Asianet Suvarna News Asianet Suvarna News

ಭಯೋತ್ಪಾದಕ ಯಾಕೂಬ್‌ ಸಮಾಧಿಗೆ ಮಾರ್ಬಲ್‌, ವಿದ್ಯುತ್‌ ದೀಪದ ಅಲಂಕಾರ, ಇದು ಉದ್ಧವ್‌ ಠಾಕ್ರೆ ಸಾಧನೆ ಎಂದ ಬಿಜೆಪಿ!

ಏಳು ವರ್ಷಗಳ ಹಿಂದೆ ಭಯೋತ್ಪಾದಕ ಯಾಕೂಬ್‌ ಮೆಮೊನ್‌ಗೆ ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡಲಾಯಿತು. ಬಳಿಕ ಇವನ ಶವವನ್ನು ಮರೀನ್‌ ಲೈನ್ಸ್‌ ರೈಲ್ವೇ ಸ್ಟೇಡಷನ್‌ನ ಮುಂಭಾಗದ ಬಡಾ ಸ್ಮಶಾನದ ಏಳು ಎಕರೆ ಪ್ರದೇಶದಲ್ಲಿ ಸಮಾಧಿ ಮಾಡಲಾಗಿತ್ತು. ಈಗ ಮೆಮೂನ್‌ನ ಸಮಾಧಿಯ ಚಿತ್ರ ಸೋಶಿಯಲ್‌ ಮೀಡಿತಾದಲ್ಲಿ ವೈರಲ್‌ ಆಗಿದೆ. ಯಾಕೂಬ್‌ನ ಸಮಾಧಿಗೆ ಮಾರ್ಬಲ್‌ ಅಳವಡಿಸಲಾಗಿದೆ. ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಈ ಚಿತ್ರ ವೈರಲ್‌ ಆದ ಬೆನ್ನಲ್ಲಿಯೇ ಮಹಾರಾಷ್ಟ್ರದಲ್ಲಿ ರಾಜಕೀಯ ಆರಂಭವಾಗಿದೆ.

grave of terrorist Yakub Memon After 7 years of hanging controversy broke out  Shiv Sena and BJP came face to face san
Author
First Published Sep 8, 2022, 5:58 PM IST

ಮುಂಬೈ (ಸೆ.8): ಮುಂಬೈ ನಗರದ ಇತಿಹಾಸದ ಅತ್ಯಂತ ಘೋರ ಭಯೋತ್ಪಾದಕ ದಾಳಿ 1993ರಲ್ಲಿ ನಡೆದಿತ್ತು. ಈ ಸರಣಿ ಬಾಂಬ್‌ ಸ್ಫೋಟದಲ್ಲಿ 257 ಮಂದಿ ಸಾವು ಕಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಯಾಕೂಬ್‌ ಮೆಮೊನ್‌ಗೆ ಮರಣದಂಡನೆ ಶಿಕ್ಷೆ ಜಾರಿಯಾಗಿತ್ತು. ಮುಸ್ಲಿಂ ಸಮುದಾಯಗಳ ತೀವ್ರ ಮೇಲ್ಮನವಿ ಹಾಗೂ ಕಾನೂನು ಹೋರಾಟದ ನಡುವೆಯೂ 2015ರಲ್ಲಿ ಆತನ ಮೇಲಿನ ಶಿಕ್ಷೆಯನ್ನು ಜಾರಿ ಮಾಡಲಾಗಿತ್ತು.  ಏಳು ವರ್ಷಗಳ ಬಳಿಕ ಮತ್ತೆ ಯಾಕೂಬ್‌ ಸುದ್ದಿಯಲ್ಲಿದ್ದಾರೆ. ಭಯೋತ್ಪಾದಕನ ಸಮಾಧಿಗೆ ಮಾಡುತ್ತಿರುವ ಖರ್ಚು ವೆಚ್ಚದ ವಿಚಾರವಾಗಿ ಈಗ ರಾಜಕೀಯ ಶುರುವಾಗಿದೆ.  ಯಾಕೂಬ್‌ ಮೆಮೊನ್‌ನ ಸಮಾಧಿಯನ್ನು ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೋರಿಯನ್ನಾಗಿ ಮಾಡಲಾಗಿದೆ. ಈಗ ಸ್ಮಾರಕ ಮಾಡುವಂಥ ಸಿದ್ಧತೆ ನಡೆಯುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೊಂದೆಡೆ ಶಿವಸೇನೆ ಕೂಡ ಈ ವಿಚಾರದಲ್ಲಿ ತಿರುಗೇಟು ನೀಡಿದ್ದು, ಯಾಕೂಬ್‌ನ ಶವವನ್ನು ಆತನ ಕುಟುಂಬಕ್ಕೆ ಬಿಜೆಪಿಯ ದೇವೇಂದ್ರ ಫಡ್ನವಿಸ್‌ ನೇತೃತ್ವದ ಸರ್ಕಾರವೇ ನೀಡಿತ್ತು ಎಂದು ಆರೋಪಿಸಿದೆ. ಈ ನಡುವೆ ಮುಂಬೈ ಪೊಲೀಸ್‌ ಕೂಡ ಯಾಕೂಬ್‌ನ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡುತ್ತಿರುವ ವಿಚಾರದ ತನಿಖೆಯನ್ನೂ ಆರಂಭ ಮಾಡಿದೆ. 

