋತ್ಸಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವ ಸಂಪ್ರದಾಯವನ್ನು ಭಾರತ ಹೊಂದಿದೆ. ಈ ವರ್ಷ ಮಧ್ಯಏಷ್ಯಾದ 5 ದೇಶಗಳ ನಾಯಕರನ್ನು ಆಹ್ವಾನಿಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಆದರೆ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ವಿದೇಶಿ ಅತಿಥಿಗಳಿಗೆ ಆಹ್ವಾನ ನೀಡದಿರಲು ನಿರ್ಧರಿಸಲಾಗಿದೆ. ಇದರೊಂದಿಗೆ ಸತತ 2ನೇ ವರ್ಷವೂ ವಿದೇಶಿ ಅತಿಥಿಗಳಿಲ್ಲದೇ ಕಾರ್ಯಕ್ರಮ ನಡೆಯಲಿದೆ.

ಆಟೋ ಚಾಲಕ, ಕಾರ್ಮಿಕರಿಗೂ ಆಹ್ವಾನ: ಮೊಟ್ಟಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ನೈರ್ಮಲ್ಯ ಸೇರಿದಂತೆ ಕೊರೋನಾ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡಿದ ಮುಂಚೂಣಿ ಕಾರ್ಯಕರ್ತರನ್ನೂ ಸೇರಿಸಲಾಗಿದೆ. ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ನೇರವಾಗಿ ನೋಡಲು ಅವಕಾಶ ಸಿಗದವರಿಗೆ ಅವಕಾಶ ನೀಡಲು ವಿಶೇಷ ಪ್ರಯತ್ನ ಮಾಡಲಾಗಿದೆ. ಎಲ್ಲ ವರ್ಗದ ಜನರನ್ನು ಕಾರ್ಯಕ್ರಮದಲ್ಲಿ ಆಹ್ವಾನಿಸಲಾಗಿದೆ.

ಈ ಬಾರಿ ಕೇವಲ 24000 ಜನರಿಗೆ ವೀಕ್ಷಣೆ ಅವಕಾಶ : ಕೊರೋನಾ ಕಾರಣದಿಂದಾಗಿ ಈ ಬಾರಿ ಪಥಸಂಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇವಲ 24,000 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. 19,000 ಅತಿಥಿಗಳು ಆಹ್ವಾನಿತರಾಗಿರುತ್ತಾರೆ. ಉಳಿದಂತೆ ಎರಡೂ ಡೋಸ್‌ ಲಸಿಕೆ ಪಡೆದ, 15 ವರ್ಷ ಮೇಲ್ಪಟ್ಟಸಾಮಾನ್ಯ ಜನರು ಯಾರು ಬೇಕಾದರೂ ಟಿಕೆಟ್‌ ಖರೀದಿಸಿ ಪಥಸಂಚಲನ ವೀಕ್ಷಿಸಬಹುದು. ಕಳೆದ ವರ್ಷ 25,000 ಹಾಗೂ ಕೊರೋನಾ ಸಾಂಕ್ರಾಮಿಕಕ್ಕೂ ಮೊದಲು ಸುಮಾರು 1.25 ಲಕ್ಷ ಮಂದಿಗೆ ಪಥಸಂಚಲನವನ್ನು ನೇರವಾಗಿ ನೋಡಲು ಅವಕಾಶ ನೀಡಲಾಗುತ್ತಿತ್ತು.

ಬಾನಿನಲ್ಲಿ 75 ವಿಮಾನಗಳ ರಂಗು: ಸ್ವಾತಂತ್ರ್ಯೋತ್ಸದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಪಥಸಂಚಲನದಲ್ಲಿ 75 ವಿಮಾನಗಳ ಅತ್ಯುತ್ತಮ ಮತ್ತು ಅತಿದೊಡ್ಡ ವೈಮಾನಿಕ ಪ್ರದರ್ಶನ ಇರಲಿದೆ. ಸ್ವಾತಂತ್ರ್ಯ ಲಭಿಸಿ 75 ವರ್ಷ ತುಂಬುತ್ತಿರುವ ಸಂದರ್ಭವನ್ನು ಸ್ಮರಣೀಯವಾಗಿಸಲು ಈ ವರ್ಷದ ಗಣರಾಜ್ಯೋತ್ಸವದಲ್ಲಿ ವಾಯುಪಡೆಯ 75 ವಿಮಾನಗಳು ಹಾರಾಟ ನಡೆಸಲಿವೆ. ಇದು ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಲಿದೆ. ವಿಂಟೇಜ್‌ ಹಾಗೂ ಆಧುನಿಕ ರಫೇಲ್, ಸುಖೋಯ್ ,ಜಾಗ್ವಾರ್‌, ಎಂಐ-17, ಸಾರಂಗ್‌, ಡಕೋಟಾ ಆಕಾಶದಲ್ಲಿ ಹಾರಾಡಲಿವೆ. 7 ಜಾಗ್ವಾರ್‌ ಯುದ್ಧ ವಿಮಾನಗಳು ಹಾರಾಟ ನಡೆಸುವುದರೊಂದಿಗೆ ವೈಮಾನಿಕ ಪ್ರದರ್ಶನವು ಮುಕ್ತಾಯಗೊಳ್ಳಲಿದೆ.

