Asianet Suvarna News Asianet Suvarna News

ಬಾಲ್ಯದಲ್ಲಿ ನಮ್ಮನ್ನು ಅಚ್ಚರಿಗೆ ನೂಕಿದ್ದ 'ಸರ್ಕಸ್‌' ಪಿತಾಮಹ ಜೆಮಿನಿ ಶಂಕರನ್‌ ವಿಧಿವಶ!

ಇಂದು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡು ಬದುಕನ್ನು ಸಾಗಿಸುತ್ತಿರುವ ವ್ಯಕ್ತಿಗಳಿಗೆ ಬಾಲ್ಯದಲ್ಲಿ ಅಚ್ಚರಿ ಮೂಡಿಸಿದ್ದು 'ಸರ್ಕಸ್‌' ಎನ್ನುವ ಶಬ್ದ. ಅದರಲ್ಲೂ 'ಜೆಮಿನಿ' ಮತ್ತು 'ಜಂಬೋ' ಸರ್ಕಸ್‌ಗಳಷ್ಟು ಹೆಸರುವಾಸಿ ಮತ್ತಾವೂದು ಇದ್ದಿರಲಿಲ್ಲ. ಇಂಥ ಸರ್ಕಸ್‌ಗಳನ್ನು ಆರಂಭಿಸಿದ್ದ ಜೆಮಿನಿ ಶಂಕರನ್‌ ಇಂದು ನೆನಪು ಮಾತ್ರ.
 

Gemini Shankaran known as the Pioneer of Indian circus passed away at the age of 99 san
Author
First Published Apr 25, 2023, 4:02 PM IST

ನವದೆಹಲಿ(ಏ.25): ಅನೇಕ ತಲೆಮಾರುಗಳು ಭಾರತೀಯರನ್ನು ಭಿನ್ನ ಭಿನ್ನವಾಗಿ ರಂಜಿಸಿದ್ದ ಜೆಮಿನಿ ಸರ್ಕಸರ್‌, ಜಂಬೋ ಸರ್ಕಸ್‌ನ ನಿರ್ಮಾತೃ, ಭಾರತದ ಸರ್ಕಸ್‌ನ ಪಿತಾಮಹ ಎನಿಸಿಕೊಂಡ ಜೆಮಿನಿ ಶಂಕರನ್‌ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಗೆ 99 ವರ್ಷ ವಯಸ್ಸಾಗಿತ್ತು. ತರಬೇತಿ ಪಡೆದ ಸಿಂಹ, ಆನೆ, ಹುಲಿಗಳೊಂದಿಗೆ ಮಾನವ ಕೌಶಲ ಹಾಗೂ ಧೈರ್ಯದ ಪ್ರದರ್ಶನ ಮೂಲಕ ಈ ಸರ್ಕಸ್‌ಗಳು ಭಾರತದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ವು. ಇಂದು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡು ಬದುಕು ಸಾಗಿಸುತ್ತಿರುವ ವ್ಯಕ್ತಿಗಳಿಗೆ ಬಾಲ್ಯದಲ್ಲಿ ಇಂಥ ಸರ್ಕಸ್‌ ಅನ್ನೋದೇ ದೊಡ್ಡ ಎಂಟರ್‌ನೇನ್ಮೆಂಟ್‌ ಆಗಿದ್ದವು. ಈಗ ಈ ಸರ್ಕಸ್‌ಗಳ ನಿರ್ಮಾತೃ ಮಾತ್ರ ತಮ್ಮ ಬದುಕಿನ ಸರ್ಕಸ್‌ಗೆ ತೆರೆ ಎಳೆದಿದ್ದಾರೆ. ವಯೋಸಹಜ ಕಾಯಿಲೆಗಳ ಕಾರಣದಿಂದಾಗಿ ಕಳೆದ ಕೆಲವು ದಿನಗಳಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡ ಜೆಮಿನಿ ಶಂಕರನ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಸರ್ಕಸ್‌ಅನ್ನು ದೊಡ್ಡ ಮಟ್ಟದಲ್ಲಿ ಜನಪ್ರಿಯಗೊಳಿಸಿದ್ದ ಶಂಕರನ್‌, ಇದೇ ಸರ್ಕಸ್‌ಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದಿದ್ದಾರೆ.

ಅವರು ಹಲವು ಸರ್ಕಸ್ ಕಂಪನಿಗಳ ಸ್ಥಾಪಕರೂ ಆಗಿದ್ದರು. ಅವರನ್ನು ಭಾರತದ ಅತ್ಯಂತ ಹಿರಿಯ ಸರ್ಕಸ್ ಕಲಾವಿದ ಎಂದು ಗುರುತಿಸಲಾಗಿದೆ. ಮೊದಲು ಸರ್ಕಸ್ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಜೆಮಿನಿ ಶಂಕರನ್‌, ದೇಶ ಮತ್ತು ವಿದೇಶಗಳ ವಿವಿಧ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದರು ಅವರನ್ನು ಎಂವಿ ಶಂಕರನ್‌ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಮೌಂಟ್ ಬ್ಯಾಟನ್ ಮತ್ತು ಗಗನಯಾತ್ರಿ ವೆಲೆಂಟಿನಾ ತೆರೆಶ್ಕೋವಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು.  ಇಂಡಿಯನ್ ಸರ್ಕಸ್ ಫೆಡರೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಶಂಕರನ್ ಅವರು 1924 ರ ಜೂನ್ 13 ರಂದು ಕೇರಳದ ತಲಸ್ಸೆರಿಯ ಕೊಲಸ್ಸೆರಿಯಲ್ಲಿ ಜನಿಸಿದ್ದರು.

