ಊಟಕ್ಕೆ ಸೋಡಾ ಬೆರೆಸಿ ಉದ್ದೇಶಪೂರ್ವಕ ಅನಾರೋಗ್ಯಕ್ಕೆ ಈಡಾಗುವಂತೆ ಮಾಡಲಾಗುತ್ತಿತ್ತು. ಬಳಿಕ ಅಸ್ವಸ್ಥರಾದವರನ್ನು ಹೆಲಿಕಾಪ್ಟರ್‌ ಮೂಲಕ ಲಿಫ್ಟ್‌ ಮಾಡಿ, ವಿಮಾ ಕಂಪನಿಗಳಿಂದ ಕೋಟಿ ಕೋಟಿ ಸುಲಿಗೆ ಮಾಡುತ್ತಿದ್ದರು. ಟ್ರೆಕ್ಕಿಂಗ್‌ ಏಜೆನ್ಸಿ, ಕಾಪ್ಟರ್‌, ಆಸ್ಪತ್ರೆ, ಶೆರ್ಪಾಗಳ ನಡುವೆ ಈ ಡೀಲ್‌ ಇತ್ತು. 

ನವದೆಹಲಿ (ಏ.3): ಮೌಂಟ್‌ ಎವರೆಸ್ಟ್‌ಗೆ ಚಾರಣಕ್ಕೆಂದು ಹೋದವರ ಜೀವವನ್ನು ಅಪಾಯಕ್ಕೆ ಒಡ್ಡಿ, ವಿಮಾ ಕಂಪನಿಗಳಿಂದ ಕೋಟಿ ಕೋಟಿ ಕಕ್ಕಿಸುತ್ತಿದ್ದ ನೇಪಾಳದ ದೊಡ್ಡ ವಂಚಕರ ಜಾಲವೊಂದು ಇದೀಗ ಬಯಲಾಗಿದೆ. ಚಾರಣಿಗರ ಊಟವೇ ವಿಷವಾಗಿಸಿ, ಅವರು ಅಸ್ವಸ್ಥವಾಗುವಂತೆ ಮಾಡಿ, ವಿಮೆಯ ಹಣವನ್ನು ದೋಚುತ್ತಿದ್ದ ಶೆರ್ಪಾ, ಟ್ರೆಕಿಂಗ್‌ ಆಯೋಜಿಸುತ್ತಿದ್ದ ಕಂಪನಿ, ಹೆಲಿಕಾಪ್ಟರ್‌ ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿ 32 ಜನರ ವಿರುದ್ಧ ನೇಪಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಂಚನೆ ಹೇಗೆ?

ಚಾರಣಿಗರಿಗೆ ನೆರವು ನೀಡಲೆಂದು ಅವರೊಂದಿಗೆ ಹೋಗುತ್ತಿದ್ದ ಶೆರ್ಪಾಗಳು(ಮಾರ್ಗದರ್ಶಕ), ಅವರ ಊಟಕ್ಕೆ ಬೇಕಿಂಗ್‌ ಸೋಡಾ ಬೆರೆಸುತ್ತಿದ್ದರು. ಇದನ್ನು ತಿನ್ನುತ್ತಿದ್ದಂತೆ ಜನರ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಶೆರ್ಪಾಗಳು, ಎತ್ತರದಿಂದಾಗಿ ಉಂಟಾದ ಅಸ್ವಸ್ಥತೆ ಎಂಬಂತೆ ಬಿಂಬಿಸಿ, ಹೆಲಿಕಾಪ್ಟರ್‌ಗಳ ಮೂಲಕ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಮೊದಲೇ ಗಾಬರಿಗೊಂಡಿರುವ ಚಾರಣಿಗರು ಇದಕ್ಕೊಪ್ಪದೆ ಬೇರೆ ದಾರಿ ಇರುತ್ತಿರಲಿಲ್ಲ.