ಯಾಕೂಬ್‌ ಮೆಮೊನ್‌ಗೆ ಮರಣದಂಡನೆ ಶಿಕ್ಷೆ ಜಾರಿಯಾದ ಬಳಿಕ ಆತನ ಶವವನ್ನು ಸರ್ಕಾರ ಕುಟುಂಬಕ್ಕೆ ನೀಡಿತ್ತು. ಇದಕ್ಕೆ ಅಂದು ವಿರೋಧ ವ್ಯಕ್ತವಾಗಿದ್ದರೂ ಲೆಕ್ಕಿಸಿರಲಿಲ್ಲ. ಮರೀನ್‌ ಲೈನ್ಸ್‌ನ ರೈಲ್ವೇ ಸ್ಟೇಷನ್‌ನ ಮುಂಭಾಗದಲ್ಲಿರುವ ಬಡಾ ಸ್ಮಶಾನದ 7 ಎಕರೆ ಜಾಗದಲ್ಲಿ ಅವನ ಶವವನ್ನು ಹೂಳಲಾಗಿತ್ತು. ಈಗ ಏಳು ವರ್ಷದ ಬಳಿಕ ಆತನ ಸಮಾಧಿಯ ಚಿತ್ರ ವೈರಲ್‌ ಆಗಿದೆ. ಯಾಕೂಬ್‌ನ ಸಮಾಧಿಗೆ ದುಬಾರಿ ವೆಚ್ಚದ ಮಾರ್ಬಲ್‌ಗಳನ್ನು ಹಾಕಲಾಗಿದೆ. ವಿದ್ಯುತ್‌ ದೀಪಗಳಿಂದ ಅದನ್ನು ಅಲಂಕಾರ ಮಾಡಲಾಗಿದೆ. ಇದರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ, ಮಹಾರಾಷ್ಟ್ರದಲ್ಲಿ ರಾಜಕೀಯ ಗುದ್ದಾಟ ಮತ್ತಷ್ಟು ತೀವ್ರವಾಗಿದೆ. ವಿವಾದ ತೀವ್ರವಾಗುವ ಲಕ್ಷಣ ಕಂಡ ಬೆನ್ನಲ್ಲಿಯೇ ಮುಂಬೈ ಪೊಲೀಸ್‌ ಈ ಕುರಿತಾಗಿ ತನಿಖೆ ಆರಂಭಿಸಿದೆ. ಡಿಸಿಪಿ ಶ್ರೇಣಿಯ ಅಧಿಕಾರಿ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಈ ಕುರಿತು ವಕ್ಫ್ ಬೋರ್ಡ್, ಚಾರಿಟಿ ಕಮಿಷನರ್ ಮತ್ತು ಬಿಎಂಸಿಗೆ ಪೊಲೀಸರು ಪ್ರಶ್ನೆ ಮಾಡಲಿದ್ದಾರೆ. 

