ಕುಡುಕ ಮಗನಿಗೆ ಬುದ್ಧಿ ಕಲಿಸಲು ಕುಟುಂಬವೊಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಬಹುತೇಕ ಕುಡುಕರಿಗೆ ತಾವು ಕುಡಿದ ಮೇಲೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರುವುದಿಲ್ಲ, ಒಳಗೆ ಹೋದ ಎಣ್ಣೆಯ ಮತ್ತಿನಲ್ಲಿ ಏನೇನೋ ಆಟವಾಡುತ್ತಿರುತ್ತಾರೆ. ಆದರೆ ಈ ಕುಡುಕರ ಹಾವಳಿಯನ್ನು ಅವರ ಕುಟುಂಬ ಸಹಿಸಲೇಬೇಕಾಗುತ್ತದೆ. ಎಣ್ಣೆಯ ಮತ್ತಲ್ಲಿ ಕುಡುಕರಾಡುವ ಆಟವನ್ನು ಅನೇಕರಿಗೆ ಸಹಿಸಿಕೊಳ್ಳುವುದೇ ಬಹಳ ಕಷ್ಟದ ಕೆಲಸವಾಗುತ್ತದೆ. ಕೆಲವರು ಎಣ್ಣೆ ಮತ್ತಲ್ಲಿ ಹುಚ್ಚರಂತೆ ಆಡಿದರೆ ಮತ್ತೆ ಕೆಲವರು ದೆವ್ವ ಮೈ ಮೇಲೆ ಬಂದವರಂತೆ ಆಡಿ ತಮ್ಮ ಆಪ್ತರ ಮೇಲೆ ಹೆಂಡತಿ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ.

ಈ ಕುಡುಕರ ಕರಾಮತ್ತನ್ನು ಸಹಿಸಲು ಸಾಧ್ಯವಾಗದೇ ಹೋದಾಗ ಕೆಲವೊಮ್ಮೆ ಕುಟುಂಬಗಳು ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ. ಕೆಲವರು ಮದ್ಯವರ್ಜನ ಶಿಬಿರಕ್ಕೆ ಸೇರಿಸುತ್ತಾರೆ. ಇನ್ನೂ ಕೆಲವರು ಅವರಿಗೆ ತಿಳಿಯದಂತೆ ಮದ್ದು ಮಾತ್ರೆಗಳನ್ನು ನೀಡಿ ಮದ್ಯದ ವಾಸನೆ ಬಂದ ಕೂಡಲೇ ಕುಡುಕರೇ ಕುಡಿಯಲಾಗದೇ ವಾಂತಿ ಮಾಡಿಕೊಳ್ಳುವಂತೆ ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬ ಕುಡುಕ ಮಗನಿಗೆ ಬುದ್ಧಿ ಕಲಿಸಲು ಬೇರೆಯದ್ದೇ ಟ್ರಿಕ್ ಬಳಕೆ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುಡಿದು ಮಲಗಿದವನನ್ನು ಶವ ಪೆಟ್ಟಿಗೆಯೊಳಗೆ ಕುಟುಂಬದವರು ತುಂಬಿದ್ದು, ಬಳಿಕ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ದುಃಖಪೀಡಿತರಾದಂತೆ ಒಂದೆಡೆ ಸೇರಿದ್ದು, ಕುಡುಕನಿಗೆ ಆತನ ಸಾವಿನ ಅನುಭವ ನೀಡಿದ್ದಾರೆ. ಇತ್ತ ಕುಡಿದು ಪಾನಮತ್ತನಾಗಿ ಮಲಗಿದ್ದವನಿಗೆ ಸ್ವಲ್ಪ ಸಮಯದ ನಂತರ ಕುಡಿದಿದ್ದೆಲ್ಲಾ ಬಿರಿದಿದ್ದು, ಆತನ ನಿಧಾನವಾಗಿ ಶವಪೆಟ್ಟಿಗೆಯಿಂದ ಮೇಲೆದ್ದು ಏನಾಯ್ತು ಎಂಬಂತೆ ನೋಡುತ್ತಿದ್ದಾನೆ. ಆದರೆ ಆತನನ್ನು ನೋಡಿದರು ಆತ ತಮಗೆ ಕಾಣುತ್ತಿಲ್ಲ ಎಂಬಂತಹ ಅನುಭವವನ್ನು ಆತನ ಕುಟುಂಬದವರು ಬಂಧುಗಳು ಆತನಿಗೆ ನೀಡಿದ್ದಾರೆ.

