ಮದ್ಯ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿ ಗೋವಾಗೆ ಹೋಗೋದು ಸಾಮಾನ್ಯ. ಇಂತಹ ಮದ್ಯ ಪ್ರಿಯರು ಆಗಸ್ಟ್‌ ತಿಂಗಳಲ್ಲಿ ಪ್ರವಾಸಕ್ಕೆ ಹೊರಟಿದ್ದರೆ ನಿಮಗೆ ಕಹಿ ಸುದ್ದಿ ಕಾದಿದ್ದು, 3 ದಿನಗಳ ಕಾಲ ಮದ್ಯಪಾನ ನಿಷೇಧಿಸಿ ಗೋವಾ ಸರ್ಕಾರ ಅಧಿಸೂಚನೆ ಜಾರಿಗೊಳಿಸಿದೆ. 

ಗೋವಾಗೆ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಿಂದಲೂ ಹಾಗೂ ವಿದೇಶದಿಂದಲೂ ಹೆಚ್ಚಿನ ಜನರು ಆಗಾಗ್ಗೆ ಪ್ರವಾಸಕ್ಕೆ ಹೋಗೋದು ಸಾಮಾನ್ಯ. ಅಲ್ಲಿನ ಬೀಚ್‌ಗಳು, ಪ್ರವಾಸಿ ತಾಣಗಳು, ಪ್ರಕೃತಿಯ ರಮಣೀಯ ಪರಿಸರವನ್ನು ನೋಡಲು ಹಲವು ಪ್ರವಾಸಿಗರು ಗೋವಾಗೆ ಹೋಗುತ್ತಾರೆ. ಇನ್ನು, ಹಲವರು ಮಜಾ ಮಾಡಲು ಗೋವಾಗೆ ತೆರಳುತ್ತಾರೆ. ಇದೇ ರೀತಿ, ನೀವೂ ಸಹ ಈಗ ಗೋವಾಗೆ ಪ್ರವಾಸ ಹೊರಟಿದ್ದೀರಾ..? ಹಾಗಾದ್ರೆ, ಮದ್ಯ ಪ್ರಿಯರಿಗೆ ಒಂದು ಕಹಿ ಸುದ್ದಿ ಇದೆ ನೋಡಿ..

ಮದ್ಯ ಪ್ರಿಯರು ಗೋವಾಗೆ ಹೋಗೋದು ಸಾಮಾನ್ಯವಾಗಿದೆ. ಅಲ್ಲಿ ಕಡಿಮೆ ರೇಟಲ್ಲಿ ದೊರೆಯುವ ವಿವಿಧ ರೀತಿಯ ‘ಮದ್ಯ’ ಸೇವಿಸಲು, ಬೀಚ್‌ಗಳಲ್ಲಿ ಮಜಾ ಮಾಡಲು ಹಲವರು ಹೋಗುತ್ತಾರೆ. ಆದರೆ, ಆಗಸ್ಟ್‌ ತಿಂಗಳಲ್ಲಿ ಗೋವಾದಲ್ಲಿ 3 ದಿನಗಳ ಕಾಲ ಮದ್ಯಪಾನದ ಮಾರಾಟವನ್ನೇ ನಿಷೇಧಿಸಲಾಗಿದೆ. 

‘ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿಯಿಂದ ಅಕ್ರಮ ಬಾರ್‌..?’

ಹೌದು, ಗೋವಾದಲ್ಲಿ ಪಂಚಾಯತ್‌ ಚುನಾವಣೆ ಹಿನ್ನೆಲೆ ಅಲ್ಲಿನ ಸರ್ಕಾರ ಆಗಸ್ಟ್‌ ತಿಂಗಳಲ್ಲಿ ಮೂರು ದಿನ ಮದ್ಯಪಾನ ಮಾರಾಟವನ್ನು ನಿಷೇಧಿಸಿದೆ. ಈ ಸಂಬಂಧ ಗೋವಾ ಸರ್ಕಾರದ ಹಣಕಾಸು (Finance) ವಿಭಾಗದ ಅಧೀನ ಕಾರ್ಯದರ್ಶಿ (Under Secretary) ಪ್ರಣಬ್‌ ಭಟ್‌ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್‌ 9, 10 ಹಾಗೂ 12 ಸೇರಿ ಮೂರು ದಿನಗಳಂದು ಮದ್ಯಪಾನ ಮಾರಾಟ ನಿಷೇಧದ (Dry Days) ಬಗ್ಗೆ ಮಾಹಿತಿ ನೀಡಿದ್ದಾರೆ. ಈ ದಿನಗಳು ವಾರದ ದಿನಗಳಲ್ಲಿ ಬರುವುದಾದರೂ ಈ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಮದ್ಯ ಪ್ರಿಯರಿಗೆ ನಿರಾಸೆ ಕಾದಿದೆ. 
ಗೋವಾದ 186 ಗ್ರಾಮ ಪಂಚಾಯತ್‌ ಕೇಂದ್ರಗಳಲ್ಲಿ ಆಗಸ್ಟ್‌ 10 ರಂದು ಚುನಾವಣೆ ನಿಗದಿಯಾಗಿದ್ದು, ಆಗಸ್ಟ್‌ 12 ರಂದು ಮತ ಎಣಿಕೆ ನಡೆಯಲಿದೆ. ಆಗಸ್ಟ್‌ 9, 10 ಹಾಗೂ 12 ರಂದು ಗೋವಾದ 186 ಗ್ರಾಮ ಪಂಚಾಯತ್‌ ಕೇಂದ್ರಗಳ ಮತದಾನದ ದಿನ ಹಾಗೂ ಮತ ಎಣಿಕೆ ನಡೆಯಲಿರುವ ಹಿನ್ನೆಲೆ ಮದ್ಯಪಾನ ಮಾರಾಟ ಮಾಡುವ ಎಲ್ಲ ಲೈಸೆನ್ಸ್‌ ಹೊಂದಿರುವ ಬಾರ್‌ಗಳು ಬಂದಾಗಲಿವೆ ಎಂದು ಈ ಅಧಿಸೂಚನೆಯಲ್ಲಿ ಹೇಳಲಾಗಿದೆ. 

