Faridabad shooting case: ಹರ್ಯಾಣದ ಬಲ್ಲಭಗಢದಲ್ಲಿ, ಹಲವು ತಿಂಗಳುಗಳಿಂದ ಪ್ರೇಮಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ, ಟ್ಯೂಷನ್ ಮುಗಿಸಿ ಬರುತ್ತಿದ್ದ 17 ವರ್ಷದ ಬಾಲಕಿಗೆ ಗುಂಡು ಹಾರಿಸಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಟ್ಯೂಷನ್ ಕ್ಲಾಸ್‌ನಿಂದ ಬರ್ತಿದ್ದ ಅಪ್ರಾಪ್ತೆಯ ಹಿಂಬಾಲಿಸಿ ಗುಂಡೇಟು:
ಹಲವು ತಿಂಗಳಿನಿಂದ ಅಪ್ರಾಪ್ತೆಯನ್ನು ಹಿಂಬಾಲಿಸುತ್ತಿದ್ದ ಯುವಕನೋರ್ವ ಟ್ಯೂಷನ್ ಮುಗಿಸಿ ಬರುತ್ತಿದ್ದ ಆಕೆಗೆ ಬೈಕ್‌ನಲ್ಲಿ ಬಂದು ಗುಂಡಿಕ್ಕಿದಂತಹ ಆಘಾತಕಾರಿ ಘಟನೆ ಹರ್ಯಾಣದ ಫರಿದಾಬಾದ್ ಜಿಲ್ಲೆಯ ಬಲ್ಲಭಗಢದಲ್ಲಿ ನಡೆದಿದೆ. ಘಟನೆಯ ಭಯಾನಕ ದೃಶ್ಯಗಳು ಅಲ್ಲೇ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕೃತ್ಯವೆಸಗಿದ ಆರೋಪಿಯನ್ನು 30 ವರ್ಷದ ಜತಿನ್ ಮಂಗ್ಲಾ ಎಂದು ಗುರುತಿಸಲಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈತ ಹಲವು ತಿಂಗಳುಗಳಿಂದ 17 ವರ್ಷದ ಹುಡುಗಿಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಎಂದು ತಿಳಿದು ಬಂದಿದೆ.
ಹಲವು ತಿಂಗಳಿನಿಂದ ಪ್ರೇಮಿಸುವಂತೆ ಕಿರುಕುಳ
ನಿನ್ನೆ ಸಂಜೆ ಆಕೆ ಕೋಚಿಂಗ್ ಕ್ಲಾಸ್‌ನಿಂದ ವಾಪಸ್ ಬರುತ್ತಿದ್ದಾಗ ಹಿಂಬಾಲಿಸಿದ ಆರೋಪಿ ಜತಿನ್ ಮಂಗ್ಲಾ ಆಕೆಗೆ ಗುಂಡಿಕ್ಕಿದ್ದಾನೆ. ಪೊಲೀಸರ ಪ್ರಕಾರ, ಜತಿನ್ ಮಂಗ್ಲಾ ಈ ವರ್ಷದ ಜೂನ್‌ನಿಂದಲೂ ಈ ಹುಡುಗಿಯನ್ನು ಹಿಂಬಾಲಿಸುತ್ತಿದ್ದ, ಆಕೆ ಓದುತ್ತಿದ್ದ ಕ್ಲಾಸ್‌ಮೇಟ್ ಹೆಸರಿನ ಗ್ರಂಥಾಲಯದಲ್ಲಿ ಆಕೆಯನ್ನು ಆತ ಮೊದಲ ಬಾರಿ ಮಾತನಾಡಿಸಿದ್ದ. ನಾವಿಬ್ಬರು ಮಾತನಾಡಬೇಕು ಮತ್ತು ಒಟ್ಟಿಗೆ ಸಮಯ ಕಳೆಯಬೇಕು ಎಂದು ಆತ ಆಕೆಗೆ ಹಲವು ಬಾರಿ ಅವನು ಒತ್ತಾಯಿಸಿದ್ದ, ಆದರೆ ಆಕೆ ತನಗೆ ಇದರಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಹಲವು ಬಾರಿ ಆತನಿಗೆ ಹೇಳಿದ್ದಳು. ಆದರೂ ಆತ ಹಿಂಬಾಲಿಸಿದಾಗ ಗ್ರಂಥಾಲಯಕ್ಕೆ ಹೋಗುವುದನ್ನೇ ಆಕೆ ಬಿಟ್ಟಿದ್ದಳು. ಆದರೆ ಆತ ಆಕೆ ಹೋದಲೆಲ್ಲಾ ಹಿಂಬಾಲಿಸಿ ಆಕೆಯನ್ನು ಪ್ರೇಮಿಸುವಂತೆ ಪೀಡಿಸುತ್ತಲೇ ಇದ್ದ. ಇವನ ಕಾಟ ತಾಳಲಾರದೇ ಹುಡುಗಿ ಶನಿವಾರ ಈ ವಿಚಾರವನ್ನು ಆಕೆಯ ಮನೆಯವರ ಗಮನಕ್ಕೆ ತಂದಿದ್ದಳು.