ಪರ್ವತದ ತಪ್ಪಲಿನಿಂದ ಹೀಗೆ ರಕ್ಷಿಸಲ್ಪಟ್ಟವರನ್ನು ನಿಗದಿತ ಆಸ್ಪತ್ರೆಗಳಿಗೆ ದಾಖಲಿಸಿ ಅನಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ಟ್ರೆಕಿಂಗ್‌ ಆಯೋಜಿಸಿದ್ದ ಸಂಸ್ಥೆಗಳು ಹೆಲಿಪಾಪ್ಟರ್‌ ಹಾಗೂ ಆಸ್ಪತ್ರೆ ವೆಚ್ಚದ ನಕಲಿ ಕಡತಗಳನ್ನು ತಯಾರಿಸುತ್ತಿದ್ದರು. ಇದನ್ನು ಬಳಸಿಕೊಂಡು, ಅಂತರಾಷ್ಟ್ರೀಯ ವಿಮಾ ಕಂಪನಿಗಳಿಂದ ವಿಮೆಯ ಬೃಹತ್‌ ಮೊತ್ತವನ್ನು ದೋಚುತ್ತಿದ್ದರು. ಈ ಹಣವು ಶೆರ್ಪಾ, ಟ್ರೆಕ್‌ ಆಯೋಜಕರು, ಹೆಲಿಕಾಪ್ಟರ್‌ ನಿರ್ವಹಿಸುವವರು ಮತ್ತು ಆಸ್ಪತ್ರೆಯ ನಡುವೆ ಹಂಚಿಕೆಯಾಗುತ್ತಿತ್ತು.

ಬಯಲಾಗಿದ್ದು ಹೇಗೆ?

3 ಪರ್ವತ ರಕ್ಷಣಾ ಸಂಸ್ಥೆಗಳ 6 ಕಾರ್ಯನಿರ್ವಾಹಕರನ್ನು ಜನವರಿಯಲ್ಲಿ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಈ ವಂಚನೆಯ ಜಾಲವು ಬಯಲಾಗಿದೆ. ಕಠ್ಮಂಡು ಪೋಸ್ಟ್‌ ವರದಿಯ ಪ್ರಕಾರ, ಈ ಮಾರ್ಗದಲ್ಲಿ ಸುಮಾರು 186 ಕೋಟಿ ರು. ದೋಚಲಾಗಿದೆ. ಒಂದು ರಕ್ಷಣಾ ಕಂಪನಿಯು ಮಾಡಿದ 1,248 ರಕ್ಷಣೆಗಳಲ್ಲಿ 171 ಪ್ರಕರಣಗಳು ನಕಲಿಯಾಗಿದ್ದು, ಇದರಿಂದಲೇ 93 ಕೋಟಿ ರು. ಗಳಿಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣವು ಕೋರ್ಟ್‌ ಮೆಟ್ಟಿಲೇರಿದ್ದು, ಪ್ರತಿಯೊಬ್ಬ ವಂಚಕನ ಮೇಲೆ 105 ಕೋಟಿ ರು. ದಂಡ ವಿಧಿಸುವಂತೆ ಸರ್ಕಾರಿ ವಕೀಲರು ಆಗ್ರಹಿಸಿದ್ದಾರೆ.

ಪರಿಣಾಮವೇನು?

ಅನೇಕ ನೇಪಾಳಿಗರ ಪಾಲಿಗೆ ಚಾರಣವೇ ಜೀವನಾಧಾರವಾದರೂ ಇಂತಹ ಘಟನೆಗಳಿಂದ ಚಾರಣಿಗರ ವಿಶ್ವಾಸ ಕುಸಿಯುತ್ತಿದೆ. ಜತೆಗೆ ಕೆಲ ಅಂತಾರಾಷ್ಟ್ರೀಯ ವಿಮಾ ಕಂಪನಿಗಳು ವಿಮೆ ಕೊಡುವುದನ್ನೇ ನಿಲ್ಲಿಸಿವೆ. 2018ರಲ್ಲಿ ನೇಪಾಳ ಸರ್ಕಾರವು ಚಾರಣಿಗರ ಹೊಣೆಯನ್ನು ಟ್ರೆಕಿಂಗ್‌ ಆಯೋಜಕರಿಗೇ ವಹಿಸಿತ್ತು.