ಬಿಜೆಪಿ ನಾಯಕ ರಾಮ್ ಕದಂ ಅವರು ಯಾಕೂಬ್ ಸಮಾಧಿಯ ಕೆಲವು ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉದ್ಧವ್ ಠಾಕ್ರೆ ಸಿಎಂ ಆಗಿದ್ದಾಗ ಯಾಕೂಬ್ ಮೆಮನ್ (Yakub Memon) ಸಮಾಧಿಯನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕಾಗಿ ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ಮುಂಬೈ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕ ರಾಮ್ ಕದಂ ಹೇಳಿದ್ದಾರೆ. ಯಾಕೂಬ್ ಮೆಮನ್ ಸಮಾಧಿಯನ್ನು ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಮಹಾರಾಷ್ಟ್ರ (maharashtra) ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ. ಉದ್ಧವ್ ಠಾಕ್ರೆ ಅವರು ಅಧಿಕಾರಕ್ಕೆ ಬಂದ ನಂತರ ತಮ್ಮ ಸಿದ್ಧಾಂತಗಳೊಂದಿಗೆ ಹೇಗೆ ರಾಜಿ ಮಾಡಿಕೊಂಡರು ಎಂಬುದನ್ನು ಇದು ತೋರಿಸುತ್ತದೆ. ಭಯೋತ್ಪಾದಕರನ್ನು ವೈಭವೀಕರಿಸುವ ದೇಶದ್ರೋಹಿಗಳ ಕುರಿತಾಗಿ ಅವರ ನಿಲುವೇನು ಎನ್ನುವುದಕ್ಕೆ ಉದ್ಧವ್ ಠಾಕ್ರೆ ಉತ್ತರಿಸಬೇಕು?ಇಷ್ಟೇ ಅಲ್ಲ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಬಿಜೆಪಿ ಆಗ್ರಹಿಸಿದೆ.

ಲಿಬಿಯಾದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದು ಕೇರಳದ ಯುವಕ, ಐಸಿಸ್ ಮುಖವಾಣಿಯಲ್ಲಿ ಬಹಿರಂಗ!

ಬಿಜೆಪಿ ವಿರುದ್ಧ ಕಾಂಗ್ರೆಸ್‌, ಶಿವಸೇನೆ ಟೀಕೆ:  ಈ ಆರೋಪಕ್ಕೆ ಶಿವಸೇನೆ (Shiv Sena) ಶಾಸಕ ಮತ್ತು ವಕ್ತಾರ ಮನಿಶಾ ಕಯಾಂಡೆ ತಿರುಗೇಟು ನೀಡಿದ್ದಾರೆ. ಭಯೋತ್ಪಾದಕರ ಮೃತ ದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಬಾರದು ಎಂಬುದು ಕೇಂದ್ರ ಸರ್ಕಾರದ ನೀತಿಯಾಗಿದೆ ಎಂದು ಹೇಳಿದರು. ಹೀಗಿದ್ದರೂ ಯಾಕೂಬ್ ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಕೇಂದ್ರದ ನೀತಿ ಇದ್ದರೂ ದೇವೇಂದ್ರ ಫಡ್ನವೀಸ್ (devendra fadnavis)  ಮುಖ್ಯಮಂತ್ರಿಯಾಗಿದ್ದಾಗ ಯಾಕೂಬ್ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದರು. ಸಮಾಧಿಯ ನಿರ್ವಹಣೆಯ ಜವಾಬ್ದಾರಿ ಟ್ರಸ್ಟ್ ಮೇಲಿದೆಯೇ ಹೊರತು ಬಿಎಂಸಿ ಮೇಲಿಲ್ಲ ಎಂದು ಹೇಳಿದ್ದಾರೆ. ಶಿವಸೇನೆ ಹಿಂದೂ ವಿರೋಧಿ (Anti Hindu) ಎಂದು ಸಾಬೀತುಪಡಿಸಲು ಬಿಜೆಪಿ (BJP) ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ. ಮತ್ತೊಂದೆಡೆ, ಇದು ಬಿಜೆಪಿಯ ಉದ್ದೇಶಪೂರ್ವಕ ತಪ್ಪು ಎಂದು ಕಾಂಗ್ರೆಸ್ ವಕ್ತಾರ ಅತುಲ್ ಲೋಧೆ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಇಬ್ಬರು ಭಯೋತ್ಪಾದಕರಾದ ಅಫ್ಜಲ್ ಗುರು ಮತ್ತು ಕಸಬ್‌ನನ್ನು ಗಲ್ಲಿಗೇರಿಸಲಾಯಿತು. ರಹಸ್ಯವಾಗಿ ಸಮಾಧಿ ಮಾಡಲಾಯಿತು. ಒಸಾಮಾ ಬಿನ್ ಲಾಡೆನ್ ವಿಚಾರದಲ್ಲಿಯೂ ಅಮೇರಿಕಾ ಅದೇ ರೀತಿ ಮಾಡಿದೆ. ಆದರೆ ಯಾಕೂಬ್ ಗಲ್ಲಿಗೇರಿದಾಗ ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿ ಉದ್ದೇಶಪೂರ್ವಕವಾಗಿ ಅಂತ್ಯಕ್ರಿಯೆಗೆ ಅವಕಾಶ ನೀಡುವ ಮೂಲಕ ರಾಜಕೀಯಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

26/11 ರೀತಿಯಲ್ಲಿ ಮತ್ತೊಂದು ದಾಳಿಗೆ ಯತ್ನ, ರಾಯಗಢ ಜಿಲ್ಲೆಯನ್ನು ಬ್ಲಾಕ್‌ ಮಾಡಿದ ಪೊಲೀಸ್‌!