ಯುವಕ ಜಿತಿನ್ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದ ಬಾಲಕಿ ಪೋಷಕರು
ಹೀಗಾಗಿ ಮನೆಯವರು ಆ ಯುವಕನ ಕುಟುಂಬದೊಂದಿಗೆ ಈ ವಿಚಾರದ ಬಗ್ಗೆ ಮಾತಾನಾಡಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ನಮ್ಮ ಪೋಷಕರು ಜಿತಿನ್ ತಾಯಿಗೆ ಕರೆ ಮಾಡಿದರು. ಅವರು ಅವನನ್ನು ಬಿಟ್ಟುಬಿಡುವಂತೆ ಬೇಡಿಕೊಂಡರು ಮತ್ತು ಭವಿಷ್ಯದಲ್ಲಿ ಆತ ಇದನ್ನು ಮತ್ತೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಅದೇ ವೇಳೆ ಜತಿನ್ ಕೂಡ ಕ್ಷಮೆ ಕೇಳಿದ್ದ. ಆತನಿಗೆ ತಂದೆ ಇಲ್ಲದ ಕಾರಣ ನಾವು ಆತನ ತಾಯಿ ಮಾತನ್ನೇ ನಂಬಿದ್ದೆವು. ಇದೇ ಕಾರಣಕ್ಕೆ ನಾವು ಪೊಲೀಸರಿಗೂ ಘಟನೆಯ ಬಗ್ಗೆ ವರದಿ ಮಾಡಲಿಲ್ಲ. ಆದರೆ ಅವನು ಗನ್ ಜೊತೆ ಬಂದು ನನ್ನ ಸೋದರಿಗೆ ಗುಂಡು ಹಾರಿಸುತ್ತಾನೆ ಎಂದು ನಾವು ಊಹಿಸಿರಲಿಲ್ಲ ಎಂದು ಯುವತಿಯ ಅಕ್ಕ ಖುಷಿ ಹೇಳಿದ್ದಾರೆ.
ಕುಟುಂಬದ ಮಧ್ಯಸ್ಥಿಕೆಯ ಹೊರತಾಗಿಯೂ, ಸೋಮವಾರ ಆರೋಪಿ ಜಿತಿನ್ ಮಂಗ್ಲಾ ಗನ್ ಹಿಡಿದುಕೊಂಡು ಬಂದು ಯುವತಿಗೆ ಎರಡು ಬಾರಿ ಗುಂಡಿಕ್ಕಿದ್ದಾನೆ. ಘಟನೆ ನಡೆದ ಶ್ಯಾಮ್ ಕಾಲೋನಿಯ ಬೀದಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ದೃಶ್ಯ ಸೆರೆ ಆಗಿದೆ. ಜತಿನ್ ಸಂಜೆ 5 ಗಂಟೆ ಸುಮಾರಿಗೆ ತನ್ನ ಬೈಕ್‌ನಲ್ಲಿ ಅಲ್ಲಿ ಕಾಯುತ್ತಿದಿದ್ದನ್ನು ಕಾಣಬಹುದಾಗಿದೆ. ಯುವತಿ ತನ್ನ ಸ್ನೇಹಿತೆಯ ಜೊತೆ ನಡೆದುಕೊಂಡು ಹೋಗುತ್ತಿರುವಾಗ ಸಮೀಪದಲ್ಲೇ ಬಂದ ಆತ ಗುಂಡು ಹಾರಿಸಿದ್ದಾನೆ.
ನಂತರ ಬಾಲಕಿಯನ್ನು ಸಮೀಪದ ಸರ್ವೋದಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಕೆಯ ಕೈ ಹಾಗೂ ಭುಜಕ್ಕೆ ಗುಂಡು ತಾಗಿದ್ದು, ಪ್ರಸ್ತುತ ಹುಡುಗಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಟೇಕಾಫ್ ಆಗ್ತಿದ್ದಂತೆ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲರೂ ಸಾವು: ಅಹ್ಮದಾಬಾದ್ ಘಟನೆ ನೆನಪಿಸಿದ ಭಯಾನಕ ದೃಶ್ಯ
ಇದನ್ನೂ ಓದಿ: 13ವರ್ಷದಲ್ಲಿ ಶೇ.47 ಲಾಭದೊಂದಿಗೆ 2 ಲಕ್ಸುರಿ ಫ್ಲಾಟ್‌ಗಳ ಸೇಲ್ ಮಾಡಿದ ಅಮಿತಾಭ್ ಬಚ್ಚನ್
