ಎಚ್.ಡಿ.ಕುಮಾರಸ್ವಾಮಿಗೆ ಸರಿಯಾಗಿ ಮಾತನಾಡಲು ಹೇಳಿ. ಅವರಪ್ಪನ ಹಾಗೆ ನಾನೂ ಮಾತನಾಡುವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಗುಡುಗಿದ್ದಾರೆ.
ಬೆಂಗಳೂರು (ಜು.06): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸರಿಯಾಗಿ ಮಾತನಾಡಲು ಹೇಳಿ. ಅವರಪ್ಪನ ಹಾಗೆ ನಾನೂ ಮಾತನಾಡುವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಗುಡುಗಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಅವರ ಮೈತ್ರಿ ಸರ್ಕಾರವೇ ಅಧಿಕಾರದಲ್ಲಿದೆ. ತಮಿಳುನಾಡು ಜತೆಗೆ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲು ಹೇಳಿ. ಸುಮ್ಮನೇ ಏನೇನೋ ಮಾತನಾಡುವುದಲ್ಲ. ಗೋವಾ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಏಕೆ ಸಮಸ್ಯೆ ಪರಿಹರಿಸಲಿಲ್ಲ. ಮೊದಲು ಕುಮಾರಸ್ವಾಮಿಗೆ ತನ್ನ ಮಾತಿನ ಮೇಲೆ ನಿಲ್ಲುವಂತೆ ಹೇಳಿ. ಇವರೇ ಕೇಂದ್ರದ ಸಚಿವರಾಗಿದ್ದಾರೆ. ಕೇಂದ್ರ ಹಾಗೂ ತಮಿಳುನಾಡು ಜತೆ ಮಾತನಾಡಿ ಯೋಜನೆಗೆ ಅನುಮತಿ ಕೊಡಿಸಲು ಹೇಳಿ ಎಂದು ಹರಿಹಾಯ್ದರು.
ಎಚ್‌ಡಿಕೆ ಜಿಲ್ಲೆಗೆ ಒಳ್ಳೆಯ ಕೆಲಸ ಮಾಡಲಿ: ಮುಂಗಾರು ಹಿನ್ನೆಲೆಯಲ್ಲಿ ಮೈಸೂರು ವಿಭಾಗದ ಪರಾಮರ್ಶನಾ ಸಭೆಯಲ್ಲಿ ಭಾಗಿಯಾಗಿದ್ದೆ. ಹೀಗಾಗಿ ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಗೆ ಸಿಎಸ್ಆರ್ ನಿಧಿ, ಸಂಸದರ ನಿಧಿ ಹೊರತಾಗಿ ಹೆಚ್ಚಿನ ಅನುದಾನ ತರಲಿ ಎಂದರು. ಕಾವೇರಿ ಅಚ್ಚುಕಟ್ಟು ಅಧುನೀಕರಣಕ್ಕೆ 10 ಸಾವಿರ ಕೋಟಿ ರು, ರಾಷ್ಟ್ರೀಯ ಹೆದ್ದಾರಿಗೆ 5 ಸಾವಿರ ಕೋಟಿ ರು. ಅನುದಾನ ಕೇಳಿದ್ದೇವೆ. ಮಂಡ್ಯ ಮೈ ಶುಗರ್ ಕಾರ್ಖಾನೆಗೆ 500 ಕೋಟಿ ರು. ಅನುದಾನ ಕೊಡಲಿ. ಜಿಲ್ಲೆಗೆ ಒಳ್ಳೆಯ ಕೈಗಾರಿಕೆ ತರಲಿ. ಈಗ 14 ತಿಂಗಳು ಮುಗಿದೆ. ಇನ್ನೂ ಸಮಯವಿದ್ದು, ಜಿಲ್ಲೆಗೆ ಏನು ತರುತ್ತಾರೆ ಎಂಬುದನ್ನು ಕಾದುನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬೊಕ್ಕಸ ಬರಿದಾಗಿಲ್ಲ: ಪಂಚ ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸ ಬರಿದಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹದಿನಾರು ವರ್ಷಗಳ ಆಯವ್ಯಯ ಮಂಡನೆಯ ಅನುಭವದಿಂದ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಯಶಸ್ಸು ಕಂಡಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಂಚ ಗ್ಯಾರಂಟಿಗಳನ್ನು ಸರ್ಕಾರ ಘೋಷಿಸಿದ ಸಂದರ್ಭದಲ್ಲಿ ವಿಪಕ್ಷಗಳು ಆರ್ಥಿಕ ಸ್ಥಿತಿಗತಿ ತಿಳಿಯದೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದು ಕಷ್ಟ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಟೀಕಿಸಿದ್ದವು. ಆದರೆ, ಇಂದು ಪಂಚ ಗ್ಯಾರಂಟಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ 16 ವರ್ಷಗಳ ಆಯವ್ಯಯ ಮಂಡನೆಯ ಅನುಭವದೊಂದಿಗೆ ಗ್ಯಾರಂಟಿ ಯೋಜನೆಗಳು ಯಶಸ್ಸು ಕಂಡಿವೆ.
ಸರ್ಕಾರವು ಸದಾ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸದಲ್ಲಿ ನಿರತವಾಗಿದೆ. ಆದರೆ, ಅದನ್ನು ಪ್ರಚಾರ ಮಾಡುವ ಕೆಲಸದಲ್ಲಿ ಹಿಂದುಳಿದಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗ ರಾಜ್ಯ ಬರಗಾಲ ಪೀಡಿತವಾಗುತ್ತದೆ ಎಂದು ವಿಪಕ್ಷಗಳು ಟೀಕಿಸಿದ್ದವು. ಆದರೆ, ಇದೇ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ೯೩ ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೂನ್ ಮಾಹೆಯಲ್ಲಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ, ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದರು. ಕೃಷಿ ಪ್ರಧಾನ ಜಿಲ್ಲೆಯಾದ ಮಂಡ್ಯ ಜಿಲ್ಲೆಗೆ ಕೃಷಿ ವಿಶ್ವ ವಿದ್ಯಾನಿಲಯವನ್ನು ಸರ್ಕಾರ ನೀಡಿದೆ ಹಾಗೂ ಆದಿಚುಂಚನಗಿರಿಯಲ್ಲಿ ಖಾಸಗಿ ಕೃಷಿ ಕಾಲೇಜು ಪ್ರರಂಭಿಸಲು ಅನುಮತಿ ನೀಡಲಾಗಿದೆ ಎಂದರು.