ಬಾಲ್ಯದಲ್ಲಿ ಅಜ್ಜ-ಅಜ್ಜಿಯ ಪ್ರೀತಿ ಸಿಕ್ಕವರಿಗೆ ಈ ವಿಡಿಯೋ ತುಂಬಾ ಹೃದಯಸ್ಪರ್ಷಿಯಾಗಿದೆ. ಅನೇಕ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಈ ವಿಡಿಯೋ ನೋಡಿ ಕಣ್ಣೀರು ತುಂಬಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂಥದ್ದೇನಿದೆ? ಸ್ಟೋರಿ ಓದಿ..

ಅಜ್ಜ-ಅಜ್ಜಿಯ ಗರಡಿಯಲ್ಲಿ ಬೆಳೆಯಲು, ಅವರ ಪ್ರೀತಿಯನ್ನ ಪಡೆಯಲು ಇವತ್ತಿನ ಮೊಮ್ಮಕ್ಕಳಿಗೆ ಅದೃಷ್ಟ ಇರಬೇಕು. ಅಂಥ ಅದೃಷ್ಟ ಎಲ್ಲರಿಗೂ ಸಿಗೋದಿಲ್ಲ. ಇವತ್ತಿನ ಕಾಲದಲ್ಲಿ ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ಸಿಗೋದೇ ಅಪರೂಪ. ಒಂದು ವೇಳೆ ಸಿಕ್ಕರೆ ಅವರಂಥ ಅದೃಷ್ಟದ ಮಕ್ಕಳು ಬೇರೆ ಯಾರೂ ಇರಲ್ಲ!

ಯಾಕೆಂದರೆ.. ಅಜ್ಜ-ಅಜ್ಜಿಯ ಪ್ರೀತಿ, ಕಾಳಜಿ, ಮಮತೆಯ ಮುಂದೆ ಬೇರೆಲ್ಲವೂ ಶೂನ್ಯ ಎನಿಸಿಬಿಡುತ್ತದೆ. ಇದಕ್ಕೆ ಉದಾಹರಣೆ ಅಂದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಆ ವಿಡಿಯೋ ನೋಡಿದ ಬಹುತೇಕ ಮಂದಿ ತಮ್ಮ ಬಾಲ್ಯದ ದಿನಗಳನ್ನ ನೆನಪಿಸಿಕೊಂಡು, ಅಜ್ಜ-ಅಜ್ಜಿಯ ಪ್ರೀತಿಯನ್ನು ನೆನೆದು ಕಣ್ಣೀರು ಇಡುತ್ತಿದ್ದಾರೆ. ಕಣ್ಣಾಲೆಗಳನ್ನ ಒದ್ದು ಮಾಡುತ್ತಿರುವ ವಿಡಿಯೋ ತುಂಬಾ ಹೃದಯಸ್ಪರ್ಷಿಯಾಗಿದೆ.

ಏನಿದೆ ವಿಡಿಯೋದಲ್ಲಿ?

ಮನೆಯಲ್ಲಿ ಅಜ್ಜಿ ಇರುತ್ತಾಳೆ. ಮನೆಯೊಳಗೆ ಎಂಟ್ರಿ ಕೊಡುವ ಮೊಮ್ಮಗ..'ಅಜ್ಜಿ, ಅಜ್ಜಿ ನನಗೆ ನೂರು ರೂಪಾಯಿ ಬೇಕು' ಎಂದು ಕೇಳುತ್ತಾನೆ. ಅದಕ್ಕೆ ಅಜ್ಜಿ 'ಇಲ್ಲ' ಅನ್ನೋದಿಲ್ಲ. 'ಬಾ ಮಗನೇ, ನಾನು ಕೊಡ್ತೀನಿ' ಎಂದು ತನ್ನ ಕಾಬಾರ್ಡ್‌ ಇದ್ದಲ್ಲಿಗೆ ಹೋಗ್ತಾಳೆ. ಅಲ್ಲಿಗೆ ಮೊಮ್ಮಗನೂ ಹೋಗ್ತಾನೆ. ಕಬಾರ್ಡ್ ತೆಗೆಯುವ ಅಜ್ಜಿ.. ಅದರೊಳಗೆ ಹಳೆಯ ಟ್ರಂಕ್ ಒಂದನ್ನ ಇಟ್ಟಿರುತ್ತಾಳೆ. ಆ ಟ್ರಂಕ್ ಹೊರ ತೆಗೆದು ಲಾಕ್ ಓಪನ್ ಮಾಡುತ್ತಾಳೆ. ಬಳಿಕ ಟ್ರಂಕ್ ಒಳಗೆ ತಾನು ಇಟ್ಟಿದ್ದ ಹಣದ ಗಂಟನ್ನು ಬಿಚ್ಚುತ್ತಾಳೆ..

