ಬಿಜೆಪಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಅರೆಸ್ಟ್ ಪಠಣ ಕೈಬಿಟ್ಟರೂ ಬಂಧಿಸಿದ ಮುಂಬೈ ಪೊಲೀಸ್ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಆಕ್ರೋಶ
ಮುಂಬೈ(ಏ.24): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮನೆ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಬಿಜೆಪಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ, ಶಾಸಕ ನವನೀತ್ ಅವರನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ.
ಸಿಎಂ ನಿವಾಸ ಮಾತ್ರೋಶ್ರೀ ಎದುರು ಭಾನುವಾರ ಹನುಮಾನ್ ಚಾಲೀಸಾ ಪಠಿಸುವುದಾಗಿ ದಂಪತಿ ಹೇಳಿದ್ದ ಹಿನ್ನೆಲೆಯಲ್ಲಿ, ಶಿವಸೇನೆ ಕಾರ್ಯಕರ್ತರು ಶನಿವಾರ ಭಾರೀ ಪ್ರಮಾಣದಲ್ಲಿ ದಂಪತಿ ನಿವಾಸದ ಎದುರು ಜಮಾಯಿಸಿದ್ದರು. ಹೇಳಿಕೆ ಹಿಂಪಡೆಯದೇ ಇದ್ದಲ್ಲಿ ಮನೆಗೆ ನುಗ್ಗುವ ಎಚ್ಚರಿಕೆ ನೀಡಿದ್ದರು. ಆದರೆ ಭಾನುವಾರ ಮುಂಬೈನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹನುಮಾನ್ ಚಾಲೀಸಾ ಪಠಣ ಕೈಬಿಟ್ಟಿದ್ದಾಗಿ ದಂಪತಿ ಹೇಳಿದ್ದರು. ಇದರ ಹೊರತಾಗಿಯೂ ಪೊಲೀಸರು, ದಂಪತಿ ಮನೆಗೆ ಆಗಮಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಇಂಥ ಪ್ರಕರಣವನ್ನು ನಿಭಾಯಿಸುವ ರೀತಿಯೇ ಬಾಲಿಶವಾಗಿದೆ ಎಂದು ಕಿಡಿಕಾರಿದ್ದಾರೆ.
ಮಸೀದಿಯ 100 ಮೀಟರ್ ಒಳಗೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ
ಮಹಾರಾಷ್ಟ್ರ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆಗೆ ಅನುಮತಿ ಕಡ್ಡಾಯ
ಮೈಕ್ ಬಳಸಿ ಆಜಾನ್ ಕೂಗುವುದಕ್ಕೆ ಕಡಿವಾಣ ಹಾಕದಿದ್ದರೆ ಅದರ ದುಪ್ಪಟ್ಟು ಶಬ್ದದಲ್ಲಿ ಮಸೀದಿಗಳೆದುರು ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂಬ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್)ಯ ಎಚ್ಚರಿಕೆಗೆ ಮಣಿದಿರುವ ಮಹಾರಾಷ್ಟ್ರ ಸರ್ಕಾರ, ರಾಜ್ಯದಲ್ಲಿ ಯಾವುದೇ ಧಾರ್ಮಿಕ ಕೇಂದ್ರ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವೇಳೆ ಮೈಕ್ ಬಳಸಲು ಪೂರ್ವಾನುಮತಿ ಪಡೆದಿರುವುದು ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಒಂದು ವೇಳೆ ಪೂರ್ವಾನಮತಿ ಪಡೆಯದೇ ಮೈಕ್ ಬಳಸಿದರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಮುಂಬೈ ಪೊಲೀಸ್ ಆಯುಕ್ತರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಚರ್ಚಿಸಿ ಒಂದೆರಡು ದಿನದಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯ ಕುರಿತು ಅಧಿಕೃತ ನಿಯಮಾವಳಿ ಪ್ರಕಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಹಾಂಗೀರಪುರಿ ಹಿಂಸಾಚಾರ: ಭಯಾನಕ ಚಿತ್ರಣ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ
ರಾಜ್ ಠಾಕ್ರೆ ಹೋರಾಟ ತೀವ್ರ ಸ್ವರೂಪ
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್‌ಠಾಕ್ರೆ, ‘ನಾನು ಪ್ರಾರ್ಥನೆ ವಿರೋಧಿಸುವುದಲ್ಲ. ನೀವು ನಿಮ್ಮ ಮನೆಯಲ್ಲಿ ಪ್ರಾರ್ಥಿಸಬಹುದು. ಆದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದನ್ನು ಮೈಕ್‌ನಲ್ಲಿ ಪ್ರಸಾರ ಮಾಡುವುದು ಸರಿಯಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಸೀದಿಯಿಂದ ಧ್ವನಿವರ್ಧಕ ತೆಗೆಸಬೇಕು. ಇಲ್ಲದೇ ಹೋದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು, ಮಸೀದಿಗಳ ಮುಂದೆ ಧ್ವನಿವರ್ಧಕಗಳಲ್ಲಿ ಮಸೀದಿ ಧ್ವನಿಗಿಂತ ಡಬ್ಬಲ್ ಜೋರಾಗಿ ಹನುಮಾನ್ ಚಾಲೀಸಾ ಪ್ರಸಾರ ಮಾಡಲಿದ್ದಾರೆ’ ಎಂದು ಎಚ್ಚರಿಸಿದ್ದರು.
ಅಲ್ಲದೇ ಮಹಾರಾಷ್ಟ್ರದಲ್ಲಿರುವ ಮದರಸಾ ಹಾಗೂ ಮಸೀದಿಗಳ ಬಳಿ ರೈಡ್ ಮಾಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ. ಮದರಸಾಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ವಾಸಿಸಿದ್ದಾರೆ. ಸ್ಥಳೀಯ ಶಾಸಕರು ಇವರನ್ನು ಮತ ಬ್ಯಾಂಕ್ ಎಂಬಂತೇ ಬಳಸುತ್ತಿದ್ದಾರೆ. ಆಧಾರ ಕಾರ್ಡ್ ಕೂಡ ಇಲ್ಲದ ಈ ಜನರಿಗೆ ಶಾಸಕರೇ ಆಧಾರ ಕಾರ್ಡ್ ಮಾಡಿಸಿಕೊಳ್ಳಲು ನೆರವಾಗಿದ್ದಾರೆ ಎಂದು ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
