- ನನ್ನ ಬಗ್ಗೆ ಕುಟುಂಬಕ್ಕೆ, ಕುಟುಂಬಕ್ಕೆ ನನ್ನ ಬಗ್ಗೆ ಆತಂಕ- ತೀರ್ಪು ನೀಡಿದ ನ್ಯಾಯಾಧೀಶ ರವಿ ಕುಮಾರ್‌ ದಿವಾಕರ್‌ ಹೇಳಿಕೆ- ವಿವಾದಿತ ಗ್ಯಾನವಾಪಿ ವಿಡಿಯೋ ಸಮೀಕ್ಷೆ ಶುರು

ವಾರಾಣಸಿ(ಮೇ.14): ‘ಗ್ಯಾನವಾಪಿ-ಶೃಂಗಾರ ಗೌರಿ ಪ್ರಕರಣದಲ್ಲಿ ತೀರ್ಪು ಘೋಷಿಸಿದ ಬಳಿಕ ಭಯದ ವಾತಾವರಣ ಸೃಷ್ಟಿಯಾಗಿದ್ದು, ಕುಟುಂಬದವರು ನನ್ನ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶ ರವಿ ಕುಮಾರ್‌ ದಿವಾಕರ್‌ ಹೇಳಿದ್ದಾರೆ.

ಗ್ಯಾನವಾಪಿ ಮಸೀದಿಯ ವಿಡಿಯೋಗ್ರಾಫಿ ಸಮೀಕ್ಷೆಯನ್ನು ನಡೆಸಲು ನೇಮಿಸಿದ ಅಡ್ವೊಕೇಟ್‌ ಜನರಲ್‌ ಅವರನ್ನು ಬದಲಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಧೀಶ ದಿವಾಕರ್‌ ಗುರುವಾರ ತಿರಸ್ಕರಿಸಿದ್ದರು. ಜೊತೆಗೆ ಮಸೀದಿಯ ಸಮೀಕ್ಷೆಯನ್ನು ಮೇ17ರ ಒಳಗಾಗಿ ಮುಗಿಸುವಂತೆ ಆದೇಶಿಸಿದ್ದರು.

"

ಗ್ಯಾನ್‌ವಾಪಿ ಮಸೀದಿ ವಿಡಿಯೋ ಸರ್ವೆಗೆ ಕೋರ್ಟ್‌ ಅನುಮತಿ!

ಇದೇ ತೀರ್ಪು ಪ್ರಕಟಿಸುವ ವೇಳೆ ಮಾತನಾಡಿದ ಅವರು, ‘ಈ ಸಿವಿಲ್‌ ಮೊಕದ್ದಮೆ ಅಸಾಧಾರಣ ಪ್ರಕರಣವಾಗಿ ಬದಲಾಗುವ ಮೂಲಕ, ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ. ಈ ತೀರ್ಪಿನ ಬಳಿಕ ಕುಟುಂಬದವರು ನನ್ನ ಬಗ್ಗೆ ಹಾಗೂ ನಾನು ಕುಟುಂಬದವರ ಸುರಕ್ಷತೆಯ ಬಗ್ಗೆ ಚಿಂತಿತನಾಗಿದ್ದೇನೆ. ವಿಡಿಯೋ ಚಿತ್ರೀಕರಣ ನಡೆಯುವ ಸ್ಥಳಕ್ಕೆ ನಾನೂ ಹೋಗುತ್ತೇನೆ ಎಂದು ಭಾವಿಸಿ, ಅಲ್ಲಿಗೆ ಹೋಗದಂತೆ ನನಗೆ ನನ್ನ ಪತ್ನಿ ಮತ್ತು ಪುತ್ರಿ ಸಲಹೆ ನೀಡಿದರು ಎಂದು ದಿವಾಕರ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಗ್ಯಾನವಾಪಿ ಮಸೀದಿ-ಶೃಂಗಾರ ಗೌರಿ ದೇಗುಲದ ಸಮೀಕ್ಷೆ ನಡೆಸುವುದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಚ್‌ ಶುಕ್ರವಾರ ನಿರಾಕರಿಸಿದೆ. ಆದರೆ ಸಮೀಕ್ಷೆ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣಾ ಪಟ್ಟಿಗೆ ಸೇರಿಸಲು ಸಮ್ಮತಿಸಿದೆ.