ಬಾರ್‌ ಹಾಗೂ ರೆಸ್ಟೋರೆಂಟ್‌ ಎರಡಕ್ಕೂ ಲೈಸೆನ್ಸ್‌ ಹೊಂದಿರುವ ಸ್ಥಳಗಳಲ್ಲಿ ಆಹಾರವನ್ನು ಮಾತ್ರ ನೀಡುವ ಹೋಟೆಲ್‌ಗಳು ಮಾತ್ರ ತೆರೆಯಬೇಕು, ಹಾಗೂ ಬಾರ್‌ ಕೌಂಟರ್‌ ಬಂದಾಗಬೇಕು. ಅಲ್ಲದೆ, ಈ ದಿನಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದೂ ಗೋವಾ ಸರ್ಕಾರದ ಅಧಿಸೂಚನೆಯಲ್ಲಿ ಸೇರಿಸಲಾಗಿದೆ. ಅಲ್ಲದೆ, ಈ ಸ್ಥಳಗಳಲ್ಲಿ ಮದ್ಯಪಾನ ಮಾರಾಟ ಮಾಡುವುದಿಲ್ಲ ಹಾಗೂ ಆಹಾರ ನೀಡಲು ಮಾತ್ರ ರೆಸ್ಟೋರೆಂಟ್‌ ತೆರೆದಿರುತ್ತದೆ ಎಂದು ಈ ದಿನಗಳಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಮಾಲೀಕರು ತಮ್ಮ ಜಾಗಗಳಲ್ಲಿ ಬೋರ್ಡ್‌ ಹಾಕಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. 

ಗೋವಾಗೆ ಹನಿಮೂನ್‌ಗೆ ಹೊರಟ ತನ್ನನ್ನು ತಾನೇ ಮದ್ವೆಯಾದ ಯುವತಿ

ಗೋವಾದಲ್ಲಿ ಕರ್ನಾಟಕಕ್ಕಿಂತ ಮದ್ಯಪಾನ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ವೀಕೆಂಡ್‌ಗಳಲ್ಲಿ ಗೋವಾಗೆ ಪ್ರವಾಸ ಹೋಗುತ್ತಾರೆ. ಇತರೆ ರಜಾ ದಿನಗಳಲ್ಲೂ ಗೋವಾದಲ್ಲಿ ಹೆಚ್ಚು ಜನ ಜಂಗುಳಿ ಇರುತ್ತದೆ. ಗೋವಾದ ರೆಸಾರ್ಟ್‌ಗಳಂತೂ ಯಾವಾಗಲೂ ಗಿಜಿಗುಡುತ್ತಲೇ ಇರುತ್ತದೆ. ಕೋವಿಡ್ - 19 ಲಾಕ್‌ಡೌನ್‌ ಹಾಗೂ ಹೆಚ್ಚು ಕೊರೊನಾ ಪ್ರಕರಣಗಳು ಹೊರಬರುತ್ತಿದ್ದ ವೇಳೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ನಿರ್ಬಂಧ ಇದ್ದ ವೇಳೆ ಮಾತ್ರ ಗೋವಾದ ರೆಸಾರ್ಟ್‌, ಹೋಟೆಲ್‌ಗಳಿಗೆ ಹೊಡೆತ ಬಿದ್ದಿದ್ದರೂ, ಈಗ ಮತ್ತೆ ಅಲ್ಲಿನ ಪ್ರವಾಸಿ ತಾಣಗಳಿಗೆ, ಬೀಚ್‌ಗಳಿಗೆ ಹೆಚ್ಚು ಜನ ಹೋಗುತ್ತಿದ್ದಾರೆ.