found Rs 1 crore cash in car: ದೆಹಲಿ ಕಾರು ಬಾಂಬ್ ಸ್ಫೋಟದ ನಂತರ ಹರಿಯಾಣ ಪೊಲೀಸರು ವಾಹನ ತಪಾಸಣೆಯನ್ನು ತೀವ್ರಗೊಳಿಸಿದ್ದು, ಈ ವೇಳೆ ದೆಹಲಿ ನೋಂದಣಿಯ ಕಾರೊಂದರಲ್ಲಿ ದಾಖಲೆಗಳಿಲ್ಲದ ₹1 ಕೋಟಿ ನಗದು ಪತ್ತೆಯಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ದೆಹಲಿ ಕಾರು ಸ್ಫೋಟದ ನಂತರ ತೀವ್ರಗೊಂಡ ತಪಾಸಣೆ
ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟದ ನಂತರ ದೆಹಲಿಯ ಸುತ್ತಮುತ್ತಲ ರಾಜ್ಯಗಳು ಹಾಗೂ ದೆಹಲಿಯತ್ತ ಬರುವ ಹಾಗೂ ಹೋಗುವ ವಾಹನಗಳತ್ತ ಪೊಲೀಸರು ನಿಗಾ ಇಟ್ಟಿದ್ದಾರೆ. ಅಲ್ಲಲ್ಲಿ ನಾಕಾಬಂಧಿ ಮಾಡಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹೀಗೆ ತಪಾಸಣೆ ಮಾಡುತ್ತಿದ್ದಾಗಲೇ ಕಾರೊಂದರಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ ಭಾರಿ ಮೊತ್ತದ ನಗದು ಸಿಕ್ಕಿದೆ.
ಕಾರಿನಲ್ಲಿ ದಾಖಲೆ ಇಲ್ಲದ ಒಂದು ಕೋಟಿ ನಗದು ಪತ್ತೆ
ಹೌದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ನಂತರ ಹರಿಯಾಣ ಪೊಲೀಸರು ರಾಜ್ಯಾದ್ಯಂತ ಭದ್ರತಾ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಹೀಗಾಗಿ ಮಂಗಳವಾರ ತಡರಾತ್ರಿ ನಗರದಲ್ಲಿ ನಿಯಮಿತ ತಪಾಸಣೆಯ ಸಮಯದಲ್ಲಿ, ದೆಹಲಿ ನೋಂದಣಿ ಸಂಖ್ಯೆಯ ಕಾರೊಂದರಲ್ಲಿ₹1 ಕೋಟಿ ನಗದು ಹಣ ಪತ್ತೆಯಾಗಿದ್ದು, ರೋಹ್ಟಕ್ ಪೊಲೀಸರು ಈ ನಗದನ್ನು ಜಪ್ತಿ ಮಾಡಿದ್ದಾರೆ. ಈ ಕಾರಿನಲ್ಲಿದ್ದ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅನುಮಾನಾಸ್ಪದ ವರ್ತನೆಯಿಂದ ಅನುಮಾನಗೊಂಡ ಪೊಲೀಸರು
ಶಿವಾಜಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯ ಜಲೇಬಿ ಚೌಕ್ ಫ್ಲೈಓವರ್ ಅಡಿಯಲ್ಲಿದ್ದ ಚೆಕ್‌ಪಾಯಿಂಟ್‌ನಲ್ಲಿ ವಾಹನ ತಪಾಸಣೆ ವೇಳೆ ಈ ಭಾರಿ ಮೊತ್ತದ ನಗದು ಪತ್ತೆಯಾಗಿದೆ. ದೆಹಲಿ ಸ್ಫೋಟದ ನಂತರ ಪೊಲೀಸರು ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಚೆಕ್‌ಪಾಯಿಂಟ್‌ಗಳನ್ನು ನಿರ್ಮಿಸಿ ತೀವ್ರ ವಾಹನ ತಪಾಸಣೆಯನ್ನು ಮಾಡುತ್ತಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ರಾಕೇಶ್ ಸೈನಿ ಹೇಳಿದ್ದಾರೆ. ರಾತ್ರಿ 9:30 ರ ಸುಮಾರಿಗೆ, ಪೊಲೀಸರು ಜಜ್ಜರ್‌ನಿಂದ ಬರುತ್ತಿದ್ದ ಟ್ಯಾಕ್ಸಿಯನ್ನು ನಿಲ್ಲಿಸಲು ಸೂಚಿಸಿದಾಗ ಆ ವಾಹನದಲ್ಲಿದ್ದವರ ನಡವಳಿಕೆ ಅನುಮಾನಾಸ್ಪದವಾಗಿತ್ತು. ಚಾಲಕ ಆತಂಕಗೊಂಡಂತೆ ಕಾಣುತ್ತಿದ್ದು, ವೇಗವಾಗಿ ಅಲ್ಲಿಂದ ಹೊರಡುವುದಕ್ಕೆ ಮುಂದಾಗಿದ್ದ. ಹೀಗಾಗಿ ಪೊಲೀಸರು ಕಾರನ್ನು ನಿಲ್ಲಿಸಿ ತೀವ್ರ ತಪಾಸಣೆ ನಡೆಸಿದಾಗ ಮೇಲ್ನೋಟಕ್ಕೆ ಅಲ್ಲಿ ಏನೂ ಕಂಡು ಬಂದಿರಲಿಲ್ಲ, ಆದರೆ ಅವರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದಾಗ ಬೆಚ್ಚಿ ಬೀಳುವ ಸರದಿ ಪೊಲೀಸರದ್ದಾಗಿತ್ತು.
ಅವರ ಬ್ಯಾಗ್‌ಗಳನ್ನು ತೆರೆದಾಗ 500 ರೂಪಾಯಿ ನೋಟುಗಳ ದೊಡ್ಡ ದೊಡ್ಡ ಬಂಡಲ್‌ಗಳು ಅಲ್ಲಿದ್ದವು ಇದರ ಜೊತೆಗೆ 100 ಮತ್ತು 200 ರೂಪಾಯಿ ನೋಟುಗಳ ಕೆಲವು ಬಂಡಲ್‌ಗಳು ಸಹ ಕಂಡುಬಂದವು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಈ ಹಣವನ್ನು ಜಪ್ತಿ ಮಾಡಿದ್ದು, ರೋಹ್ತಕ್‌ನ ಠಾಣೆಯಲ್ಲಿ ಇಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ವ್ಯಕ್ತಿಯ ಮದ್ವೆಯಾಗಿದ್ದ ಭಯೋತ್ಪಾದಕಿ ವೈದ್ಯೆ ಶಾಹೀನ್, ಸೋದರನೂ ವೈದ್ಯ
ಇದನ್ನೂ ಓದಿ: ಪೈಜಾಮವನ್ನು ಎತ್ತಿ ವೋಟ್ ಕೇಳ್ತಿದ್ದವನಿಗೆ ವೃದ್ಧ ಮಾಡಿದ್ದೇನು ನೋಡಿ: ವೀಡಿಯೋ ಭಾರಿ ವೈರಲ್
