ಜನ ಏನು ಬೇಕಾದರೂ ಮಾತಾಡಲಿ; ನಾನು ಒಂದೇ ಒಂದು ರೂಪಾಯಿ ಲಂಚ ಯಾರಿಂದಲೂ ಪಡೆದಿಲ್ಲ: ಡಿಕೆ ಶಿವಕುಮಾರ
ಐದು ವರ್ಷಕ್ಕೊಮ್ಮೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕನಕಪುರದಲ್ಲಿ ಪ್ರವಾಸ ಮಾಡಿ ಹೋಗ್ತಾರೆ. ಅವರು ಎಷ್ಟು ಸಾರಿ ಬೇಕಾದರು ಬಂದು ಹೋಗಲಿ ನನ್ನದೇನು ಅಭ್ಯಂತರವಿಲ್ಲ. ನಾವು ಮಾತ್ರ ಅವರಂತಲ್ಲ. ಈ ತಾಲೂಕಿನ ಜನರ ಮಕ್ಕಳಾಗಿರುವ ನಮ್ಮ ಬದುಕು, ಜೀವನ, ಪಲ್ಲಕ್ಕಿ, ಕೊನೆಗೆ ಹೆಣ ಎಲ್ಲವೂ ಇದೇ ಮಣ್ಣಿನಲ್ಲಿ ಅಡಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ (ಏ.25): ಐದು ವರ್ಷಕ್ಕೊಮ್ಮೆ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಕನಕಪುರದಲ್ಲಿ ಪ್ರವಾಸ ಮಾಡಿ ಹೋಗ್ತಾರೆ. ಅವರು ಎಷ್ಟು ಸಾರಿ ಬೇಕಾದರು ಬಂದು ಹೋಗಲಿ ನನ್ನದೇನು ಅಭ್ಯಂತರವಿಲ್ಲ. ನಾವು ಮಾತ್ರ ಅವರಂತಲ್ಲ. ಈ ತಾಲೂಕಿನ ಜನರ ಮಕ್ಕಳಾಗಿರುವ ನಮ್ಮ ಬದುಕು, ಜೀವನ, ಪಲ್ಲಕ್ಕಿ, ಕೊನೆಗೆ ಹೆಣ ಎಲ್ಲವೂ ಇದೇ ಮಣ್ಣಿನಲ್ಲಿ ಅಡಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ತುಂಗಣಿ, ಶಿವನಹಳ್ಳಿ ಸಾತನೂರು, ಕೋಡಿಹಳ್ಳಿ, ಹುಣಸನಹಳ್ಳಿ ಹಾಗೂ ತಮ್ಮ ಹುಟ್ಟೂರು ದೊಡ್ಡ ಆಲಹಳ್ಳಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಹಲವು ನಾಯಕರ ವಿರೋಧದ ನಡುವೆಯೂ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು. ನಾನು ಅವರ ಬೆನ್ನಿಗೆ ಚೂರಿಯನ್ನು ಹಾಕಿದ್ದೇನಂತೆ, ನಾನು ಕಲ್ಲು ಹೊಡೆದು ಲೂಟಿ ಮಾಡಿದ್ದೇನಂತೆ. ನನ್ನ 16 ಎಕರೆ ಜಮೀನಿನಲ್ಲಿ ಕಲ್ಲು ಹೊಡೆದಿದ್ದೇನೆಯೇ ಹೊರತು ಬೇರೆಯವರ ಅಥವಾ ಸರ್ಕಾರಿ ಜಮೀನಿನಲ್ಲಿ ಕಲ್ಲು ಹೊಡೆದಿಲ್ಲ. ಒಂದೇ ಒಂದು ರುಪಾಯಿ ಲಂಚ ಯಾರಿಂದಲೂ ಪಡೆದಿಲ್ಲ. ಯಾರು ಏನು ಬೇಕಾದರೂ ಮಾತನಾಡಲಿ, ನೀವು ನನ್ನ ಬೆಂಬಲಕ್ಕೆ ಇದ್ದರೆ ಸಾಕು ಎಂದರು.
ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಅಭ್ಯರ್ಥಿ ಡಿಕೆಸು ಆಪ್ತನ ಮೇಲೆ ಐಟಿ ದಾಳಿ
ಕನಕಪುರ ಮತ್ತು ರಾಮನಗರ ನನ್ನ ಎರಡು ಕಣ್ಣು ಎನ್ನುತ್ತಿದ್ದ ಮಹಾನುಭಾವರು ಈಗ ಚನ್ನಪಟ್ಟಣ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಮೊಮ್ಮಗ ಹಾಸನದಲ್ಲಿ, ಅಳಿಯ ಇಲ್ಲಿ ಸ್ಪರ್ಧಿಸಿದ್ದಾರೆ. ಹೀಗಾದರೆ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು. ಕೇವಲ ಅವರ ಕುಟುಂಬಕ್ಕೆ ದುಡಿಯಲು ಕಾರ್ಯಕರ್ತರು ಇರಬೇಕೆ ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯೋಚಿಸಬೇಕು ಎಂದು ಪರೋಕ್ಷ ವಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಬಿಜೆಪಿಗೆ ಮತ ಹಾಕಿದವರಿಗೂ ಸೇರಿ ಪಕ್ಷಾತೀತವಾಗಿ ಯೋಜನೆ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಕುಮಾರಸ್ವಾಮಿ, ಮೋದಿ ಎಲ್ಲಾ ಬೊಬ್ಬೆ ಹಾಕುತ್ತಿದ್ದರು. ಆದರೀಗ ಅವರೇ ಮೋದಿ ಗ್ಯಾರಂಟಿ ಎಂದು ಹೆಸರು ಹಾಕಿಕೊಳ್ಳುತ್ತಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಕೊಡಲಿದ್ದು ಕೆಲಸ ಇಲ್ಲದ ಯುವಕರಿಗೆ 1 ಲಕ್ಷ, 25 ಲಕ್ಷ ಆರೋಗ್ಯ ಮಿಮೆ ಹಾಗೂ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಹಿಳೆಯರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ಪ್ರಶ್ನಿಸುವ ಛಲ ಬಂದಿದೆ. ಇತ್ತೀಚೆಗೆ ಒಂದು ವಿಡಿಯೋ ನೋಡುತ್ತಿದ್ದೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಹೆಣ್ಣುಮಕ್ಕಳನ್ನು ಮಾಧ್ಯಮದ ಸ್ನೇಹಿತರು ಮಾತನಾಡಿಸಿ ಯಾರಿಗೆ ನಿಮ್ಮ ಮತ ಎಂದಾಗ ಕಾಂಗ್ರೆಸ್‌ಗೆ, ಡಿ.ಕೆ.ಶಿವಕುಮಾರ್ ಗೆ ಎನ್ನುತ್ತಾರೆ. ಅದರಲ್ಲಿ ಒಬ್ಬಾಕೆ ಮಾತ್ರ ಮೋದಿಗೆ ಎಂದಾಗ ಎಲ್ಲಾ ಮಹಿಳೆಯರು ಸೇರಿ ಆಕೆಗೆ ಬಸ್ಸಿನಿಂದ ಕೆಳಗೆ ಇಳಿ ಎನ್ನುತ್ತಾರೆ. ಇದರಿಂದ ಗ್ಯಾರಂಟಿ ಯೋಜನೆಗಳಿಂದ ಹೆಣ್ಣು ಮಕ್ಕಳಿಗೆ ಪ್ರಶ್ನಿಸುವ ಛಲ ಬಂದಿದೆ ಎಂಬುದು ಖಚಿತವಾಗಿದೆ. ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದು ದಳ, ಬಿಜೆಪಿಗೆ ಮತ ಹಾಕುವ ಮಹಿಳೆಯರಿಗೆ ಹೆಣ್ಣು ಮಕ್ಕಳು ಬುದ್ಧಿವಾದ ಹೇಳುವಂತೆ ಮನವಿ ಮಾಡಿದರು.
ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಹೆಸರಿನಲ್ಲಿ ಹೋರಾಟ ಆರಂಭಿಸಿದ ಸಂಸದ ಡಿ.ಕೆ.ಸುರೇಶ್ ಅವರ ಹೋರಾಟಕ್ಕೆ ಉಚ್ಚ ನ್ಯಾಯಾಲಯ ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ ಹಣ ಕೊಡುವಂತೆ ಕೇಂದ್ರದ ಮೋದಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹಣ ಕೊಡಬೇಕಾಗಿಲ್ಲ ಎನ್ನುತ್ತಿದ್ದ ಬಿಜೆಪಿಯವರು ಈಗ ಪರಿಹಾರ ನೀಡುತ್ತೇವೆ ಎಂದು ಹೇಳುತ್ತಿರುವುದು ಅವರ ರಾಜ್ಯ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನಮಗೆ ಕೆಟ್ಟ ಹೆಸರು ತರಲು ಐಟಿ ದಾಳಿ: ಡಿಕೆಶಿ
ಕನಕಪುರ: ನಮಗೆ ಕೆಟ್ಟ ಹೆಸರು ತರಬೇಕು, ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಬಿಜೆಪಿ ಐಟಿ ದಾಳಿ ಮಾಡಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಹಾಗೂ ದಳದವರು ಯಾರೂ ಹಣವನ್ನು ಹಂಚುತ್ತಿಲ್ಲವೇ? ಅವರ ಮನೆಗಳ ಮೇಲೆ ಏಕೆ ದಾಳಿಯಾಗುತ್ತಿಲ್ಲ. ಅವರ ವಿಚಾರದಲ್ಲಿ ಐಟಿ ಅಧಿಕಾರಿಗಳು ಕಣ್ಣು ಮುಚ್ಚಿ ಕೂತಿದ್ದಾರೆ ಎಂದು ಕಿಡಿಕಾರಿದರು.
