ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಸುಮಿತ್ ಸಭರ್ವಾಲ್ ಅವರ ಅಂತ್ಯಕ್ರಿಯೆಯನ್ನು ಅವರ 88 ವರ್ಷದ ತಂದೆಯೇ ನೆರವೇರಿಸಿದ್ದಾರೆ.

ಮುಂಬೈ: ಜೂನ್‌ 12ರಂದು ಅಹ್ಮದಾಬಾದ್‌ನಲ್ಲಿ 276 ಜನರ ಸಾವಿಗೆ ಕಾರಣವಾದ, ಅಪಘಾತಕ್ಕೀಡಾದ ಏರ್ ಇಂಡಿಯಾ ಡ್ರೀಮ್ ಲೈನ್ ವಿಮಾನದಲ್ಲಿ ಕ್ಯಾಪ್ಟನ್ ಆಗಿದ್ದ ಸುಮಿತ್ ಸಬರ್ವಾಲ್ ಅವರ 88 ವರ್ಷದ ವೃದ್ಧ ತಂದೆ ಕಣ್ಣೀರಿಡುತ್ತಲೇ ತಮ್ಮ ಪುತ್ರನ ಚಿತೆಗೆ ಬೆಂಕಿ ಇಟ್ಟಿದ್ದಾರೆ. ತನಗೆ ಕೊಳ್ಳಿ ಇಡಬೇಕಾದ ಮಗನಿಗೆ ತಾನೇ ಕೊಳ್ಳಿ ಇಡುವಂತಾದ ಅವರ ದುಸ್ಥಿತಿ ಕಂಡು ಅಲ್ಲಿದ್ದವರೆಲ್ಲರ ಕಣ್ಣಂಚುಗಳು ತೇವಗೊಂಡಿದ್ದವು. ಕಣ್ಣಿಂದ ಇಳಿಯುತ್ತಿರುವ ಧಾರಕಾರ ಕಣ್ಣೀರು ನಡುಗುವ ಕೈಗಳಿಂದಲೇ ಅವರು ತಮ್ಮ ಪುತ್ರ ಸುಮಿತ್ ಸಭರ್ವಾಲ್‌ಗೆ ಅಂತಿಮ ನಮನ ಸಲ್ಲಿಸಿದರು.

ಅವರ 56 ವರ್ಷದ ಪುತ್ರ ಕ್ಯಾಪ್ಟನ್ ಪೈಲಟ್‌ ಸುಮಿತ್ ಸಭರ್ವಾಲ್ ಅವರು ತಾವು ಕೆಲ ದಿನಗಳಲ್ಲಿ ಕೆಲಸ ತೊರೆದು ಬಂದು ನಿಮ್ಮ ಜೊತೆಗೆ ಇರುವುದಾಗಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ವೃದ್ಧ ತಂದೆಗೆ ಭರವಸೆ ನೀಡಿದ್ದರು. ಆದರೆ ಅವರ ಸಾವಿನೊಂದಿಗೆ ತಂದೆಗೆ ಅವರು ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ.

ಸುಮಿತ್ ಅಗರ್ವಾಲ್ ಹಾಗೂ ವಿಮಾನದಲ್ಲಿದ್ದ ಸಿಬ್ಬಂದಿ ಪ್ರಯಾಣಿಕರು ಸೇರಿ 241 ಜನ ಈ ದುರಂತದಲ್ಲಿ ಸಾವನ್ನಪ್ಪಿದ್ದರೆ, ಜೊತೆಗೆ ವಿಮಾವೂ ವೈದ್ಯಕೀಯ ವಿದ್ಯಾರ್ಥಿಗಳಿದ್ದ ಹಾಸ್ಟೆಲ್‌ಗೆ ಅಪ್ಪಳಿಸಿದ ಪರಿಣಾಮ ಅಲ್ಲಿದ್ದ 35 ಜನ ಸೇರಿ ಒಟ್ಟು 276 ಜನ ಈ ದುರಂತಕ್ಕೆ ಬಲಿಯಾಗಿದ್ದಾರೆ.

