ಗೂಗಲ್ ಮ್ಯಾಪ್‌ ದಾರಿ ತಪ್ಪಿಸಿದ್ದರಿಂದ ಕಾರೊಂದು ನೀರಿಗೆ ಬಿದ್ದಿದೆ. ಮತ್ತೊಂದು ಪ್ರಕರಣದಲ್ಲಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರನ್ನು ಮನೆಯ ಬೌಂಡರಿ ಮೇಲೇರಿಸಿ ನಿಲ್ಲಿಸಿದ್ದಾನೆ.

ಮುಂಬೈ: ಹೊಸ ಜಾಗದಲ್ಲಿ ವಾಹನ ಚಾಲನೆ ಮಾಡುವ ಅನೇಕರು ಗೂಗಲ್‌ ಮ್ಯಾಪ್‌ ಫಾಲೋ ಮಾಡುತ್ತಾರೆ. ಅದು ತೋರಿಸುವ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ ವಾಹನಗಳಲ್ಲಿ ಸಂಚರಿಸುವಾಗ ಗೂಗಲ್ ಮ್ಯಾಪ್ ಫಾಲೋ ಮಾಡಲು ಹೋಗಿ ಸಾವಿನ ಮನೆ ಸೇರಿದ ಹಲವು ಘಟನೆಗಳು ಈಗಾಗಲೇ ನಡೆದಿವೆ. ಆದರೂ ಜನ ಎಚ್ಚೆತ್ತುಕೊಳ್ಳದೇ ಎರಡನೇ ಯೋಚನೆ ಮಾಡದೇ ನೇರವಾಗಿ ಗೂಗಲ್ ಮ್ಯಾಪ್ ಫಾಲೋ ಮಾಡ್ತಾರೆ. ಅದೇ ರೀತಿ ಇಲ್ಲೊಬ್ಬರು ಕಾರು ಸವಾರರು ಗೂಗಲ್ ಮ್ಯಾಪ್ ಫಾಲೋ ಮಾಡಲು ಹೋಗಿ ಕಂದಕಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಕಾರು ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಿಳೆಯ ದಾರಿ ತಪ್ಪಿಸಿದ ಗೂಗಲ್ ಮ್ಯಾಪ್

ಮಹಾರಾಷ್ಟ್ರದ ನವೀ ಮುಂಬೈನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ ಮಹಿಳೆಯೊಬ್ಬರು ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಬೇಲಾಪುರ್‌ದಿಂದ ಉಲ್ವೆಯತ್ತ ಹೊರಟಿದ್ದಾರೆ. ಈ ವೇಳೆ ಅವರು ಬೇಲಾಪುರದ ಬೇ ಬ್ರಿಡ್ಜ್‌ ಮೂಲಕ ಸಾಗಬೇಕಿತ್ತು. ಆದರೆ ಗೂಗಲ್ ಮ್ಯಾಪ್ ಅವರಿಗೆ ಬ್ರಿಡ್ಜ್‌ನ ಕೆಳ ರಸ್ತೆಯನ್ನು ತೋರಿಸಿದೆ. ಇದು ಧ್ರುವತಾರಾ ಜೆಟ್ಟಿ ಬಳಿ ಅವರನ್ನು ಕರೆದೊಯ್ದಿದೆ. ಇದರ ಅರಿವಿಲ್ಲದೇ ಅವರು ಕಾರು ಚಾಲಾಯಿಸಿಕೊಂಡು ಹೋಗಿದ್ದು, ಕೆಲ ನಿಮಿಷಗಳಲ್ಲಿ ಅವರ ಕಾರು ನೀರಿಗಿಳಿದಿದೆ.

