ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥರಾಗಿರುವ ಬೆನಿವಾಲ್, ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಭಾರತದ ಪತ್ನಿಯಾಗಿದೆ ಎಂದು ಹೇಳಿದರು ಮತ್ತು ಸರ್ಕಾರ ಈಗ "ಅವಳನ್ನು ಮನೆಗೆ ತರಬೇಕು" ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ (ಜು.29): ಆಪರೇಷನ್ ಸಿಂಧೂರ್ ಬಗ್ಗೆ ಲೋಕಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದಾಗ, ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಅವರ ಹಾಸ್ಯಚಟಾಕಿ ರಾಜಕೀಯ ವಲಯದ ಎರಡೂ ಕಡೆಯ ನಾಯಕರ ಭಾರೀ ನಗುವಿಗೆ ಕಾರಣವಾಯಿತು. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥರಾಗಿರುವ ಬೆನಿವಾಲ್, ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಈಗ ಭಾರತದ ಪತ್ನಿಯಾಗಿದೆ ಎಂದು ಹೇಳಿದರು ಮತ್ತು ಸರ್ಕಾರ ಈಗ "ಅವಳನ್ನು ಮನೆಗೆ ತರಬೇಕು" ಎಂದು ಹಾಸ್ಯಚಟಾಕಿ ಹಾರಿಸಿದರು.
"ನೀವು ಇದಕ್ಕೆ 'ಆಪರೇಷನ್ ಸಿಂದೂರ್' ಎಂದು ಹೆಸರಿಟ್ಟಿದ್ದೀರಿ. ನನ್ನ ಪ್ರಕಾರ ಪಾಕಿಸ್ತಾನದ ಹಣೆಯ ಮೇಲೆ ಭಾರತ ಸಿಂದೂರ ಹಚ್ಚಿದಂತೆ ಕಂಡಿದೆ. ಹಿಂದೂ ಸಂಪ್ರದಾಯದಲ್ಲಿ, ಒಬ್ಬ ಮಹಿಳೆ ತನ್ನ ಗಂಡನನ್ನು ತನ್ನ ಸಿಂಧೂರ ಎಂದು ಪರಿಗಣಿಸುತ್ತಾಳೆ. ಆದ್ದರಿಂದ ಭಾರತ ಪಾಕಿಸ್ತಾನಕ್ಕೆ ಸಿಂದೂರ ಹಾಕಿದರೆ, ಪಾಕಿಸ್ತಾನ ಈಗ ಅಕ್ಷರಶಃ ಭಾರತದ ಪತ್ನಿಯಾಗಿದೆ. 'ವಿದಾಯಿ' (ವಧುವಿನ ಬೀಳ್ಕೊಡುಗೆ) ಮಾತ್ರ ಬಾಕಿ ಉಳಿದಿದೆ. ಹೋಗಿ ಅವಳನ್ನು ಮನೆಗೆ ಕರೆತನ್ನಿ," ಎಂದು ಬೇನಿವಾಲ್ ಹೇಳುತ್ತಿದ್ದಂತೆ ಲೋಕಸಭಾ ಸದಸ್ಯರು ನಗಲು ಪ್ರಾರಂಭಿಸಿದರು.
ರಾಜಸ್ಥಾನದ ಸಂಸದ ತಮ್ಮ ಹಾಸ್ಯಚಟಾಕಿಯ ವ್ಯಾಖ್ಯಾನವನ್ನು ಮುಂದುವರಿಸಿದಾಗ, ಸದನದಲ್ಲಿ ಬೆನಿವಾಲ್ ಅವರ ನೆರೆಯ ಸದಸ್ಯ, ನಗೀನಾ ಸಂಸದ ಮತ್ತು ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ತಮ್ಮ ನಗು ತಡೆಯಲಾರದೆ ಸುಮ್ಮನಾದರು.
ಭಾಷಣ ಮುಗಿಸಲು ಕೇಳಿದಾಗ, ಬೆನಿವಾಲ್ "ನೀವು ಅರ್ಧ ಗಂಟೆ ಮಾತನಾಡಿದ್ದೀರಿ ಮತ್ತು ನೀವು ನನ್ನನ್ನು ಸುಮ್ಮನಿರಲು ಹೇಳುತ್ತಿದ್ದೀರಾ?" ಎಂದು ಪ್ರಶ್ನಿಸಿದರು. ಅವರ ಸಮಯ ಮುಗಿದಿದೆ ಎಂದು ಸೂಚಿಸಲು ಬಜರ್ ಬಾರಿಸಿದಾಗ, ಅವರು "ಕ್ಯಾ ಹೋ ಗಯಾ? (ಏನಾಯಿತು?)" ಎಂದು ಮರುಪ್ರಶ್ನೆ ಹಾಕಿದರು, ಇದರಿಂದಾಗಿ ಆಜಾದ್ ತಮ್ಮ ಪರವಾಗಿ ಹೆಚ್ಚಿನ ಸಮಯ ಕೇಳಿದರು.
ತಮ್ಮ ಹುದ್ದೆಯ ವೇಳಾಪಟ್ಟಿಯನ್ನು ತಮಾಷೆಯಾಗಿ ಟೀಕಿಸಿದ ಬೆನಿವಾಲ್, "ನೀವು ನನ್ನನ್ನು ಬೆಳಿಗ್ಗೆ 10:30 ಕ್ಕೆ ಮಾತನಾಡುವಂತೆ ಮಾಡುತ್ತಿದ್ದೀರಿ. ನನ್ನ ಹೇಳಿಕೆಗಳು ಪತ್ರಿಕೆಗಳಲ್ಲಿಯೂ ಪ್ರಕಟವಾಗುವುದಿಲ್ಲ. ನನ್ನ ಹೇಳಿಕೆ ತಿಳಿಸಲು ಸೋಶಿಯಲ್ ಮೀಡಿಯಾ ನಿಭಾಯಿಸಬೇಕಾಗುತ್ತದೆ' ಎಂದಾಗ ಮತ್ತೊಮ್ಮೆ ಇಡೀ ಸದನ ನಗುವಿನ ಅಲೆಯಲ್ಲಿ ತೇಲಾಡಿತು.
ಸಂಸದರು ಕೆಲವು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಭದ್ರತಾ ಲೋಪವನ್ನು ಅವರು ಪ್ರಶ್ನಿಸಿದರು ಮತ್ತು ತನಿಖೆಗೆ ಒತ್ತಾಯಿಸಿದರು. ಅಗ್ನಿವೀರ್ ನೇಮಕಾತಿ ಯೋಜನೆಯನ್ನು ಟೀಕಿಸಿದ ಅವರು, ಅದು ಸಶಸ್ತ್ರ ಪಡೆಗಳ ನೈತಿಕತೆಯ ಮೇಲೆ ಪರಿಣಾಮ ಬೀರಿದೆ ಮತ್ತು ಅದನ್ನು ಹಿಂತೆಗೆದುಕೊಳ್ಳಬೇಕೆಂದು ಕರೆ ನೀಡಿದರು.
