ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರು ಮತ್ತು ಪುರುಷರ ಗುಂಪೊಂದು ಪ್ಲಾಟ್‌ಫಾರ್ಮ್ ಮೇಲೆಯೇ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯಕರ ಘಟನೆ ನಡೆದಿದೆ. ಶೌಚಾಲಯಗಳಿದ್ದರೂ ಈ ರೀತಿ ವರ್ತಿಸಿದ್ದಾರೆ.
ಹರಿದ್ವಾರ (ಜೂ.5): ನಾಗರಿಕ ಪ್ರಜ್ಞೆ ಹಾಗೂ ಸ್ವಚ್ಛತೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ನೂರಾರು ಪ್ರಯಾಣಿಕರು ಓಡಾಡುತ್ತಿರುವಾಗಲೇ, ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಎಸಿ ಕೋಚ್‌ಗೆ (AC Coach) ಹೊಂದಿಕೊಂಡಂತೆ ಪ್ಲಾಟ್‌ಫಾರ್ಮ್ ಮೇಲೆಯೇ ಮಹಿಳೆಯರು ಮತ್ತು ಪುರುಷರ ಗುಂಪು ಸಾಲಾಗಿ ಕುಳಿತು ಟ್ರ್ಯಾಕ್ (ಹಳಿ) ಕಡೆಗೆ ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಶೌಚಾಲಯಗಳ ಸೌಲಭ್ಯವಿದ್ದರೂ, ಜನರು ಪ್ಲಾಟ್‌ಫಾರ್ಮ್ ಮೇಲೆಯೇ ಈ ರೀತಿ ಸಾರ್ವಜನಿಕವಾಗಿ ಮಲಮೂತ್ರ ವಿಸರ್ಜನೆಗೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿದೇಶಿ ಪ್ರವಾಸಿಗರ ಎದುರೇ ಅಸಭ್ಯ ವರ್ತನೆ; ನಿಷ್ಕ್ರಿಯವಾದ ಆರ್‌ಪಿಎಫ್
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಹರಿದ್ವಾರ ನಿಲ್ದಾಣದಲ್ಲಿ ಹಲವಾರು ಪ್ರಯಾಣಿಕರು ರೈಲು ಹತ್ತಲು ಧಾವಿಸುತ್ತಿದ್ದರು. ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಪ್ರವಾಸಿಗರು ಮಾತ್ರವಲ್ಲದೆ, ವಿದೇಶಿ ಪ್ರವಾಸಿಗರು (Foreigners) ಕೂಡ ನಿಲ್ದಾಣದಲ್ಲಿದ್ದರು. ಇವರೆಲ್ಲರ ಕಣ್ಣೆದುರೇ ಯಾವುದೇ ಮರ್ಯಾದೆ ಇಲ್ಲದೆ ಆ ಮುಜುಗರದ ದೃಶ್ಯಗಳು ಸೃಷ್ಟಿಯಾಗಿವೆ.
ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಅಸಭ್ಯ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಬೇಕಾದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಸಿಬ್ಬಂದಿಯಾಗಲಿ ಅಥವಾ ಟಿಕೆಟ್ ಪರೀಕ್ಷಕರಾಗಲಿ (TTE) ಸ್ಥಳದಲ್ಲಿದ್ದು ಇದನ್ನು ತಡೆಯಲು ಮುಂದಾಗಿಲ್ಲ ಎಂದು ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು ರೈಲ್ವೆ ಇಲಾಖೆಯ ಬೇಜವಾಬ್ದಾರಿತನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದು ಮೋದಿ ಪ್ರಯತ್ನಗಳಿಗೆ ಹಿನ್ನಡೆ: ನೆಟ್ಟಿಗರ ಆಕ್ರೋಶ
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ದೇಶವನ್ನು ಪ್ರಗತಿಯತ್ತ ಮುನ್ನಡೆಸಲು ಹಾಗೂ 'ಸ್ವಚ್ಛ ಭಾರತ'ದಂತಹ ಯೋಜನೆಗಳ ಮೂಲಕ ದೇಶದ ಇಮೇಜ್ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ಶ್ರಮಿಸುತ್ತಿದ್ದಾರೆ. ಆದರೆ ಸಾಮಾನ್ಯ ಸಾರ್ವಜನಿಕ ಮರ್ಯಾದೆ ಮತ್ತು ಶಿಸ್ತಿಗೆ ಬೆಲೆ ಕೊಡದ ಇಂತಹ ಜನರಿಂದಾಗಿ ಇಡೀ ದೇಶ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರವೃತ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ಭಾರಿ ದಂಡ ವಿಧಿಸದೇ ಇರುವುದೇ ಇಂತಹ ಘಟನೆಗಳು ಪುನರಾವರ್ತನೆಯಾಗಲು ಪ್ರಮುಖ ಕಾರಣ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಗಳಲ್ಲಿ ಭಾರತೀಯ ಮೂಲದವರು ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಅಗಿದು ಉಗುಳುವ ಮೂಲಕ ದೇಶದ ಹೆಸರನ್ನು ಹಾಳುಗೆಡವುತ್ತಾರೆ ಎಂಬ ಆರೋಪಗಳು ಈಗಾಗಲೇ ಕೇಳಿಬರುತ್ತಿವೆ. ಅದರ ಬೆನ್ನಲ್ಲೇ ದೇಶದ ಒಳಗೂ ಇಂತಹ ಅಸಹ್ಯಕರ ಘಟನೆ ನಡೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮದ ಘನತೆಗೆ ದೊಡ್ಡ ಪೆಟ್ಟು ನೀಡುವುದಂತೂ ಖಂಡಿತ.