ಶಾಲಾ ಶಿಕ್ಷಕ ಕವಿನಿಸ್ಸೆರಿ ರಾಮನ್‌ ನಾಯರ್‌ ಹಾಗೂ ಕಲ್ಯಾಣಿ ಅಮ್ಮ ಅವರು ಏಳು ಜನ ಮಕ್ಕಳ ಪೈಕಿ 5ನೇಯವರಾಗಿದ್ದ ಶಂಕರನ್‌, ಬಾಲ್ಯದಿಂದಲೂ ಸರ್ಕಸ್‌ನ ಕುರಿತಾಗಿ ಕ್ರೇಜ್‌ ಇರಿಸಿಕೊಂಡಿದ್ದರು. ಆಗಿನ ಕಾಲದ ಪ್ರಖ್ಯಾತ ಸರ್ಕಸ್‌ ಕಲಾವಿದರಾಗಿದ್ದ ಕೀಲೆರಿ ಕುಣ್ಣಿಕಣ್ಣನ್‌ ಅವರ ಬಳಿ ಮೂರು ವರ್ಷಗಳ ಕಾಲ ಶಂಕರನ್‌ ತರಬೇತಿ ಪಡೆದಿದ್ದರು. ಆ ಬಳಿಕ ಸೇನೆಗೆ ಸೇರಿದ್ದ ಶಂಕರನ್‌, 2ನೇ ಮಹಾಯುದ್ಧದ ಬಳಿಕ ಸೇನೆಯಿಂದ ನಿವೃತ್ತರಾಗಿದ್ದರು. ಆ ಬಳಿಕ, ಶಂಕರನ್ ಚಿರಕ್ಕಾರದಲ್ಲಿರುವ ಎಂ.ಕೆ. ರಾಮನ್ ಅವರ ಸರ್ಕಸ್ ಶಾಲೆಗೆ ಸೇರಿದ್ದಲ್ಲದೆ, ವಿವಿಧ ವಿಭಾಗಗಳ ತರಬೇತಿ ಪಡೆದರು.  ದೇಶಾದ್ಯಂತ ವಿವಿಧ ಸರ್ಕಸ್ ಗುಂಪುಗಳೊಂದಿಗೆ ಕೆಲಸ ಮಾಡಿದ ನಂತರ, ಅವರು 1951 ರಲ್ಲಿ ವಿಜಯಾ ಸರ್ಕಸ್ ಕಂಪನಿಯನ್ನು 6,000 ರೂಗಳಿಗೆ ಖರೀದಿಸಿದರು ಮತ್ತು ಅದನ್ನು ಜೆಮಿನಿ ಸರ್ಕಸ್ ಎಂದು ಮರುನಾಮಕರಣ ಮಾಡಿ ಯಶಸ್ಸು ಸಂಪಾದಿಸಿದ್ದರು.

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಬಳಿ ಹೋಟೆಲ್‌ ನಿರ್ಮಿಸುತ್ತೆ ಟಾಟಾ ಗ್ರೂಪ್‌!

ಆಫ್ರಿಕನ್ ದೇಶಗಳಿಂದ ಪ್ರಾಣಿಗಳನ್ನು ತಂದು ಅವುಗಳನ್ನು ಸರ್ಕಸ್‌ಗೆ ಸೇರಿಸುವ ಮೂಲಕ ಹಾಗೂ ತರಬೇತಿ ಪಡೆದ ಕಲಾವಿದರನ್ನು ನೇಮಿಸಿಕೊಳ್ಳುವ ಮೂಲಕ ಕಂಪನಿಯು ತನ್ನ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ಬೆಳೆಯಿತು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ರಾಷ್ಟ್ರಪತಿಗಳಾದ ಎಸ್ ರಾಧಾಕೃಷ್ಣನ್, ಜಾಕಿರ್ ಹುಸೇನ್ ಸೇರಿದಂತೆ ಹಲವು ಗಣ್ಯರು ಇವರ ಸರ್ಕಸ್ ಗೆ ಭೇಟಿ ನೀಡಿದ್ದರು.

ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ, 8 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು!

1964 ರಲ್ಲಿ, ಶಂಕರನ್ ಅವರು ಅಂದಿನ ಸೋವಿಯತ್ ಒಕ್ಕೂಟದಲ್ಲಿ ನಡೆದ ಅಂತರರಾಷ್ಟ್ರೀಯ ಸರ್ಕಸ್ ಉತ್ಸವಕ್ಕೆ ಮೊದಲ ಭಾರತೀಯ ಸರ್ಕಸ್ ನಿಯೋಗವನ್ನು ಮುನ್ನಡೆಸಿದರು. ಉತ್ಸವದಲ್ಲಿ ದೇಶವನ್ನು ಪ್ರತಿನಿಧಿಸಲು ಜೆಮಿನಿಯನ್ನು ಅಂದಿನ ಪ್ರಧಾನಿ ನೆಹರು ಅವರೇ ಆಯ್ಕೆ ಮಾಡಿದ್ದರು. ಅದಾದ ಬಳಿಕ ಜಂಬೋ ಸರ್ಕಸ್‌ ಹೆಸರಿನಲ್ಲಿ 2ನೇ ಕಂಪನಿ ಆರಂಭ ಮಾಡಿದ್ದಲ್ಲದೆ, ಅದೂ ಕೂಡ ಯಶಸ್ಸಿನ ಪಥದಲ್ಲಿ ನಡೆಯಲು ಕಾರಣರಾಗಿದ್ದರು.

Follow Us:
Download App:
  • android
  • ios