ದೆಹಲಿ ಸ್ಫೋಟ, ಫರೀದಾಬಾದ್ ಸ್ಫೋಟಕ ಪ್ರಕರಣದಲ್ಲಿ ಜೈಲು ಸೇರಿದ ವೈದ್ಯೆ ಶಾಹೀನ್ ಸಹೋದರ ಅರೆಸ್ಟ್, ಸತತ ಐದು ಗಂಟೆ ವಿಚಾರಣೆ ನಡೆಸಿ ಪರ್ವೇಜ್‌ನ ಬಂಧಿಸಲಾಗಿದೆ. ದೆಹಲಿ ಸ್ಫೋಟದ ಹಿಂದೆ ಉಗ್ರರ ಕೈವಾಡದ ಹಲವು ಸಾಕ್ಷ್ಯಗಳು ತನಿಖಾ ತಂಡದ ಕೈಸೇರಿದೆ.
ನವದೆಹಲಿ (ನ.11) ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಉಗ್ರರ ಕೈವಾಡ ಒಂದೊಂದಾಗಿ ಕಳಚುತ್ತಿದೆ. ರಹಸ್ಯವಾಗಿ ಕಾರ್ಯಾಚರಣೆ ನಡೆಸಿ ತಲೆಮೆರೆಸಿಕೊಂಡಿರುವ ಉಗ್ರರಿಗೆ ಪೊಲೀಸರ ಹುಡುಕಾಟ ತೀವ್ರಗೊಂಡಿದೆ. ಇದೀಗ ದೆಹಲಿ ಸ್ಫೋಟ ಸಂಬಂಧ ಆರೋಪಿ ವೈದ್ಯ ಶಾಹೀನ್ ಸಹೋದರ ಪರ್ವೇಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಸ್ಫೋಟದಲ್ಲಿ ವೈದ್ಯ ಶಂಕಿತ ಶಾಹೀನ್ ಪ್ರಮುಖ ಆರೋಪಿಯಾಗಿದ್ದಾರೆ. ಇದೀಗ ಒಬ್ಬರ ಹಿಂದೆ ಒಬ್ಬರು ಅರೆಸ್ಟ್ ಆಗುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಎಲ್ಲಾ ಆಯಾಮದಲ್ಲಿ ತನಿಖೆ ತೀವ್ರಗೊಳಿಸಿದೆ.
ಪರ್ವೇಜ್ ನಿವಾಸದ ಮೇಲೆ ದಾಳಿ
ಲಖನೌದಲ್ಲಿರುವ ಪರ್ವೇಜ್ ನಿವಾಸದಲ್ಲಿ ಉತ್ತರ ಪ್ರದೇಶ ಎಟಿಎಸ್, ಜಮ್ಮು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ದಾರೆ. ಬರೋಬ್ಬರಿ 5 ಗಂಟೆಗಳ ಕಾಲ ಪರ್ವೇಜ್ ವಿಚಾರಣೆ ನಡೆಸಿದ್ದಾರೆ. ಪರ್ವೇಜ್ ನಿವಾಸದಲ್ಲೇ ವಿಚಾರಣೆ ನಡಸಲಾಗಿತ್ತು. ವಿಚಾರಣೆ ಬಳಿಕ ಪರ್ವೇಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಫರೀದಾಬಾದ್ ಪ್ರಕರಣ ಬಯಲಾಗುತ್ತಿದ್ದಂತೆ ವಿಚಲಿತಗೊಂಡ ಉಗ್ರರು
ವೈದ್ಯರ ಸೋಗಿನಲ್ಲಿ ಬೆಳಗ್ಗೆ ಜನರಿಗೆ ಸೇವೆ ನೀಡುತ್ತಾ ಪ್ರಾಣ ಉಳಿಸುತ್ತಿದ್ದ ಶಂಕಿತ ಉಗ್ರರು, ರಾತ್ರಿ ಪ್ರಾಣ ತೆಗೆಯುವ ಕೆಲಸ ಮಾಡುತ್ತಿದ್ದರು ಅನ್ನೋದು ಫರೀದಾಬಾದ್ ಸ್ಫೋಟ ಪತ್ತೆ ಪ್ರಕರಣದಲ್ಲಿ ಬಯಲಾಗಿದೆ. ಫರೀದಾಬಾದ್ ಪ್ರಕರಣವನ್ನು ಪೊಲೀಸರು ಬಯಲು ಮಾಡಿ ಬರೋಬ್ಬರಿ 2900 ಕೆಜಿ ಸ್ಫೋಟಕ ವಶಪಡಿಸಿಕೊಂಡ ಬೆನ್ನಲ್ಲೇ ಉಗ್ರರು ಬೆಚ್ಚಿ ಬಿದ್ದಿದ್ದರು. ಯಾರಿಗೂ ತಿಳಿಯದಂತೆ ಎಚ್ಚರ ವಹಿಸಿ ಮಾಡುತ್ತಿದ್ದ ಕಾರ್ಯಾಚರಣೆ ಬಯಲಾಗಿತ್ತು. ಹೀಗಾಗಿ ಸ್ಫೋಟಕವನ್ನು ಸ್ಥಳಾಂತರಿಸಲು ಅಥವಾ ವಿಲೇವಾರಿ ಮಾಡಲು ಪ್ರಯತ್ನಿಸುವಾಗ ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡಿದೆ ಎಂದು ಐ ಬಿ ಮೂಲಗಳ ಮಾಹಿತಿ ನೀಡಿದೆ.
ದೊಡ್ಡ ಮಟ್ಟದಲ್ಲಿ ಅವಘಡ ಸೃಷ್ಟಿಸುವ ಯೋಜನೆಯನ್ನು ಉಗ್ರರು ಹಾಕಿಕೊಂಡಿದ್ದರು. ಶಂಕಿತನ ಐಇಡಿ ಸಂಪರ್ಕ ಅಪೂರ್ಣವಾಗಿತ್ತು ಮತ್ತು ಸರಿಯಾಗಿ ಜೋಡಿಸಲಾಗಿಲ್ಲ ಹಾಗಾಗಿ ಪರಿಣಾಮ ಸೀಮಿತವಾಗಿತ್ತು. ಸರಿಯಾಗಿ ಜೋಡಿಸಿದ್ದರೆ ಪರಿಣಾಮ ಗಂಬೀರವಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಫೋಟದ ಸಮಯದಲ್ಲಿ ವಾಹನವು ಚಾಲನೆಯಲ್ಲಿ ಇದ್ದದ್ದೇ , ಆಕಸ್ಮಿಕ ಸ್ಫೋಟ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ ಎಂದಿದ್ದಾರೆ.
ಐಇಡಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಪೋಟಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವಘಡ ಹಾಗೂ ಅಪಾಯದ ಪ್ರಮಾಣ ಕಡಿಮೆ ಆಗಿದೆ. ಒಂದು ಪ್ರಮುಖ ಮತ್ತು ದೊಡ್ಡ ದಾಳಿಯನ್ನು ತಪ್ಪಿಸಲಾಗಿದೆ. ಶಂಕಿತ ಮಾಡ್ಯೂಲ್‌ಗಳ ನೋಡಿದ್ರೆ ಬಹುದೊಡ್ಡ ಅಪಾಯ ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
