ಕಿತ್ತು ತಿನ್ನೋ ಬಡತನ, ಮತ್ತೊಂದೆಡೆ ಕೆವೈಸಿ ಅಪೂರ್ಣವಾಗಿದ್ದ ಕಾರಣ 90ರ ಅತ್ತೆಗೆ ಕಳೆದ ನಾಲ್ಕು ತಿಂಗಳಿನಿಂದ ಪೆನ್ಶನ್ ಬಂದಿಲ್ಲ. ಅತ್ತೆಗೆ ನಡೆಯಲು ಸಾಧ್ಯವಿಲ್ಲ, ಆಟೋದಲ್ಲಿ ಹೋಗಲು ಹಣವಿಲ್ಲ. ಬೆನ್ನ ಮೇಲೆ ಹೊತ್ತು ಬಿರು ಬಿಸಿಲಿನಲ್ಲಿ ನಡೆದುಕೊಂಡ ಸಾಗಿದ ಹೃದಯವಿದ್ರಾವಕ ಘಟನೆ.

ರಾಯ್‌ಪುರ್ (ಮೇ.24) ಭಾರತದಲ್ಲಿ ಹಲವರು ಪಿಂಚಣಿಗಾಗಿ, ಸರ್ಕಾರದ ಸವಲತ್ತುಗಳಿಗಾಗಿ ಅಲೆದಾಡಿ ಸುಸ್ತಾದ ಘಟನೆಗಳು ಹೊಸದೇನಲ್ಲ. ಕಿತ್ತು ತಿನ್ನುವ ಬಡತನದ ನಡುವೆ ತಮ್ಮ ಪಿಂಚಣಿ ಅಥವಾ ಇತರ ಸೌಲಭ್ಯ ಪಡೆಯಲು ಪಡುವ ಕಷ್ಟ, ಹೃದವಿದ್ರಾವಕ ಘಟನೆಗಳು ಎಂತವವರ ಮನಸ್ಸನ್ನು ಕರಗಿಸುತ್ತೆ. ಇದೀಗ 90ರ ಹರೆಯದ ಅತ್ತೆಗೆ ಪೆನ್ಶನ್ ಬರದೆ ನಾಲ್ಕು ತಿಂಗಳಾಗಿದೆ. ಕಾರಣ ಅಪೂರ್ಣ ಕೆವೈಸಿ. ಅತ್ತೆಗೆ ನಡೆಯಲು ಸಾಧ್ಯವಿಲ್ಲ. ಇತ್ತ ಆಟೋ ಅಥವಾ ಇತರ ವಾಹನದಲ್ಲಿ ತೆರಳಲ್ಲಿ ಹಣವಿಲ್ಲ. ಹೀಗಾಗಿ ಸೊಸೆ ತನ್ನ ಬೆನ್ನಮೇಲೆ ಅತ್ತೆಯನ್ನು ಹೊತ್ತು ಬಿರುಬಿಸಿಲಿನಲ್ಲಿ ನಡೆದುಕೊಂಡೇ ಬ್ಯಾಂಕ್ ತಲುಪಿದ ಘಟನೆ ಚತ್ತೀಸಘಡದ ಸುರ್ಗುಜಾ ಜಿಲ್ಲಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃದ್ಧಾಪ್ಯ ವೇತನ ಪಡೆಯಲು ಹರಸಾಹಸ

ಜಂಗಾಲ್ಪರ ಗ್ರಾಮದ 50 ವರ್ಷದ ಮಹಿಳೆ ಸುಖಮಾನಿಯಾ ತನ್ನ ಅತ್ತೆಯನ್ನು ಬೆನ್ನ ಮೇಲೆ ಹೊತ್ತು ಕಿಲೋಮೀಟರ್ ದೂರ ಸಾಗಿ ಬ್ಯಾಂಕ್ ತಲುಪಿದ್ದಾರೆ. ಅತ್ತೆಗೆ ಕಳೆದ ನಾಲ್ಕು ತಿಂಗಳಿನಿಂದ ವೃದ್ಧಾಪ್ಯ ವೇತನ ಬಂದಿಲ್ಲ. ಪ್ರತಿ ತಿಂಗಳು 500 ರೂಪಾಯಿ ಬರುತ್ತಿತ್ತು. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅತ್ತೆ ಔಷಧಿ ಖರೀದಿಸಲು ದುಡ್ಡಿಲ್ಲ. ಮೂರು ಹೊತ್ತಿನ ಊಟ ಮಾಡುವುದೇ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ತಿಂಗಳ 500 ರೂಪಾಯಿ ಅತ್ಯಂತ ಮುಖ್ಯವಾಗಿತ್ತು. ಆದರೆ ಬ್ಯಾಂಕ್ ಕೈವೈಸಿ ಸಮಸ್ಯೆಯಿಂದ ವೇತನ ಬರದೇ ನಾಲ್ಕು ತಿಂಗಳಾಗಿದೆ. ಕಾದು ಕಾದು ಕೊನೆಗೆ ಬ್ಯಾಂಕ್‌ನಲ್ಲಿ ಬಂದು ವಿಚಾರಿಸಿದಾಗ ಖಾತೆದಾರರ ಕೆವೈಸಿ ಅಗತ್ಯ ಎಂದಿದ್ದಾರೆ.