"

ಇದರ ನಡುವೆಯೇ ಶನಿವಾರದಿಂದ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಗ್ಯಾನವಾಪಿ ಮಸೀದಿ ವಿಡಿಯೋ ಸಮೀಕ್ಷೆಯನ್ನು ವಾರಾಣಸಿ ಕೋರ್ಚ್‌ ನೇಮಿತ ಮೂವರು ಕಮಿಷ್ನರ್‌ಗಳು ಆರಂಭಿಸಲಿದ್ದಾರೆ. ಹೀಗಾಗಿ ಕಾಶಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಕಾಶಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಆದರೆ ವಾರಾಣಸಿ ಕೋರ್ಚ್‌ ಆದೇಶದ ವಿರುದ್ಧ ಮಸೀದಿ ಆಡಳಿತ ಮಂಡಳಿ ರಾಜ್ಯ ಹೈಕೋರ್ಚ್‌ ಮೊರೆ ಹೋಗುವ ಸಾಧ್ಯತೆ ಇದೆ.

ವಾರಣಾಸಿ ಗ್ಯಾನವಾಪಿ ಮಸೀದಿ ಬಳಿ ಪುರಾತನ ಸ್ವಸ್ತಿಕ್ ಪತ್ತೆ, ಸರ್ವೇ ಸ್ಥಗಿತ!

ತಡೆಗೆ ಮೊರೆ:
ಸಮೀಕ್ಷೆ ವಿರುದ್ಧ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಸಂಘಟನೆಗಳ ಪರ ಹಿರಿಯ ನ್ಯಾಯವಾದಿ ಹುಫೇಜಾ ಅಹ್ಮದಿ ವಾದ ಮಂಡಿಸಿದರು. ‘ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಸಮೀಕ್ಷೆಗೆ ವಾರಾಣಸಿ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಬೇಕು. ಪೂಜಾ ಸ್ಥಳ ಕಾಯ್ದೆ ಪ್ರಕಾರ ಇದು ಅನಾದಿ ಕಾಲದಿಂದ ಮಸೀದಿ ಎಂದು ನಮೂದಿಸಲ್ಪಟ್ಟಿದೆ. ಹೀಗಾಗಿ ಅದರ ಸ್ವರೂಪವನ್ನು ಕಾಯ್ದೆ ಪ್ರಕಾರ ಬದಲಿಸಬಾರದು’ ಎಂದು ಕೋರಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ನ್ಯಾ ಎನ್‌.ವಿ. ರಮಣ, ‘ಈ ಬಗ್ಗೆ (ವಾರಾಣಸಿ ಕೋರ್ಚ್‌ ಆದೇಶದ ಬಗ್ಗೆ) ನನಗೇನೂ ಗೊತ್ತಿಲ್ಲ. ಹೀಗಿದ್ದಾಗ ಯಾವ ಆದೇಶ ಪಾಸು ಮಾಡಬೇಕು? ಮೊದಲು ಆದೇಶ ಓದುವೆ. ನಂತರ ನೋಡೋಣ’ ಎಂದು ಹೇಳಿ ವಿಚಾರಣೆ ಮುಂದೂಡಿದರು.

ವಾರಾಣಸಿ ಕೋರ್ಚ್‌ ಆದೇಶದ ಪ್ರಕಾರ, ಕಮಿಷ್ನರ್‌ಗಳ ಸಮಿತಿ ಮೇ 17ರ ಒಳಗೆ ವಿಡಿಯೋ ಸಮೀಕ್ಷೆ ಮುಗಿಸಿ ವರದಿ ಸಲ್ಲಿಸಬೇಕಿದೆ.

ವಿವಾದ ಏನು?:
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಕೆಡವಿ ಅಂದಿನ ಮುಘಲ್‌ ದೊರೆ ಔರಂಗಜೇಬ್‌, ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ. ಈ ಮಸೀದಿಯಲ್ಲಿ ಶೃಂಗಾರ ಗೌರಿ, ಗಣೇಶ ಸೇರಿ ಅನೇಕ ದೇವರ ವಿಗ್ರಹಗಳಿವೆ. ಅವುಗಳ ಪೂಜೆಗೆ ಅವಕಾಶ ನೀಡಬೇಕು ಎಂಬ ಅರ್ಜಿ ವಾರಾಣಸಿ ಕೋರ್ಚ್‌ ಮುಂದಿದೆ. ಈ ಹಿನ್ನೆಲೆಯಲ್ಲಿ ವಿಗ್ರಹಗಳ ಪತ್ತೆಗಾಗಿ ವಿಡಿಯೋ ಸಮೀಕ್ಷೆಗೆ ಕೋರ್ಚ್‌ ಆದೇಶಿಸಿತ್ತು.