ಸ್ಮಶಾನದ ಸಿಬ್ಬಂದಿ ಹೇಳೋದೇನು: ವೈರಲ್ ಫೋಟೋ ಕುರಿತು ಸ್ಮಶಾನದ ಸಿಬ್ಬಂದಿಯನ್ನು ಪ್ರಶ್ನೆ ಮಾಡಲಾಗಿದೆ. ಅಂತಹ ಅನೇಕ ಸಮಾಧಿಗಳಿವೆ, ಅವುಗಳನ್ನು ಅಮೃತಶಿಲೆಯಿಂದ ಅಲಂಕರಿಸಲಾಗಿದೆ ಎಂದು ಹೇಳಿದರು. ಕೆಲವರು ತಮ್ಮ ಸಂಬಂಧಿಕರಿಗಾಗಿ ಸ್ಮಶಾನದಲ್ಲಿ ಬಹಳ ಸಮಯದಿಂದ ಸ್ಥಳವನ್ನು ತೆಗೆದುಕೊಂಡಿದ್ದಾರೆ, ಅದಕ್ಕಾಗಿ ಅವರು ವಾರ್ಷಿಕ ಶುಲ್ಕವನ್ನು ಪಾವತಿಸುತ್ತಾರೆ, ಅದೇ ರೀತಿ ಯಾಕೂಬ್ ಮೆಮನ್ ಸಮಾಧಿ ತೆಗೆದ ಸ್ಥಳವನ್ನು ಬಹಳ ಹಿಂದೆಯೇ ತೆಗೆದುಕೊಳ್ಳಲಾಗಿದೆ, ಯಾಕೂಬ್ ಮೆಮನ್ ಸಮಾಧಿ ಬಳಿ ಇನ್ನೂ 3 ಸಮಾಧಿಗಳಿವೆ.  ಅಲ್ಲಿ ವಿದ್ಯುತ್‌ ಅಲಂಕಾರ ಮಾಡಿಲ್ಲ ಎಂದು ಸ್ಮಶಾನದ ನೌಕರ ಅಶ್ಫಾಕ್ ಹೇಳಿದ್ದಾರೆ. ಇಡೀ ಸ್ಮಶಾನದಲ್ಲಿ ದೀಪಗಳಿವೆ ಸಂಜೆ 6 ರಿಂದ ರಾತ್ರಿ 11ರವರೆಗೆ ಇದು ಉರಿಯುತ್ತದೆ. ನಂತರ ಅದನ್ನು ಆರಿಸಲಾಗುತ್ತದೆ. ಈ ಸಮಯದಲ್ಲಿ ಯಾರನ್ನಾದರೂ ಸಮಾಧಿ ಮಾಡಬೇಕಾದಲ್ಲಿ ಮಾತ್ರವೇ ದೀಪ ಹಾಕಲಾಗುತ್ತದೆ. ಯಾಕೂಬ್‌ನ ಅನೇಕ ಸಂಬಂಧಿಕರು ಬಂದು ಸ್ವಚ್ಛತೆ ನೋಡಿಕೊಳ್ಳುತ್ತಾರೆ. ಹಾಗಾಗಿ ಅದು ಅಷ್ಟು ಸ್ವಚ್ಛವಾಗಿದೆ.  ಶಬ್-ಎ-ಬರಾತ್ ದಿನದಂದು ಇಡೀ ಸ್ಮಶಾನವನ್ನು ಅಲಂಕರಿಸಲಾಗಿದೆ, ದೀಪಗಳನ್ನು ಅಳವಡಿಸಲಾಗಿದೆ. ಅದೇ ದಿನ ತೆಗೆದ ಫೋಟೋ ಇದಾಗಿರಬಹುದು ಎಂದಿದ್ದಾರೆ.

Follow Us:
Download App:
  • android
  • ios