ಹೀಗಾಗಿ ಅತ್ತೆಯನ್ನು ಬಿರುಬಿಸಿಲಿನಲ್ಲಿ ಬೆನ್ನ ಮೇಲೆ ಹೊತ್ತ ಸುಖಮಾನಿಯಾ ಕಿಲೋಮೀಟರ್ ದೂರ ನಡೆದುಕೊಂಡೇ ಸಾಗಿದ್ದಾರೆ. ಈ ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಿತ್ತು ತಿನ್ನೋ ಬಡತನದಲ್ಲಿ ವೇತನ ಪಡೆಯಲು ಬೇರೆ ದಾರಿ ಇಲ್ಲ. ಅತ್ತೆಗೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಹೊತ್ತುಕೊಂಡು ಬಂದಿದ್ದೇನೆ ಎಂದು ಮಹಿಳೆ ಸುಖಮಾನಿಯಾ ಹೇಳಿದ್ದಾರೆ.

Scroll to load tweet…

ತಕ್ಷಣವೇ 2000 ರೂಪಾಯಿ ಜಮೆ ಮಾಡಿದ ಬ್ಯಾಂಕ್

ಮಹಿಳೆ ವೃದ್ಧೆಯನ್ನು ಬ್ಯಾಂಕ್ ತಲುಪುತ್ತಿದ್ದಂತೆ ಎಲ್ಲೆಡೆ ಸುದ್ದಿಯಾಗಿತ್ತು. ಇತ್ತ ಬ್ಯಾಂಕ್ ಅಧಿಕಾರಿಗಳು ತಕ್ಷಣವೇ ವೃದ್ಧೆಯ ಕೆವೈಸಿ ಪೂರ್ಣಗೊಳಿಸಿದ್ದಾರೆ. ಬಳಿಕ ನಾಲ್ಕು ತಿಂಗಳಿನಿಂದ ಬಾಕಿ ಉಳಿದ 2000 ರೂಪಾಯಿಯನ್ನು ಖಾತೆಗೆ ಜಮೆ ಮಾಡಿದ್ದಾರೆ. ಇದೇ ವೇಳೆ ಬ್ಯಾಂಕ್ ಅಧಿಕಾರಿಗಳು ಮುಂದಿನ ತಿಂಗಳಿನಿಂದ ಪಿಂಚಣಿ ಹಣ ನೇರವಾಗಿ ನಿಮ್ಮ ಮನೆಗೆ ತಲುಪಲಿದೆ. ಕಳೆದ ನಾಲ್ಕು ತಿಂಗಳು ಕೆವೈಸಿ ಕಾರಣದಿಂದ ನಿಂತಿತ್ತು. ಇನ್ನು ಎಂದಿನಂತೆ ಮನೆಗೆ ಹಣ ತಲುಪಲಿದೆ ಎಂದಿದ್ದಾರೆ.

ಸರ್ಕಾರದ ವಿರುದ್ದ ಆಕ್ರೋಶ

ಬ್ಯಾಂಕ್ ಕೆವೈಸಿ ಮಾಡಬೇಕು ನಿಜ. ಆದರೆ ಸ್ಥಳೀಯ ಅಧಿಕಾರಿಗಳು, ಪಂಚಾಯತ್, ತಹಶಿಲ್ದಾರ್, ಜಿಲ್ಲಾಧಿಕಾರಿಗಳು ಎಲ್ಲಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ಒಂದು ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೇ. ಕನಿಷ್ಟ ಸಾರಿಗೆ ಸೌಲಭ್ಯವಾದರೂ ನೀಡಬಹುದಿತ್ತು. ಅಧಿಕಾರಿಗಳಿಗೆ ಹಿರಿಯರ ಮಾಹಿತಿ ಇರುತ್ತದೆ. ಕನಿಷ್ಠ ಕೆಲಸ ಮಾಡಿದರೂ ಇಂತಹ ಹೃದಯವಿದ್ರಾಕ ಘಟನೆ ತಪ್ಪಿಸಬಹುದು ಎಂದು ಮಾಜಿ ಡಿಸಿಎಂ ಟಿಎಸ್ ಸಿಂಗ್ ಡಿಯೋ ಹೇಳಿದ್ದಾರೆ. ಸರ್ಕಾರ ಈ ಕುರಿತು ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.