ಅಪರಿಚಿತ ಸ್ಥಳಗಳಿಗೆ ಹೋಗುವಾಗ ದಾರಿದೀಪವಾಗುವುದು ಗೂಗಲ್ ಮ್ಯಾಪ್. ಆದರೆ, ಅದೇ ಮ್ಯಾಪ್ ಕೆಲವೊಮ್ಮೆ ನಮ್ಮನ್ನು ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ.
ಅಪರಿಚಿತ ಸ್ಥಳಗಳಿಗೆ ಹೋಗುವಾಗ ದಾರಿದೀಪವಾಗುವುದು ಗೂಗಲ್ ಮ್ಯಾಪ್. ಆದರೆ, ಅದೇ ಮ್ಯಾಪ್ ಕೆಲವೊಮ್ಮೆ ನಮ್ಮನ್ನು ಅಪಾಯಕ್ಕೆ ತಳ್ಳಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗಿದ ಕಾರೊಂದು ಸೇತುವೆ ನಿರ್ಮಾಣಕ್ಕಾಗಿ ತೋಡಲಾಗಿದ್ದ ಬೃಹತ್ ಗುಂಡಿಗೆ ಬಿದ್ದಿರುವ ಘಟನೆ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ.
ನಡೆದಿದ್ದೇನು?
ತಿರುಪತಿ ಜಿಲ್ಲೆಯ ವೆಂಕಟಗಿರಿಯಿಂದ ಡಕ್ಕಿಲಿ ಕಡೆಗೆ ವ್ಯಕ್ತಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಏರ್ಪೇಡು-ಪೆಂಚಲಕೋನ ರಾಷ್ಟ್ರೀಯ ಹೆದ್ದಾರಿಯ ಲಿಂಗಸಮುದ್ರಂ ಎಂಬಲ್ಲಿ ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಯ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ, ವಾಹನಗಳ ಸಂಚಾರಕ್ಕೆ ಪರ್ಯಾಯ ದಾರಿ (Diversion) ಕಲ್ಪಿಸಲಾಗಿತ್ತು.
ಆದರೆ ಕಾರು ಚಾಲಕ ಗೂಗಲ್ ಮ್ಯಾಪ್‌ನಲ್ಲಿ ತೋರಿಸಿದ ದಾರಿಯನ್ನೇ ಅನುಸರಿಸುತ್ತಾ ನೇರವಾಗಿ ಬಂದಿದ್ದಾರೆ. ಮ್ಯಾಪ್‌ನಲ್ಲಿ ಹಳೆಯ ರಸ್ತೆಯೇ ತೋರಿಸುತ್ತಿದ್ದರಿಂದ, ಮುಂದಿದ್ದ ಅಪಾಯದ ಅರಿವಿಲ್ಲದೆ ಚಾಲಕ ನೇರವಾಗಿ ಗುಂಡಿಗೆ ಕಾರನ್ನು ಇಳಿಸಿದ್ದಾರೆ. ಪರಿಣಾಮವಾಗಿ ಕಾರು ನಿಯಂತ್ರಣ ತಪ್ಪಿ ಗುಂಡಿಯೊಳಗೆ ಉರುಳಿ ಬಿದ್ದಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಓಡಿ ಬಂದು ಕಾರಿನಲ್ಲಿದ್ದ ಚಾಲಕನನ್ನು ಹೊರತೆಗೆದಿದ್ದಾರೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಈ ಘಟನೆಗೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ರಸ್ತೆ ಡೈವರ್ಷನ್ ಮಾಡಿರುವ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಫಲಕಗಳನ್ನು (Caution Boards) ಅಥವಾ ಬ್ಯಾರಿಕೇಡ್‌ಗಳನ್ನು ಅಲ್ಲಿ ಅಳವಡಿಸಿರಲಿಲ್ಲ. ಒಂದು ವೇಳೆ ಸಣ್ಣದೊಂದು ಸೂಚನಾ ಫಲಕ ಹಾಕಿದ್ದರೂ ಈ ಅನಾಹುತ ತಪ್ಪುತ್ತಿತ್ತು. ರಾತ್ರಿ ವೇಳೆಯಾಗಿದ್ದರೆ ಪ್ರಾಣಹಾನಿಯೇ ಸಂಭವಿಸುತ್ತಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೂಗಲ್ ಮ್ಯಾಪ್ ಸುಲಭ ದಾರಿ ತೋರಿಸಬಹುದು, ಆದರೆ ರಸ್ತೆಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಅದು ಯಾವಾಗಲೂ ಸರಿಯಾದ ಮಾಹಿತಿ ನೀಡಲಾರದು. ಅದರಲ್ಲೂ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮ್ಯಾಪ್ ನಂಬುವ ಮುನ್ನ ರಸ್ತೆಯ ಪರಿಸ್ಥಿತಿಯನ್ನು ಗಮನಿಸುವುದು ಒಳಿತು.