ಡಿಎನ್ಎ ಪರೀಕ್ಷೆಯ ನಂತರ ಸುಮಿತ್ ಸಭರ್ವಾಲ್‌ ಅವರ ಸುಟ್ಟು ಕರಕಲಾದ ಮೃತದೇಹವನ್ನು ಗುರುತಿಸಿದ ನಂತರ ಅವರ ಪಾರ್ಥಿವವನ್ನು ಬೆಳಗ್ಗೆ ವಿಮಾನದ ಮೂಲಕ ಮುಂಬೈಗೆ ತರಲಾಯಿತು. ಅಲ್ಲಿಂದ ಪೊವಾಯಿಯ ಜಲ ವಾಯು ವಿಹಾರ್‌ನಲ್ಲಿರುವ ಅವರ ಮನೆಗೆ ತೆಗೆದುಕೊಂಡು ಹೋಗಲಾಯಿತು.

ಓಬ್ಬ ಮಗನಾಗಿ, ಮಾರ್ಗದರ್ಶಕನಾಗಿ ಮತ್ತು ಅನುಭವಿ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು ತಮ್ಮ ಶಾಂತಗುಣ ಮತ್ತು ಸಂಯಮಕ್ಕೆ ಹೆಸರುವಾಸಿಯಾಗಿದ್ದರು. ಇಂದು ಅವರ ಪಾರ್ಥಿವ ಶರೀರ ಅವರ ಮನೆಗೆ ತಲುಪುತ್ತಿದ್ದಂತೆ ಕುಟುಂಬದವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ತಮ್ಮ ಪ್ರೀತಿಯ ಪೈಲಟ್‌ಗೆ ಅಂತಿಮ ಗೌರವ ಸಲ್ಲಿಸಲು ಅಲ್ಲಿ ಸೇರಿದ್ದರು.

ನನಗೆ ಅವರಿಗೆ ಸಸ್ಯಾಹಾರಿ ಊಟ ಬಡಿಸುವ ಅವಕಾಶ ಸಿಕ್ಕಿತು. ನಾವು ಹಲವು ಬಾರಿ ಒಟ್ಟಿಗೆ ನಡೆದೆವು ಮತ್ತು ಒಟ್ಟಿಗೆ ಊಟ ಮಾಡಿದೆವು ಎಂದು ಸಭರ್ವಾಲ್ ಅವರೊಂದಿಗೆ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿದ್ದನ್ನು ಒಬ್ಬರು ಮಹಿಳೆ ನೆನಪಿಸಿಕೊಂಡರು. ಅವರು ನನ್ನ ಮುಂದೆಯೇ ಕೆಲಸಲ್ಲೆ ಸೇರಿದ್ದರು. ಅವರೊಬ್ಬ ಸಮರ್ಪಿತ ಮಗ, ಬದ್ಧತೆ ಮತ್ತು ಕೌಶಲ್ಯಪೂರ್ಣ ಪೈಲಟ್ ಎಂದು ಅವರು ನೆನಪು ಮಾಡಿಕೊಂಡರು.

ಅವರೊಬ್ಬ ಅದ್ಭುತ ಮತ್ತು ಶುದ್ಧ ಆತ್ಮದ ವ್ಯಕ್ತಿ ಮತ್ತು ಸಂಪೂರ್ಣ ಸಜ್ಜನರು ಬೇಗನೆ ಹೊರಟು ಹೋದರು ಎಂದು ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ತಡೆದುಕೊಳ್ಳಲು ಮಹಿಳೆ ಹೇಳಿದರು.

