ಇಮಾಮ್ ಮುಖ್ಯಸ್ಥ ಉಮರ್ ಸ್ಫೋಟಕ ಭವಿಷ್ಯ, ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಘರ್ ವಾಪ್ಸಿ, ಆರ್ಟಿಕಲ್ 370 ತೆಗೆದು ಹಾಕಿದ ಬಳಿಕ ಕಾಶ್ಮೀರದಲ್ಲಿ ಅದ್ಭುತ ಬದಲಾವಣೆ ಆಗಿದೆ ಎಂದಿದ್ದಾರೆ.
ಶ್ರೀನಗರ (ಏ.04) ಅಖಿಲ ಭಾರತ ಇಮಾಮ್ ಮುಖ್ಯಸ್ಥ ಉಮರ್ ಅಹಮ್ಮದ್ ಇಲ್ಯಾಸಿ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟೇ ಇದೇ ವೇಳೆ ಕೆಲ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತದ ಜೊತೆ ಸೇರಿಕೊಳ್ಳಲಿದೆ. ಘರ್ ವಾಪ್ಸಿ ದಿನ ದೂರವಿಲ್ಲ ಎಂದು ಉಮರ್ ಅಹಮ್ಮದ್ ಇಲ್ಯಾಸಿ ಹೇಳಿದ್ದಾರೆ. ಈ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ನಾಗರೀಕರ ಪೈಕಿ ಬಹುತೇಕರು ಭಾರತದೊಂದಿಗೆ ಸೇರಿಕೊಳ್ಳಲು ಬಯಸುತ್ತಿದ್ದಾರೆ. ಆರ್ಟಿಕಲ್ 370 ತೆಗೆದು ಹಾಕಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಅಭಿವೃದ್ಧಿಗಳನ್ನು ನೋಡಿ ಭಾರತದ ಜೊತೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರ ಬದಕು ಅತೀವ ಸಂಕಷ್ಟದಲ್ಲಿದೆ. ಸದ್ಯ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಹೀಗಾಗಿ ಶೀಘ್ರದಲ್ಲೇ ಘರ್ ವಾಪ್ಸಿ ನಡೆಯಲಿದೆ ಎಂದು ಉಮರ್ ಅಹಮ್ಮದ್ ಇಲ್ಯಾಸಿ ಭವಿಷ್ಯ ನುಡಿದಿದ್ದಾರೆ.
ಜಮ್ಮು ಮತು ಕಾಶ್ಮೀರದಲ್ಲಿ ಮಕ್ಕಳು, ಯುವ ಸಮೂಹ ಕಲ್ಲು ತೂರಾಟ ನಡೆಸುತ್ತಿರುವುದು, ಪ್ರತಿಭಟನೆ ನಡೆಸುತ್ತಿರುವುದೇ ಹೆಚ್ಚಾಗಿತ್ತು. ಕಣಿವೆ ರಾಜ್ಯದಲ್ಲಿ ಪ್ರತಿ ದಿನ ಗಲಭೆ, ಪ್ರತಿಭಟೆಗಳು, ಗುಂಡಿನ ಶಬ್ದಗಳು ಕೇಳುತ್ತಿತ್ತು. ಆದರೆ ಆರ್ಟಿಕಲ್ 370 ಕಿತ್ತು ಹಾಕಿದ ಬಳಿಕ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಮಕ್ಕಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಕೇಂದ್ರೀಕರಿಸಿದ್ದಾರೆ. ಯುವ ಸಮೂಹ ಸಾಧನೆಯತ್ತ ತೊಡಗಿಸಿಕೊಂಡಿದೆ. ಹಲವು ಕ್ಷೇತ್ರಗಳಲ್ಲಿ ಯುವ ಸಮೂಹ ಸಾಧನೆ ಮಾಡುತ್ತಿದೆ. ಈ ಬದಲಾವಣೆ ಮಹತ್ತರವಾಗಿದೆ ಎಂದು ಉಮರ್ ಅಹಮ್ಮದ್ ಇಲ್ಯಾಸಿ ಹೇಳಿದ್ದಾರೆ.
ಪೆಹಲ್ಗಾಂ ದಾಳಿಯಿಂದ ಭಾರತ ಅಲುಗಾಡಲ್ಲ
ಜಮ್ಮು ಮತ್ತು ಕಾಶ್ಮೀರ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾಣುತ್ತಿರುವ ನಡುವೆ ಪೆಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು. ಇದು ದೇಶದನ ಜನರ ಆತಂಕ ಹೆಚ್ಚಿಸಿತ್ತು. ಪ್ರವಾಸೋದ್ಯಕ್ಕೆ ಹೊಡತೆ ನೀಡಿತ್ತು. ಭಾರತ ಈ ದಾಳಿಗೆ ತಕ್ಕ ತಿರುಗೇಟು ನೀಡಿದೆ. ಜಮ್ಮು ಮತ್ತು ಕಾಶ್ಮೀರ ಈಗ ಹೆಚ್ಚು ಸುರಕ್ಷಿತವಾಗಿದೆ. ಯಾವುದೇ ಅಡೆ ತಡೆ ಇಲ್ಲದೆ, ಆತಂಕವಿಲ್ಲದೆ ಕಾಶ್ಮೀರದಲ್ಲಿ ತಿರುಗಾಡಲು ಸಾಧ್ಯವಾಗುತ್ತಿದೆ ಎಂದು ಉಮರ್ ಅಹಮ್ಮದ್ ಇಲ್ಯಾಸಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆಗಳು ಬರುತ್ತಿದೆ. ಇಲ್ಲಿನ ಯುವಕರಿಗೆ ಉದ್ಯೋಗ ಸಿಗುತ್ತಿದೆ. ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಮೊದಲಿನ ಕಾಶ್ಮೀರಕ್ಕೂ ಈಗಿನ ಕಾಶ್ಮೀರಕ್ಕೂ ಭಾರಿ ವ್ಯತ್ಯಾಸವಿದೆ ಎಂದಿದ್ದಾರೆ.