ಆತ ನಿಧಾನವಾಗಿ ಶವ ಪೆಟ್ಟಿಗೆಯಿಂದ ಮೇಲೆ ಎದ್ದು ಸುತ್ತ ಮುತ್ತಲೂ ನೋಡುತ್ತಿದ್ದಾನೆ. ತನ್ನ ಕುಟುಂಬದವರು ಬಂಧುಗಳು ಎಲ್ಲರೂ ಅಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಸೇರಿದಂತೆ ಕಾಣುತ್ತಿದ್ದು, ಆತ ಎಲ್ಲರನ್ನು ನೋಡುತ್ತಿದ್ದಾನೆ. ಅವರೆಲ್ಲರೂ ಆತನನ್ನು ನೋಡಿದರು, ಆತ ತಮಗೆ ಕಾಣುತ್ತಿಲ್ಲ ಎಂಬಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಡೆಗೆ ಆತ ಶವಪೆಟ್ಟಿಗೆಯಿಂದ ಮೇಲೆದ್ದು, ಕೆಳಗಿಳಿಯುತ್ತಾ ತನ್ನ ಕುಟುಂಬದವರು ಕುಳಿತ ಕಡೆಗೆ ಬರುತ್ತಿದ್ದಾನೆ. ಎಲ್ಲರ ಸಮೀಪ ಆತ ಹೋದರೂ ಆತ ತಮಗೆ ಕಾಣುತ್ತಿದ್ದಾನೆ ಎಂಬುದನ್ನು ಯಾರೂ ಆತನ ಮುಂದೆ ತೋರಿಸಿಕೊಳ್ಳುತ್ತಿಲ್ಲ. ಇದರಿಂದ ಆತನಿಗೆ ತಾನು ಸತ್ತು ಆತ್ಮವಾಗಿ ಸಂಚರಿಸುತ್ತಿದ್ದೇನೆಯೇ ನಾನು ಯಾರಿಗೂ ಏಕೆ ಕಾಣುತ್ತಿಲ್ಲ ಎಂಬ ಗೊಂದಲ ಉಂಟಾಗಿದೆ.

ಅದಕ್ಕಾಗಿ ಆತ ತನಗಾದ ಗೊಂದಲದ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಲು ಅಮ್ಮ ಕುಳಿತಿದ್ದಲ್ಲಿಗೆ ಹೋಗಿ ಮಾಮ್ ಮಾಮ್ ಎಂದು ಅಮ್ಮನನ್ನು ಕರೆಯುತ್ತಾನೆ. ಅವರು ಕೂಡ ಮಗ ಹೊರಟು ಹೋದ ಎಂಬಂತೆ ಆತನ ಮಾತು ತನಗೆ ಕೇಳುತ್ತಿಲ್ಲ ಎಂಬಂತೆ ಗರಬಡಿದವರಂತೆ ಕುಳಿತಿದ್ದು ನೋಡಿ ಆತನ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ಕಡೆಗೂ ಆತ ತನ್ನ ಅಪ್ಪನ ಬಳಿ ಹೋಗಿದ್ದು, ಅಲ್ಲಿ ಆತನ ತಂದೆ ಆತನ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಆತನಿಗೆ ತಾನು ಬದುಕಿದ್ದೇನೆ ಎಂಬ ಖುಷಿ ಆಗಿದ್ದು, ಇದೇ ಸಮಯದಲ್ಲಿ ಆತನ ಸ್ನೇಹಿತರು, ಪ್ರೀತಿಪಾತ್ರರು, ಕುಟುಂಬದವರು ಎಲ್ಲರೂ ಅಲ್ಲಿಗೆ ಬಂದು ಸೇರಿ ಆತನನ್ನು ತಬ್ಬಿಕೊಂಡಿದ್ದಾರೆ. ಇದರಿಂದ ಕಡೆಗೂ ಆತನಿಗೆ ತಾನು ಸತ್ತಿಲ್ಲ ಇವರೆಲ್ಲಾ ಸೇರಿ ತನಗೆ ಈ ರೀತಿ ಢೋಂಗಿ ಮಾಡಿದ್ದಾರೆ ಎಂಬುದು ಗೊತ್ತಾಗಿದ್ದು, ಆತ ಕಡೆಗೂ ಸದ್ಯ ಬದುಕಿದ್ದೇನಲ್ಲ ಎಂದು ಸಮಾಧಾನ ಪಟ್ಟುಕ್ಕೊಂಡಿದ್ದಾನೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈತ ಇನ್ನು ತನ್ನ ಜನ್ಮದಲ್ಲಿ ಯಾವತ್ತೂ ಕುಡಿಯಲಾರ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ. ಬಹುಶಃ ಇದೇ ರೀತಿಯ ಟೆಕ್ನಿಕ್ ಅನ್ನು ಕುಡಿದು ಇತರರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಒಬ್ಬರ ಮೇಲೆ ಪ್ರಯೋಗ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಒಳ್ಳೆಯ ಐಡಿಯಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ಶವಪೆಟ್ಟಿಗೆಯೊಳಗೆ ಹಾಕಿದರು ಎಚ್ಚರವಾಗದಷ್ಟು ಹೇಗೆ ನಿದ್ದೆ ಮಾಡುತ್ತೀರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.

View post on Instagram