ಅನುಭವಿ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8,200 ಗಂಟೆಗಳ ಹಾರಾಟದ ಅನುಭವವಿತ್ತು. ಅವರು ಕೆಲ ದಿನಗಳ ನಂತರ ನಿವೃತ್ತಿ ಪಡೆದು ತಮ್ಮ ತಂದೆಯನ್ನು ಪೂರ್ಣ ಸಮಯ ನೋಡಿಕೊಳ್ಳುವುದಕ್ಕೆ ಸಿದ್ಧರಾಗಿದ್ದರು. ಕೆಲವೇ ದಿನಗಳ ಹಿಂದೆ, ಅವರು ತಮ್ಮ ತಂದೆಯನ್ನು ನೋಡಿಕೊಳ್ಳುವುದಕ್ಕಾಗಿ ತಮ್ಮ ಕೆಲಸವನ್ನು ತ್ಯಜಿಸುವುದಾಗಿಯೂ ಹೇಳಿದ್ದರು ಎಂದು ಸಭರ್ವಾಲ್ ದಂಪತಿಗಳ ಮನೆಗೆ ಸಂತಾಪ ಸೂಚಿಸಲು ಬಂದಿದ್ದ ಶಿವಸೇನಾ ಶಾಸಕ ದಿಲೀಪ್ ಲ್ಯಾಂಡೆ ಹೇಳಿದರು.

ಸಭರವಾಲ್‌ಗಳು ವಾಯುಯಾನ ಉದ್ಯಮದೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ ಎಂದು ನೆರೆಮನೆಯವರು ಹೇಳಿದರು. ಕ್ಯಾಪ್ಟನ್ ಸಭರವಾಲ್ ಅವರ ತಂದೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಲ್ಲಿ (ಡಿಜಿಸಿಎ) ಕೆಲಸದಲ್ಲಿದ್ದು ನಂತರ ನಿವೃತ್ತರಾಗಿದ್ದರು, ಅವರ ಇಬ್ಬರು ಸೋದರಳಿಯಂದಿರು ಕೂಡ ಪೈಲಟ್‌ಗಳಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸುಮೀತ್ ವಿಮಾನದಲ್ಲಿ ದೂರ ಹೋದಾಗಲೆಲ್ಲಾ ತನ್ನ ತಂದೆಯ ಮೇಲೆ ನಿಗಾ ಇಡುವಂತೆ ನಮ್ಮನ್ನು ಕೇಳಿಕೊಳ್ಳುತ್ತಿದ್ದರು ಆದರೆ ಈಗ ಅವರ ತಂದೆ ಆಘಾತಕ್ಕೊಳಗಾಗಿದ್ದಾರೆ ಎಂದು ನೆರೆಮನೆಯವರು ಹೇಳಿದ್ದಾರೆ. ವಿಮಾನ ಸಂಪರ್ಕ ಕಡಿತಗೊಳ್ಳುವ ಸ್ವಲ್ಪ ಸಮಯದ ಮೊದಲು ಪೈಲಟ್ ಕ್ಯಾಪ್ಟನ್ ಸಭರ್ವಾಲ್ ವಾಯು ಸಂಚಾರ ನಿಯಂತ್ರಣಕ್ಕೆ "ಮೇಡೇ" ಕರೆ ಮಾಡಿದರು ಎಂದು ಡಿಜಿಸಿಎ ತಿಳಿಸಿದೆ. ಮೇಡೇ ಕರೆಯು ಪ್ರಾಥಮಿಕವಾಗಿ ವಾಯುಯಾನ ಮತ್ತು ಸಮುದ್ರ ಸಂವಹನದಲ್ಲಿ ಜೀವಕ್ಕೆ ಅಪಾಯಕಾರಿ ತುರ್ತು ಪರಿಸ್ಥಿತಿಯನ್ನು ಸೂಚಿಸಲು ಬಳಸುವ ತೊಂದರೆಯ ಸಂಕೇತವಾಗಿದೆ.

ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ, ಅದು ನಿಜ ಕೂಡ ಮಕ್ಕಳ, ಮಗನ ಸಾವಿನ ಶೋಕ ನಿರಂತರವಾದುದು. ಅದನ್ನು ಯಾವುದರಿಂದಲೂ ಭರಿಸಲಾಗದು. ಹೀಗಿರುವಾಗ 88ರ ಇಳಿವಯಸ್ಸಿನಲ್ಲಿ ತಂದೆಗೆ ಊರುಗೋಲಾಗಬೇಕಾದ ಮಗನಿಗೆ ತಂದೆಯೇ ಬೆಂಕಿ ಇಡುವಂತಾಗಿದ್ದು, ವಿಧಿಯ ವಿಪರ್ಯಾಸವೇ ಸರಿ.