ಗುಜರಾತ್‌ನ ಸೂರತ್‌ನಲ್ಲಿ ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೊರಾ ನಿಗೂಢವಾಗಿ ಸಾವಿಗೆ ಶರಣಾಗಿದ್ದಾರೆ. 

ಸೂರತ್: ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಸಾವಿಗೆ ಶರಣಾದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಮೃತ ರೂಪದರ್ಶಿಯನ್ನು ಅಂಜಲಿ ಅಲ್ಪೇಶ್ ವರ್ಮೊರಾ ಎಂದು ಗುರುತಿಸಲಾಗಿದೆ. ಇವರು ಪ್ರೀಲ್ಯಾನ್ಸಿಂಗ್ ಮಾಡೆಲ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮಾಡೆಲಿಂಗ್‌ಗಾಗಿ ಕೆಲವು ಸ್ಟುಡಿಯೋಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ.

Add Asianetnews Kannada as a Preferred SourcegooglePreferred

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜರ್‌ ಮಾಹಿತಿ ನೀಡಿದ್ದು, ಅಂಜಲಿ ಇತ್ತೀಚೆಗೆ ಭಾವುಕವಾದಂತಹ ಸ್ಟೇಟಸನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾವಿಗೂ ಮೊದಲು ತಮ್ಮ ವಿವಾಹ ನಿಶ್ಚಿತಗೊಂಡಿದ್ದ ಹುಡುಗನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಜೂನ್ 7 ಮತ್ತು 8 ರ ರಾತ್ರಿ 23 ವರ್ಷದ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೋರಾ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ, ಅಂಜಲಿ ಕಳೆದ ಹಲವಾರು ವರ್ಷಗಳಿಂದ ಕೆಲವು ಸ್ಟುಡಿಯೋಗಳೊಂದಿಗೆ ಸಂಬಂಧ ಹೊಂದಿದ್ದು, ಸ್ವತಂತ್ರ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಫ್ಯಾಷನ್ ಶೂಟ್‌ಗಳ ಜೊತೆಗೆ, ಅವರು ಜವಳಿ ಮತ್ತು ವಾಣಿಜ್ಯ ಮಾಡೆಲಿಂಗ್ ಯೋಜನೆಗಳಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜರ್‌ ಹೇಳಿದರು.

ಅಂಜಲಿ ನಿಶ್ಚಿತಾರ್ಥವಾಗಿದ್ದು, ಈ ವರ್ಷವೇ ಅವಳ ಮದುವೆ ನಿಗದಿಯಾಗಿತ್ತು. ಆದರೆ ಹುಡುಗನ ತಾಯಿ ನಿಧನರಾದ ನಂತರ ಮುಂದಿನ ವರ್ಷಕ್ಕೆ ಮದುವೆ ಮುಂದೂಡಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸಾವಿಗೆ ಶರಣಾಗು ಮೊದಲು, ಅಂಜಲಿ ತನ್ನ ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಆ ಸಮಯದಲ್ಲಿ ಅವರು ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ತನಿಖೆಯ ಸಮಯದಲ್ಲಿ, ಆಕೆಯ ಭಾವಿ ಪತಿ, ಆಕೆ ಒತ್ತಡದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದಾಗ ಅವರ ಕುಟುಂಬದವರು ಯಾರೂ ಮನೆಯಲ್ಲಿ ಇರಲಿಲ್ಲ. ಅವರು ಹಿಂದಿರುಗಿದಾಗ, ಕೋಣೆ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ.

ಘಟನೆಯ ಮೊದಲು, ಅಂಜಲಿ ಕೆಲವು ಭಾವುಕ ಪೋಸ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು, ಆದರೆ ಯಾರ ಹೆಸರನ್ನು ಅವರು ನಿರ್ದಿಷ್ಟವಾಗಿ ಉಲ್ಲೇಖಿಸಿರಲಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಕಾರಣವಾದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.