ಮಹದಾಯಿ ನದಿ ತಿರುವ ಯೋಜನೆ ಮುಂದುವರೆಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

ಪಣಜಿ : ಮಹದಾಯಿ ನದಿ ತಿರುವ ಯೋಜನೆ ಮುಂದುವರೆಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಅಲ್ಲದೆ ಈ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಮಗೆ ಭರವಸೆ ನೀಡಿದೆ ಎಂದೂ ಅವರು ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ವಿಪಕ್ಷ ಶಾಸಕರು, ಕರ್ನಾಟಕ ನಡೆಸುತ್ತಿರುವ ಯೋಜನೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ರನ್ನು ಆಗ್ರಹಿಸಿದರು. ಇದೇ ವೇಳೆ ಸ್ವತಂತ್ರ ಶಾಸಕ ಅಲೆಕ್ಸೋ ರೆಜಿನಾಲ್ಡೋ ಲಾರೆನ್ಸೋ ಅವರು ಮಹಾದಾಯಿ ನ್ಯಾಯ ಮಂಡಳಿಯ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಕುರಿತು ವಿಚಾರಿಸಿದರು.

ಇದಕ್ಕೆ ಉತ್ತರಿಸಿದ ಸಾವಂತ್‌,‘ ಕರ್ನಾಟಕವು ಅಕ್ರಮವಾಗಿ ಮಹದಾಯಿ ಯೋಜನೆಯ ತಿರುಗಿಸುವಿಕೆಯಲ್ಲಿ ತೊಡಗಿದೆ. ನಾವು ಅವರ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ತಡೆಯಲು ಆಗುವುದಿಲ್ಲ. ಆದರೆ ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡಿದ್ದೇವೆ. ನಾನು ಖುದ್ದಾಗಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಅವರನ್ನು ಭೇಟಿಯಾಗಿದ್ದೇನೆ. ಅವರು ಕರ್ನಾಟಕಕ್ಕೆ ಅನುಮತಿ ಕೊಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ನಾವು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುತ್ತೇವೆ’ ಎಂದು ಹೇಳಿದರು.

ಕರ್ನಾಟಕ ಮೇಲೆ ನ್ಯಾಯಾಂಗ ನಿಂದನೆ ದಾವೆ

ಅನುಮತಿಸಲ್ಲ ಎಂದು ಕೇಂದ್ರ ಹೇಳಿದೆ: ಸಿಎಂ

ಕರ್ನಾಟಕ ಕಾನೂನು ಬಾಹಿರವಾಗಿ ಮಹದಾಯಿ ತಿರುಗಿಸುತ್ತಿದೆ

- ಅದು ಕರ್ನಾಟಕ ವ್ಯಾಪ್ತಿಯ ಕಾಮಗಾರಿ, ತಡೆಯಲು ಆಗುತ್ತಿಲ್ಲ

- ಈ ಬಗ್ಗೆ ಕೇಂದ್ರಕ್ಕೆ ದೂರು. ಅನುಮತಿಸಲ್ಲ ಎಂದು ಕೇಂದ್ರ ಹೇಳಿದೆ

- ಕಾನೂನು ಬಾಹಿರ ಕಾಮಗಾರಿ ವಿರುದ್ಧ ಕೋರ್ಟಿಗೆ ಹೋಗ್ತೇವೆ

- ಅಸೆಂಬ್ಲಿಯಲ್ಲಿ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಹೇಳಿಕೆ