ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್‌ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಹಿನ್ನೆಲೆ ಸ್ಮೃತಿ ಇರಾನಿಯನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ.

ಗೋವಾದ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ಗಾಳ ಹಾಕುತ್ತಿದೆ, ಕೇಸರಿ ಪಕ್ಷದವರು ಆಪರೇಷನ್‌ ಕಮಲ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳು ಇತ್ತೀಚೆಗೆ ಬಂದಿದ್ದವು. ಆದರೆ, ಆಪರೇಷನ್‌ ಕಮಲದ ವಿಚಾರ ಈಗ ತಣ್ಣಗಾಗಿದ್ದು, ಬಿಜೆಪಿ - ಕಾಂಗ್ರೆಸ್‌ ನಡುವೆ ಇದೀಗ ‘ಬಾರ್‌’ ವಿಚಾರಕ್ಕೆ ಗಲಾಟೆ ನಡೆಯುತ್ತಿದೆ. ಏನಿದು ಬಾರ್‌ ಗಲಾಟೆ ಅಂತೀರಾ..? ಮುಂದೆ ಓದಿ..

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್‌ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಹಿನ್ನೆಲೆ ಸ್ಮೃತಿ ಇರಾನಿಯನ್ನು ಕೇಂದ್ರ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ. ಆದರೆ, ಸ್ಮೃತಿ ಇರಾನಿ ಪುತ್ರಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. 

ರಾಹುಲ್‌ ಕ್ಷೇತ್ರ ವಯನಾಡ್‌ಗೆ ಸಚಿವೆ ಸ್ಮೃತಿ ಇರಾನಿ: ಸಂಚಲನ

ಕಾಂಗ್ರೆಸ್‌ ಆರೋಪದ ಬಗ್ಗೆ ಕೇಂದ್ರ ಸಚಿವೆಯ ಪುತ್ರಿ ಝೋಯಿಷ್‌ ಇರಾನಿ ಪರ ವಕೀಲ ಕೀರತ್‌ ನಾಗ್ರಾ ಪ್ರತಿಕ್ರಿಯೆ ನೀಡಿದ್ದು, ನನ್ನ ಕಕ್ಷಿದಾರೆ ‘ಸಿಲ್ಲಿ ಸೋಲ್ಸ್‌ ಗೋವಾ’ ಎಂಬ ಯಾವುದೇ ರೆಸ್ಟೋರೆಂಟ್‌ನ ಮಾಲೀಕರಲ್ಲ ಅಥವಾ ಅದನ್ನು ನಡೆಸುತ್ತಲೂ ಇಲ್ಲ. ಹಾಗೂ, ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಹಾಗೆ ಯಾವುದೇ ಶೋಕಾಸ್‌ ನೋಟಿಸ್‌ ಸಹ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

"ನಮ್ಮ ಕಕ್ಷಿದಾರರ ತಾಯಿ, ಹೆಸರಾಂತ ರಾಜಕಾರಣಿ ಸ್ಮೃತಿ ಇರಾನಿ ಅವರ ವಿರುದ್ಧ ಮಾಡುತ್ತಿರುವ ರಾಜಕೀಯ ಪ್ರೇರಿತ ಆರೋಪವಿದು. ಅವರ ವಿರುದ್ಧದ ಎಲ್ಲ ಕ್ಷುಲ್ಲಕ, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಪ್ರತಿಯೊಂದೂ ಘೋರ ಸುಳ್ಳುಗಳಿಂದ ಕೂಡಿದೆ" ಎಂದು ವಕೀಲ ಕೀರತ್‌ ನಾಗ್ರಾ ಹೇಳಿದರು.

ಅಲ್ಲದೆ, ಈ ಆರೋಪಗಳನ್ನು "ಆಧಾರ ರಹಿತ" ಎಂದು ಬಣ್ಣಿಸಿದ ವಕೀಲರು, "ನಿಜವಾದ ಸಂಗತಿಗಳನ್ನು ತಿಳಿದುಕೊಳ್ಳದೆ ಮತ್ತು ನಮ್ಮ ಕಕ್ಷಿದಾರರು ರಾಜಕೀಯ ನಾಯಕರ ಮಗಳು ಎಂಬ ಕಾರಣಕ್ಕಾಗಿ ಪೂರ್ವನಿರ್ಧರಿತ ಉದ್ದೇಶದಿಂದ ಅವರು ಇಲ್ಲದ ವಿಚಾರವನ್ನು ಸಂವೇದನಾಶೀಲಗೊಳಿಸುವುದಕ್ಕಾಗಿ ಸುಳ್ಳು ಪ್ರಚಾರವನ್ನು ಮಾತ್ರ ಮಾಡುತ್ತಿರುವುದು ದುರದೃಷ್ಟಕರವಾಗಿದೆ’’ ಎಂದೂ ವಕೀಲರು ಹೇಳಿದ್ದಾರೆ.

ವಿಮಾನದಲ್ಲಿ ಕಿತ್ತಾಡಿದ ಸ್ಮೃತಿ ಇರಾನಿ ಹಾಗೂ ಕೈ ನಾಯಕಿ : ವಿಡಿಯೋ ವೈರಲ್

ಕಾಂಗ್ರೆಸ್‌ ಹೇಳೋದೇನು..?
ಕೇಂದ್ರ ಸಚಿವೆ ಸ್ಮೃತಿ ಇರಾನಿಯ ಪುತ್ರಿ ಅಕ್ರಮ ಬಾರ್‌ ಅನ್ನು ನಡೆಸುತ್ತಿದ್ದಾರೆ. ಅಲ್ಲದೆ, ಇದು ಬಹಳ ಗಂಭೀರವಾದ ವಿಚಾರವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅಲ್ಲದೆ, ಆ ಬಾರ್‌ಗೆ ನೀಡಿರುವ ಶೋಕಾಸ್‌ ನೋಟಿಸ್‌ನ ಪ್ರತಿಯನ್ನು ಸಹ ಕಾಂಗ್ರೆಸ್‌ ಶೇರ್‌ ಮಾಡಿದೆ. ಹಾಗೂ, ಬಾರ್‌ ವಿರುದ್ಧ ನೋಟಿಸ್‌ ನೀಡಿದ ಅಬಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದೂ ಕಾಂಗ್ರೆಸ್‌ ಹೇಳಿಕೊಂಡಿದೆ.

ಸ್ಮೃತಿ ಇರಾನಿ ಕುಟುಂಬದ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ಅವರ ಪುತ್ರಿ ಗೋವಾದಲ್ಲಿ ರೆಸ್ಟೋರೆಂಟ್‌ ನಡೆಸುತ್ತಿದ್ದು, ಅದರಲ್ಲಿ ಅಕ್ರಮ ಲೈಸೆನ್ಸ್‌ ಇಟ್ಟುಕೊಂಡು ಬಾರ್‌ ಅನ್ನೂ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ಮೃತಿ ಇರಾನಿ ಪುತ್ರಿ ಮೃತ ವ್ಯಕ್ತಿಯ ಹೆಸರಿನಲ್ಲಿ ಬಾರ್‌ ಲೈಸೆನ್ಸ್‌ ಇಟ್ಟುಕೊಂಡಿದ್ದಾರೆ. ಆ ಲೈಸೆನ್ಸ್‌ ಅನ್ನು ಜೂನ್‌ 2022ರಲ್ಲಿ ಗೋವಾದಲ್ಲಿ ಪಡೆಯಲಾಗಿದೆ. ಅದರೆ, ಆ ಹೆಸರಿನ ವ್ಯಕ್ತಿ ಮೇ 2021ರಲ್ಲೇ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ 13 ತಿಂಗಳ ಬಳಿಕ ಲೈಸೆನ್ಸ್‌ ತೆಗೆದುಕೊಂಡಿರುವುದು ಅಕ್ರಮ’’ ಎಂದೂ ಕಾಂಗ್ರೆಸ್ ವಕ್ತಾರ ಪವನ್‌ ಖೇರಾ ಹೇಳಿಕೊಂಡಿದ್ದಾರೆ.

ಹಾಗೂ, ಗೋವಾದ ನಿಯಮಗಳ ಪ್ರಕಾರ ರೆಸ್ಟೋರೆಂಟ್‌ವೊಂದಕ್ಕೆ ಒಂದು ಬಾರ್‌ ಲೈಸೆನ್ಸ್ ನೀಡಲು ಮಾತ್ರ ಸಾಧ್ಯವಿದೆ. ಆದರೆ, ಈ ರೆಸ್ಟೋರೆಂಟ್‌ಗೆ ಎರಡು ಬಾರ್‌ ಲೈಸೆನ್ಸ್‌ಗಳನ್ನು ನೀಡಲಾಗಿದೆ. ಈ ಹಿನ್ನೆಲೆ ಸ್ಮೃತಿ ಇರಾನಿಯನ್ನು ಸಚಿವೆ ಸ್ಥಾನದಿಂದ ಪ್ರಧಾನಿ ಮೋದಿ ಕಿತ್ತು ಹಾಕಬೇಕು ಎಂದೂ ಅವರು ಹೇಳಿದ್ದಾರೆ.

ಅಲ್ಲದೆ, ರಾಹುಲ್‌ ಗಾಂಧಿ ವಿರುದ್ಧ ಆರೋಪಗಳನ್ನು ಮಾಡುವ ಸ್ಮೃತಿ ಇರಾನಿಗೆ ಅರಿವಿಲ್ಲದೆ ಅವರ ಪುತ್ರಿ ಈ ರೀತಿ ಮಾಡುತ್ತಿದ್ದಾರಾ ಎಂದೂ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಮಾಧ್ಯಮದವರಿಗೆ ಹೇಳಿದ್ದಾರೆ.