ಯಾರ ಮನೆಗಳ ಮೇಲೆ ದಾಳಿ ನಡೆಯಬೇಕು ಎಂದು ಪಟ್ಟಿ ಮಾಡಿಕೊಂಡಿದ್ದಾರೆ. ಬೇರೆ ಕಡೆಗಳಲ್ಲಿ ಗುತ್ತಿಗೆದಾರರ ಮನೆಯಲ್ಲಿ ಹಣ ಸಿಕ್ಕರೂ ಇದು ಡಿ.ಕೆ.ಶಿವಕುಮಾರ್ ಅವರ ಹಣವೆಂದು ಹೇಳುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಸುರೇಶ್ ಅವರ ಚಾಲಕನ ಮನೆ ಮೇಲೆ ದಾಳಿ ಮಾಡಿ ಆತನ ಹೆಂಡತಿ ಜುಟ್ಟನ್ನು ಎಳೆದಾಡಿದ್ದು, ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ. ಐಟಿ ಅಧಿಕಾರಿಗಳಿಗೆ ಎಲ್ಲೂ ಹಣ ಸಿಕ್ಕಿಲ್ಲ. ಕೇವಲ ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಲು ಈ ರೀತಿ ದಾಳಿಗಳನ್ನು ಮಾಡುತ್ತಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ದಾಳಿ ಮಾಡುವ ಮೂಲಕ ಬೆದರಿಸುವ ಪ್ರಯತ್ನ ನಡೆಸುತ್ತಿದ್ದು, ಅವರ ಅಭ್ಯರ್ಥಿ ಸೋಲುತ್ತಾರೆ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಜನ ನಮಗೆ ಬಹಳ ಪ್ರೀತಿ ವಿಶ್ವಾಸ ತೋರಿದ್ದಾರೆ. ಅವರ ಆಶೀರ್ವಾದದಿಂದ ಇಡೀ ರಾಜ್ಯದ ಜನಸೇವೆಯನ್ನು ಮಾಡುವ ಅವಕಾಶ ಸಿಕ್ಕಿದೆ. ಇಡೀ ಊರಿಗೆ ಊರೇ ಒಗ್ಗಟ್ಟಿನಿಂದ ಆಶೀರ್ವಾದ ಮಾಡುತ್ತಿದೆ. ಜನರಿಗೆ ನನ್ನ ಮೇಲೆ ನಂಬಿಕೆ ಇದ್ದು ಕ್ಷೇತ್ರ ಹಿಂದೆ ಹೇಗಿತ್ತು. ಈಗ ಯಾವ ರೀತಿ ಬದಲಾವಣೆ ಮಾಡಿದ್ದೇವೆ ಎಂದು ನಮ್ಮ ಜನರಿಗೆ ಗೊತ್ತಿದೆ ಎಂದು ಹೇಳಿದರು.
ಅನೇಕ ಕಡೆಗಳಲ್ಲಿ ನಮ್ಮ ಆಸ್ತಿಗಳನ್ನು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ದಾನ ಮಾಡುವ ಮೂಲಕ ಬಿಟ್ಟುಕೊಟ್ಟಿದ್ದೇವೆ. ನಾವು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿಲ್ಲ ಎಂಬುದು ತಾಲೂಕಿನ ಜನರಿಗೆ ತಿಳಿದಿದೆ ಎಂದರು.
ಮೋದಿ ಸರ್ಕಾರದಿಂದ ಕಾಂಗ್ರೆಸ್‌ಗೆ ಐಟಿ ದಾಳಿ ಬೆದರಿಕೆ: ಸಂಸದ ಡಿ.ಕೆ.ಸುರೇಶ್ ಆಕ್ರೋಶ
ಬಿಜೆಪಿಯವರಾಗಲಿ, ಕುಮಾರಸ್ವಾಮಿ ಅವರಾಗಲಿ ಅವರ ಊರುಗಳಲ್ಲಿ ಇಂತಹ ಕೆಲಸ ಮಾಡಿದ್ದಾರಾ? ನಾವು ನಮ್ಮ ದೇಹ ಇರುವುದೇ ಜನರಿಗಾಗಿ. ನಾವು ಜನರಿಗಾಗಿ ಪ್ರಾಣ ಕೊಡುವುದಕ್ಕೂ ಸಿದ್ಧವಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಈ ವೇಳೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ನಗರಸಭಾ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ಕಾಂಗ್ರೆಸ್ ಮುಖಂಡರಾದ ಬಿ.ಎಸ್.ಗೌಡ, ಹೊಸಕೋಟೆ ಪುರುಷೋತ್ತಮ್, ರಾಯಸಂದ್ರ ರವಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ನೂರಾರು ಮುಖಂಡರು ಕಾರ್ಯಕರ್ತರಿದ್ದರು.