ಕ್ರೇನ್ ಬಳಸಿ ಕಾರನ್ನು ಮೇಲೆತ್ತಿದ್ದ ರಕ್ಷಣಾ ಸಿಬ್ಬಂದಿ

ಕೂಡಲೇ ಕರಾವಳಿ ಭದ್ರತಾ ಸಿಬ್ಬಂದಿ ಗಮನಕ್ಕೆ ಈ ವಿಚಾರ ಬಂದಿದ್ದು, ಕೂಡಲೇ ಮಹಿಳೆಯನ್ನು ಕಾರಿನಿಂದ ನೀರಿನಿಂದ ಹೊರಗೆ ತಂದು ರಕ್ಷಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿದ ವೇಳೆ ಮಹಿಳೆ ನೀರಿನಲ್ಲಿ ತೇಲುತ್ತಿದ್ದರು. ಕೂಡಲೇ ಕೆಲ ನಿಮಿಷಗಳಲ್ಲಿ ಅವರನ್ನು ಮೇಲೆತ್ತಲಾಗಿದೆ. ಹಾಗೂ ಅವರಿಗೆ ಯಾವುದೇ ಹಾನಿಯಾಗದೇ ರಕ್ಷಿಸಲ್ಪಟ್ಟಿದ್ದಾರೆ. ಅಲ್ಲದೇ ಆಕೆಯ ಕಾರನ್ನು ಕೂಡ ಮೇಲೆತ್ತಲಾಗಿದೆ. ಕ್ರೇನ್ ಬಳಸಿ ಜೆಟ್ಟಿಗೆ ಬಿದ್ದ ಕಾರನ್ನು ಮೇಲೆಳೆಯುತ್ತಿರುವ ದೃಶ್ಯ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.

Scroll to load tweet…

ಹೀಗೆ ಗೂಗಲ್ ಮ್ಯಾಪ್ ಪ್ರಯಾಣಿಕರ ದಾರಿ ತಪ್ಪಿಸುತ್ತಿರುವುದು ಇದೇ ಮೊದಲಲ್ಲ,ಕಳೆದ ವರ್ಷವೂ ಕಾರೊಂದು ಗೂಗಲ್ ಮ್ಯಾಪ್ ನಂಬಿ ಹೋಗಿ ಸೇತುವೆಯಿಂದ 50 ಅಡಿ ಆಳಕ್ಕೆ ಬಿದ್ದು, ಕಾರಿನಲ್ಲಿದ್ದವರು ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಫಾರಿದಾಪುರ್ ಜಿಲ್ಲೆಯಲ್ಲಿ ನಡೆದಿತ್ತು.

ಕುಡಿದ ಮತ್ತಿನಲ್ಲಿ ಕಾರನ್ನು ಮನೆ ಬೌಂಡರಿ ಮೇಲೆ ಹತ್ತಿಸಿದ ಚಾಲಕ

ಇದು ಗೂಗಲ್ ಮ್ಯಾಪ್ ದಾರಿ ತಪ್ಪಿಸಿದ ಪ್ರಕರಣವಲ್ಲ, ಇದು ಕುಡುಕನೋರ್ವನ ಕಿತಾಪತಿ. ಕುಡಿದ ಮತ್ತಿನಲ್ಲಿ ಚಾಲಕನೋರ್ವ ಮನೆಯ ಕಾಂಪೌಂಡ್ ಮೇಲೆ ಹತ್ತಿಸಿ ನಿಲ್ಲಿಸಿದಂತಹ ವಿಚಿತ್ರ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ದುಂಡಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮೆಡ್ಚಲ್ ಮಲ್ಕಗಿರಿ ಮಧ್ಯೆ ಕುಡಿದ ಮತ್ತಿನಲ್ಲಿ ಚಾಲಕನೋರ್ವ ಕಾಡು ಓಡಿಸಿದ್ದು, ಅದು ಹೇಗೆ ಮನೆಯ ಕಾಂಪೌಂಡ್ ಮೇಲೆ ಏರಿದೆ ಅನ್ನೋದೇ ವಿಚಿತ್ರವಾಗಿದೆ.

ಮನೆಯ ಕಾಂಪೌಂಡ್ ಮೇಲೆ ಕಾರು ನೋಡಿದ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಕ್ರೇನ್ ಸಹಾಯದಿಂದ ಟಾಟಾ ಆಲ್ಟ್ರೋ ಕಾರನ್ನು ಸೇತುವೆಯಿಂದ ಕೆಳಗೆ ಇಳಿಸಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರಿಗೆ ಕಾರು ಕಾಂಪೌಂಡ್ ಏರಿದ್ದು ಹೇಗೆ ಎಂಬುದೇ ಅನೇಕರಿಗೆ ಅಚ್ಚರಿಯಾಗಿದೆ.

Scroll to load tweet…