ರೆಟ್ರೋ ಸಮವಸ್ತ್ರದಲ್ಲಿ ಸೇನೆ: ಭಾರತೀಯ ಸೇನೆಯ ಸಮವಸ್ತ್ರಗಳು ಹೇಗೆ ಬದಲಾದವು ಹಾಗೂ ಆಧುನಿಕತೆಗೆ ಕಾಲ ತೆರೆದುಕೊಳ್ಳುತ್ತಿದ್ದಂತೆಯೇ ಶಸ್ತಾ್ರಸ್ತ್ರಗಳು ಹೇಗೆ ಬದಲಾದವು ಎಂಬ ಪ್ರದರ್ಶನವೂ ಈ ಸಲದ ಗಣರಾಜ್ಯೋತ್ಸವ ಕವಾಯತಿನಲ್ಲಿ ನಡೆಯಲಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಪ್ರದರ್ಶನ ನಡೆಯಲಿದೆ. ರಾಜಪಥದಲ್ಲಿ ಸಾಗುವ ಸೇನಾಪಡೆ ಯೋಧರ ತುಕಡಿಗಳು ಸೇನೆಯ ಬದಲಾದ ಸಮವಸ್ತ್ರಗಳನ್ನು ಧರಿಸಲಿವೆ. ಇದರಲ್ಲಿ ಒಂದು ತುಕಡಿಯು ಇತ್ತೀಚೆಗೆ ಸೇನೆಗೆ ರೂಪಿಸಲಾಗಿರುವ ಹೊಸ ಸಮವಸ್ತ್ರ ಪ್ರದರ್ಶಿಸಲಿದೆ. ಇನ್ನು ಇದೇ ಯೋಧರು ಕಾಲಕ್ಕೆ ತಕ್ಕಂತೆ ಬದಲಾದ ಎಲ್ಲ ಶಸ್ತಾ್ರಸ್ತ್ರಗಳನ್ನು ಹಿಡಿದುಕೊಂಡ ಪಥಸಂಚಲನದಲ್ಲಿ ಸಾಗಲಿದ್ದಾರೆ. ಈ ಸಲದ ಪರೇಡ್‌ನಲ್ಲಿ ಸೇನೆಯ 6 ತುಕಡಿಗಳು ಭಾಗವಹಿಸಲಿವೆ. ಆದರೆ ಕೋವಿಡ್‌-19 ಮಾರ್ಗಸೂಚಿಯ ಕಾರಣ ಪ್ರತಿ ತುಕಡಿಯಲ್ಲಿ ಸಾಂಪ್ರದಾಯಿಕ 144 ಯೋಧರ ಬದಲು 96 ಯೋಧರು ಮಾತ್ರ ಇರಲಿದ್ದಾರೆ.

ಡ್ರೋನ್‌ ಶೋ ನಡೆಸುವ 4ನೇ ದೇಶ:  ಗಣರಾಜ್ಯೋತ್ಸವ ಕಾರ್ಯಕ್ರಮದ ಮುಕ್ತಾಯದ ಭಾಗವಾಗಿ ಜ.29ರಂದು ನವದೆಹಲಿಯ ವಿಜಯ್‌ಚೌಕ್‌ನಲ್ಲಿ ನಡೆಯುವ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದಲ್ಲಿ ಈ ಬಾರಿ ಡ್ರೋನ್‌ ಶೋ ಏರ್ಪಡಿಸಲಾಗಿದೆ. ದೆಹಲಿ ಐಐಟಿ ನೇತೃತ್ವದಲ್ಲಿ ಬೋಟ್ಲಾಬ್‌ ಡೈನಾಮಿಕ್ಸ್‌ ಸ್ಟಾರ್ಟಪ್‌ ಕಂಪನಿ ಏರ್ಪಡಿಸುವ ಈ ಶೋನಲ್ಲಿ ಸುಮಾರು 1000 ಡ್ರೋನ್‌ಗಳು ಭಾಗವಹಿಸಲಿವೆ. ಚೀನಾ, ರಷ್ಯಾ, ಬ್ರಿಟನ್‌ ನಂತರ ಡ್ರೋನ್‌ ಶೋ ನಡೆಸುತ್ತಿರುವ ಜಗತ್ತಿನ 4ನೇ ದೇಶ ಭಾರತವಾಗಿದೆ.

5 ದಿನ ಸಂಭ್ರಮಾಚರಣೆ: ಈವರೆಗೆ ಗಣರಾಜ್ಯೋತ್ಸವ ಸಂಭ್ರಮ ಜನವರಿ 24ರಿಂದ ಆರಂಭವಾಗಿ ಜ.29ರ ವರೆಗೂ ನಡೆಯುತ್ತಿತ್ತು. ಈ ಬಾರಿ ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರಬೋಸ್‌ ಅವರ ಜನ್ಮದಿನವನ್ನು ಐತಿಹಾಸಿಕವಾಗಿಸುವ ಉದ್ದೇಶದಿಂದ ಜ.23ರಿಂದಲೇ ಗಣರಾಜ್ಯೋತ್ಸವ ಸಂಭ್ರಮ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರಂತೆ .23ರಿಂದ ಜ.29ರ ವರೆಗೆ ಸತತ 5 ದಿನಗಳ ಕಾಲ ಗಣರಾಜ್ಯೋತ್ಸವ ಆಚರಣೆಯಾಗಲಿದೆ.

Follow Us:
Download App:
  • android
  • ios