ಭಾವನಾತ್ಮಕವಾಗಿರುವ ವಿಡಿಯೋದಲ್ಲಿ.. ಅಜ್ಜಿ ಗಂಟಲ್ಲಿ ಎಷ್ಟೋ ಹಣ ಕೂಡಿಟ್ಟಿರಬಹುದು ಎಂಬ ಪ್ರಶ್ನೆ ನೋಡುಗರಲ್ಲಿ ಮೂಡುತ್ತದೆ. ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ಗಂಟನ್ನು ಓಪನ್ ಮಾಡಿದಾಗ ಅದರಲ್ಲಿ ಗರಿಗರಿಯಾದ ನೂರು ರೂಪಾಯಿ ಇತ್ತು. ಅಲ್ಲಿರೋದು ಒಂದೇ ನೋಟಾಗಿತ್ತು. ಹೀಗಾಗಿ ವೀಕ್ಷಕರಿಗೋ ಅಯ್ಯೋ ಪಾಪ ಅನಿಸುತ್ತದೆ.. ಆದರೆ ಅಷ್ಟಕ್ಕೆ ಹೃದಯ ಮಿಡಿಯವ ಘಟನೆ ನಿಲ್ಲೋದಿಲ್ಲ. ಮೊಮ್ಮಗನ ಕೈಗೆ ನೂರು ರೂಪಾಯಿ ಇಟ್ಟು 'ಇನ್ನೂ ಬೇಕಾ' ಎಂದು ಕೇಳುತ್ತಾಳೆ. ಆದರೆ ಮೊಮ್ಮಗ ಬೇಡ ಅಜ್ಜಿ ಸಾಕು ಎನ್ನುತ್ತಾನೆ. ಅಜ್ಜಿ ಗಂಟಲ್ಲಿ ಹಣ ಇತ್ತೋ, ಇಲ್ಲವೋ ಅನ್ನೋದು ಆಕೆಗೆ ಮಾತ್ರ ಗೊತ್ತು. ಆದರೆ ಮೊಮ್ಮಗ ಬಂದು ಕೇಳಿದಾಗ ಇಲ್ಲ ಎನ್ನಲಿಲ್ಲ. ತಾನು ಕೊಟ್ಟಿದ್ದು ಆತನಿಗೆ ಸಾಕಾಗುತ್ತೋ ಇಲ್ಲವೋ ಎಂಬ ಕಾಳಜಿ ಅಜ್ಜಿಯದ್ದಾಗಿತ್ತು. ಅದೇ ಕಾರಣಕ್ಕೆ ಎರಡೆರಡು ಬಾರಿ 'ಸಾಕಾ ಬೇಕಾ' ಎಂದು ಮತ್ತೆ ಮತ್ತೆ ಕೇಳುತ್ತಾಳೆ. ಆದರೆ ಮೊಮ್ಮಗ ಹೆಚ್ಚಿನ ಹಣವನ್ನು ಸ್ವೀಕರಿಲಿಲ್ಲ.

ನಮ್ಮ ಹಳ್ಳಿ ಭಾಗದಲ್ಲಿ 'ಅಜ್ಜಿಯ ಗಂಟು', 'ಅಜ್ಜನ ಗಂಟು' ಬಿಚ್ಚಿ ಹಣ ತಗೋಬಾ ಎಂದು ಹೇಳುವ ಮಾತಿದೆ. ಇಲ್ಲಿ ಅಜ್ಜಿ ತನ್ನ ಖರ್ಚಿಫ್ ನಲ್ಲಿ ಹಣವನ್ನು ಕೂಡಿಟ್ಟು ಮೊಮ್ಮಗನಿಗಾಗಿ ಕಾದಿದ್ದಳು. ಇವತ್ತಿಗೂ ನಮ್ಮ ಹಳ್ಳಿ ಕಡೆಗಳಲ್ಲಿ ಅಜ್ಜಿ, ಅಜ್ಜ ಕೊಡುವ ಹಣ ಪ್ರಸಾದ ಎಂದು ಭಾವಿಸಲಾಗುತ್ತದೆ. ಈ ವಿಡಿಯೋ ನೋಡಿದ ಅದೆಷ್ಟೋ ಮಂದಿಗೆ ತಮ್ಮ ಹಿರಿಯರು ಮಗನಿಗಾಗಿ, ಮಗಳಿಗಾಗಿ ಅಥವಾ ಮೊಮ್ಮಕ್ಕಳಿಗಾಗಿ ತಾವು ಆಚೆ ಹೋದಾಗ ಅಪರೂಪದ, ವಿಶೇಷ ವಸ್ತುಗಳು ಅಥವಾ ಸಿಹಿ ತಿಂಡಿಗಳನ್ನ ಸೆರಗಿನಲ್ಲೋ, ಪಂಚೆಯಲ್ಲೋ ಕಟ್ಟಿ ಮನೆಗೆ ಸುರಕ್ಷಿತವಾಗಿ ಪ್ರೀತಿಯಿಂದ ತೆಗೆದುಕೊಡುತ್ತಿದ್ದ ದಿನಗಳನ್ನ ನೆನೆದು ಭಾವುಕರಾಗುತ್ತಿದ್ದಾರೆ.

View post on Instagram