ವಾರಣಾಸಿ ಗ್ಯಾನವಾಪಿ ಮಸೀದಿ ಬಳಿ ಪುರಾತನ ಸ್ವಸ್ತಿಕ್ ಪತ್ತೆ, ಸರ್ವೇ ಸ್ಥಗಿತ!
ಪ್ರತಿಭಟನೆಗಳು ತೀವ್ರವಾದ ಹಿನ್ನಲೆಯಲ್ಲಿ ವಾರಣಾಸಿಯ ಗ್ಯಾನವಾಪಿ ಮಸೀದಿ ಬಳಿ ನಡೆಯುತ್ತಿರುವ ಸರ್ವೇ ಸ್ಥಗಿತಗೊಂಡಿದೆ. ಇದರ ನಡುವೆ ಮಸೀದಿ ಬಳಿ ಎರಡು ಪುರಾತನ ಸ್ವಸ್ತಿಕ್ ಗಳ ಕುರುಹುಗಳು ಕಂಡು ಬಂದಿವೆ ಎಂದು ವಿಡಿಯೋ ಸರ್ವೇ ನಡೆಸಿರುವ ವ್ಯಕ್ತಿಗಳು ತಿಳಿಸಿದ್ದಾರೆ.
ವಾರಣಾಸಿ (ಮೇ.8): ವಾರಣಾಸಿಯ ಗ್ಯಾನವಾಪಿ (Gyanvapi Mosque)-ಶೃಂಗಾರ್ ಗೌರಿ ಸಂಕೀರ್ಣದ ಗ್ಯಾನವಾಪಿ ಮಸೀದಿ ಬಳಿ ಸಮೀಕ್ಷೆ ಮತ್ತು ವೀಡಿಯೋಗ್ರಫಿ ಸಮಯದಲ್ಲಿ ಪುರಾತನವಾದ ಎರಡು ಸ್ವಸ್ತಿಕ್ ಗಳ (Ancient swastikas ) ಕುರುಹುಗಳು ಕಂಡುಬಂದಿವೆ ಎಂದು ವರದಿಯಾಗಿದೆ.
ಮಸೀದಿಯ ಬಳಿ ಶನಿವಾರ ಪ್ರತಿಭಟನೆಗಳು ತೀವ್ರವಾದ ಹಿನ್ನಲೆಯಲ್ಲಿ ಸರ್ವೆ ಕಾರ್ಯವನ್ನು ಸ್ಥಗಿತ ಮಾಡಲಾಗಿದೆ ಎಂದು ಕೋರ್ಟ್ ಕಮೀಷನರ್ (Court commissioner) ತಂಡದ ವಿಡಿಯೋಗ್ರಾಫರ್ ಗಳು ತಿಳಿಸಿದ್ದಾರೆ. ಸಮೀಕ್ಷೆ ನಡೆಸುವ ವೇಳೆ, ಮಸೀದಿಯ ಹೊರಗೆ ಎರಡು ಮುಸುಕಾದ ಆದರೆ ಸ್ಪಷ್ಟವಾಗಿ ಚಿತ್ರಣವಾಗಿರುವ ಹಿಂದೂಗಳ ಸ್ವಸ್ತಿಕ್ ಚಿಹ್ನೆಯನ್ನು ಕಂಡಿದ್ದಾರೆ. ಬಹುಶಃ ಹಲವು ವರ್ಷಗಳ ಹಿಂದೆಯೇ ಈ ಸ್ವಸ್ತಿಕ್ ಗಳನ್ನು ಚಿತ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಸ್ಲಿಂ ಪುರುಷರ ಪ್ರತಿಭಟನೆಯಿಂದಾಗಿ ವಕೀಲರ ತಂಡಕ್ಕೆ ಮಸೀದಿಯೊಳಗೆ ಪ್ರವೇಶವನ್ನು ನಿರಾಕರಿಸಿದ ನಂತರ ಗ್ಯಾನವಾಪಿ ಮಸೀದಿಯ ಹೊರಗಿನ ಕೆಲವು ಪ್ರದೇಶಗಳ ವೀಡಿಯೊಗ್ರಫಿ ಮತ್ತು ಸಮೀಕ್ಷೆಯನ್ನು ಶನಿವಾರ ನಿಲ್ಲಿಸಲಾಯಿತು.
ಇದಕ್ಕೂ ಮುನ್ನ, ವಾರಣಾಸಿ ನ್ಯಾಯಾಲಯವು ಗ್ಯಾನವಾಪಿ ಮಸೀದಿಯ ಹೊರಗಿನ ಪ್ರದೇಶಗಳ ವೀಡಿಯೊಗ್ರಫಿ ಮತ್ತು ಸಮೀಕ್ಷೆಯನ್ನು ಮುಂದುವರಿಸಲು ಆದೇಶಿಸಿತ್ತು. ಶುಕ್ರವಾರ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಧಿಕಾರಿ ಮತ್ತು ವಕೀಲರ ತಂಡವು ಪ್ರದೇಶದ ಬಳಿ ತಪಾಸಣೆ ನಡೆಸಿದ ನಂತರ ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆ ಬೀಡು ಬಿಟ್ಟಿತ್ತು.
