ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ 7 ಮಂದಿ ಸಾವಿನ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಪವಿತ್ರ ಚಾರ್‌ಧಾಮ್ ಯಾತ್ರೆಯ ಮಾರ್ಗದಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಎರಡು ದಿನ ಸ್ಥಗಿತಗೊಳಿಸಿ ಆದೇಶಿಸಿದೆ.
ಡೆಹ್ರಾಡೂನ್: ಕೇದಾರನಾಥದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ 7 ಮಂದಿ ಸಾವಿನ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಪವಿತ್ರ ಚಾರ್‌ಧಾಮ್ ಯಾತ್ರೆಯ ಮಾರ್ಗದಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಎರಡು ದಿನ ಸ್ಥಗಿತಗೊಳಿಸಿ ಆದೇಶಿಸಿದೆ.ಇನ್ನು ಕೇಂದ್ರ ಸರ್ಕಾರವು, ಪತನಕ್ಕಿಡಾದ ಕಾಪ್ಟರ್‌ನ ಮಾತೃ ಸಂಸ್ಥೆಯಾದ ಆರ್ಯನ್ ಏವಿಯೇಷನ್ ಕಾರ್ಯಾಚರಣೆಯನ್ನು ತಕ್ಷಣಕ್ಕೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ ಹಾಗೂ ಇಬ್ಬರು ಪೈಲಟ್ ಮೇಲೆ 6 ತಿಂಗಳು ನಿರ್ಬಂಧ ವಿಧಿಸಿದೆ.
ಕಳೆದ 40 ದಿನದಲ್ಲಿ ಕೇದಾರ ವ್ಯಾಪ್ತಿಯಲ್ಲಿ 5 ಹೆಲಿಕಾಪ್ಟರ್ ಅವಘಡ ಸಂಭವಿಸಿದ ಕಾರಣ ಈ ಕ್ರಮ ಜರುಗಿಸಲಾಗಿದೆ.ಚಾರ್ ಧಾಮಗಳಾದ ಗಂಗೋತ್ರಿ, ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥಗಳ ನಡುವೆ ಯಾತ್ರೆಗೆ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಯುತ್ತದೆ.
ಸಿಎಂ ಖಡಕ್ ಸೂಚನೆ:ದುರಂತದ ಬೆನ್ನಲ್ಲೇ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತುರ್ತು ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಸದ್ಯ ಚಾರ್‌ಧಾಮ್ ಮಾರ್ಗದಲ್ಲಿ ಹವಾಮಾನ ಪರಿಸ್ಥಿತಿ ಕೆಟ್ಟದಾಗಿದ್ದು, ಯಾತ್ರಿಗಳ ಸುರಕ್ಷತೆಯ ದೃಷ್ಟಿಯಿಂದ ಕಾಪ್ಟರ್ ಸೇವೆಯನ್ನು ಎರಡು ದಿನಗಳ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.ಇನ್ನು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವ ಸಿಎಂ ಕಾಪ್ಟರ್‌ಗಳ ಕಾರ್ಯಾಚರಣೆಗಳ ಬಗ್ಗೆ ಪ್ರಮಾಣಿತ ಕಾರ್ಯಾಚರಣ ವಿಧಾನ ( ಎಸ್‌ಒಪಿ) ಕಠಿಣ ಆದೇಶ ಹೊರಡಿಸಬೇಕು. ಜೊತೆಗೆ ನಿರ್ವಹಣೆ ಕಾರಣಕ್ಕೆ ನಿಯಂತ್ರಣ ಮತ್ತು ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇದಾರ ಕಾಪ್ಟರ್ ದುರಂತಕ್ಕೆ ಒಂದೇ ಕುಟುಂಬದ 3 ಬಲಿ
ರುದ್ರಪ್ರಯಾಗ್: ಕೇದಾರನಾಥ ಸಮೀಪದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ 4 ರಾಜ್ಯಗಳ 7 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದೇ ಕುಟುಂಬದ ಮೂವರು, ಕೇದರಾನಾಥ ದೇವಸ್ಥಾನದ ಉದ್ಯೋಗಿ, ಕಾಪ್ಟರ್‌ನ ಪೈಲಟ್ ಇದ್ದಾರೆ.
ಕಾಪ್ಟರ್ ಪತನ ದುರಂತದಲ್ಲಿ ಮಹಾರಾಷ್ಟ್ರದ ಯವತ್ಮಾಳ್ ಮೂಲದ ದಂಪತಿ ಮತ್ತು ಅವರ 2 ವರ್ಷದ ಮಗಳು ಕೂಡ ಬಲಿಯಾಗಿದ್ದಾರೆ. ಸಾರಿಗೆ ಉದ್ಯಮಿ ರಾಜ್ ಕುಮಾರ್ ಜೈಸ್ವಾಲ್, ಅವರ ಪತ್ನಿ ಶ್ರದ್ಧಾ ಮತ್ತು ಮಗಳು ಕಾಶಿ ಸಾವನ್ನಪ್ಪಿದ್ದಾರೆ. ಅವರು ಜೂ.12 ರಂದು ಮಹಾರಾಷ್ಟ್ರದಿಂದ ಕೇದಾರನಾಥಕ್ಕೆ ತೆರಳಿದ್ದರು. ಆದರೆ ಅದೃಷ್ಟವಶಾತ್ ದಂಪತಿಯ ಮಗ ವಿವಾನ್ ಕಾಪ್ಟರ್‌ನಲ್ಲಿ ತೆರಳದೆ ತನ್ನ ಅಜ್ಜನ ಬಳಿಯೇ ಉಳಿದ ಕಾರಣ ದುರಂತದಲ್ಲಿ ಬಚಾವ್ ಆಗಿದ್ದಾರೆ.
ಇನ್ನು ಉಳಿದಂತೆ ಘಟನೆಯಲ್ಲಿ ಬದರಿನಾಥ ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಉದ್ಯೋಗಿ, ಉತ್ತರಾಖಂಡದ ಉಖಿಮಠದ ವಿಕ್ರಮ್ ರಾವತ್, ಉತ್ತರ ಪ್ರದೇಶದ ವಿನೋದ್ ದೇವಿ, ತ್ರಿಷ್ಟಿ ಸಿಂಗ್, ಜೈಪುರ ಮೂಲದ ಪೈಲಟ್ ಕ್ಯಾಪ್ಟರ್ ರಾಜ್‌ಬೀರ್ ಸಿಂಗ್ ಚೌಹಾಣ್ ಬಲಿಗಿದ್ದಾರೆ. ಚೌಹಾಣ್ 15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಾಪ್ಟರ್ ಪೈಲಟ್ ಆಗಿ ಸಾಕಷ್ಟು ಅನುಭವ ಹೊಂದಿದ್ದರು.