ಗ್ಯಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಇರುವ ಹಿಂದೂ ದೇವತೆಗಳನ್ನು ಪೂಜಿಸಲು ಅನುಮತಿ ಕೋರಿ ದೆಹಲಿ ಮೂಲದ ಮಹಿಳೆಯರಾದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು ಮಾಡಿದ ಮನವಿಯ ನಂತರ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಲಾಗುತ್ತಿದೆ.
ಅರ್ಜಿದಾರರ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ಈ ಕುರಿತಾಗಿ ಮಾತನಾಡಿದ್ದು, ಮಸೀದಿ ಆಡಳಿತ ಸಮಿತಿಯು, ಕೋರ್ಟ್ ಕಮೀಷನರ್ ಬದಲಾಯಿಸುವಂತೆ ಹೇಳಿದೆ. ಈ ಕುರಿತಾಗಿ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥ ಮಾಡುವವರೆಗೂ ಮಸೀದಿಯ ಸಮೀಕ್ಷೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಕಾಶಿ ಗ್ಯಾನ್‌ವಾಪಿ ಮಸೀದಿ ಒಳಗೆ ಚಿತ್ರೀಕರಣಕ್ಕೆ ಕೋರ್ಟ್ ಆದೇಶ, ಭಾರೀ ವಿರೋಧ!
ಶನಿವಾರ, ವಕೀಲರು ಮತ್ತು ವೀಡಿಯೊಗ್ರಾಫರ್‌ಗಳ ತಂಡವು ಮಸೀದಿಯ ಬಳಿ ಬಂದಾಗ ಮುಸ್ಲಿಂ ಸಮುದಾಯದ ಸುಮಾರು ನೂರಕ್ಕು ಅಧಿಕ ಪುರುಷರು ಮಸೀದಿಯನ್ನು ಸುತ್ತುವರಿದಿದ್ದರು, ಇದರಿಂದಾಗಿ ಅವರು ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಚತುರ್ವೇದಿ ಹೇಳಿದರು. ಅರ್ಜಿದಾರರಲ್ಲಿ ಒಬ್ಬರಾದ ರೇಖಾ ಪಾಠಕ್ ಅವರು ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಪುರುಷರ ಗುಂಪು ಮಸೀದಿ ಪ್ರದೇಶಕ್ಕೆ ಪ್ರವೇಶವನ್ನು ನಿರಾಕರಿಸಿದ ಪರಿಣಾಮವಾಗಿ ಶನಿವಾರ ಸಮೀಕ್ಷೆ ಮತ್ತು ವೀಡಿಯೊಗ್ರಫಿಯನ್ನು ಕೈಗೊಳ್ಳಲಾಗಲಿಲ್ಲ ಎಂದು ಹೇಳಿದರು. ನ್ಯಾಯಾಲಯವು ಈಗ ಮೇ 9 ರಂದು ಈ ವಿಷಯವನ್ನು ಆಲಿಸಲಿದೆ ಮತ್ತು ಅವರು ಗ್ಯಾನವಾಪಿ ಮಸೀದಿಯ ವೀಡಿಯೊಗ್ರಫಿ ಮತ್ತು ಸಮೀಕ್ಷೆಯನ್ನು ಕೈಗೊಳ್ಳಲು ನಿರ್ದಿಷ್ಟ ಆದೇಶವನ್ನು ಕೇಳುತ್ತಾರೆ ಎಂದು ಪಾಠಕ್ ಹೇಳಿದರು.
ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ಮತ್ತೆ ಅಡ್ಡಿ
ಪ್ರಸ್ತುತ ಕೋರ್ಟ್ ಕಮಿಷನರ್ ಆಗಿರುವ ಅಜಯ ಕುಮಾರ್ ಮಿಶ್ರಾ ಅವರ ಬದಲಾಗಿ ಬೇರೊಬ್ಬ ಅಧಿಕಾರಿಯನ್ನು ನೇಮಿಸುವಂತೆ ಗ್ಯಾನವಾಪಿ ಮಸೀದಿ ನಿರ್ವಹಣಾ ಸಮಿತಿಯ ಸದಸ್ಯರು ಸೇರಿದಂತೆ ಮುಸ್ಲಿಂ ಸಮುದಾಯವರು ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಆದೇಶವನ್ನು ಮೇ 9 ರವರೆಗೆ ಕಾಯ್ದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಮಿಶ್ರಾ ಅವರೊಂದಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ವಕೀಲರ ತಂಡವನ್ನು ನೇಮಕ ಮಾಡಿತ್ತು. ಆದರೆ ಮುಸ್ಲಿಂ ಸಮುದಾಯದವರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇವಾಲಯ ಪ್ರವೇಶಿಸಿದ ಅಧಿಕಾರಿಗಳಿಗೆ ವಿಡಿಯೋ ಚಿತ್ರೀಕರಿಸಲು ಸಾಧ್ಯವಾಗಲಿಲ್ಲ.