ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ, 8 ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು!
ಅಯೋಧ್ಯೆಯಿಂದ ಮರಳುತ್ತಿದ್ದ ಕರಸೇವಕರಿದ್ದ ರೈಲಿನ ಬೋಗಿಗೆ ಗೋಧ್ರಾದಲ್ಲಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಂಟು ಅಪರಾಧಿಗಳು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಹೈಕೋರ್ಟ್ ಕೂಡ ಇವರಿಗೆ ನೀಡಿರುವ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ನವದೆಹಲಿ (ಏ.21): ಇಡೀ ಗುಜರಾತ್ ಗಲಭೆಗೆ ಕಾರಣವಾದ 2002 ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾಗಿದ್ದ 8 ಮಂದಿ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಇನ್ನೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಅರ್ಜಿ ಹಾಕಿದ್ದ ನಾಲ್ವರಿಗೆ ಇಡೀ ಘಟನೆಯಲ್ಲಿ ಅವರ ಪಾತ್ರವನ್ನು ಗಮನಿಸಿ ನಿರಾಕರಿಸಲಾಗಿದೆ. ಈಗಾಗಲೇ ಇವರುಗಳು 17 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿಯಾಗಿದೆ ಎನ್ನುವ ಕಾರಣಕ್ಕೆ ಎಂಟು ಮಂದಿ ಅಪರಾಧಿಗಳಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಜಾಮೀನು ನೀಡಲು ತೀರ್ಮಾನ ಮಾಡಿದೆ. ಈ ಎಂಟು ಜನರು ಅಪರಾಧಿಗಳು ಮತ್ತು ಜೀವಾವಧಿ ಶಿಕ್ಷೆಗೆ ಗುರಿಯಾದವರು ಮತ್ತು ಅವರ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಈ ಹಿಂದೆ ತನ್ನ ಅದೇಶದಲ್ಲಿ ಎತ್ತಿಹಿಡಿದಿತ್ತು. 'ಪ್ರಕರಣದಲ್ಲಿ ಇನ್ನುಳಿದ ನಾಲ್ವರ ಪಾತ್ರವನ್ನು ಗಮನಿಸಿ ಅವರಿಗೆ ಜಾಮೀನು ನೀಡಬಾರದು. ಇದಕ್ಕೆ ನಮ್ಮ ವಿರೋಧವಿದೆ' ಎಂದು ಭಾರತ ಸರ್ಕಾರದ ಪರ ವಕೀಲ ಸುಪ್ರೀಂ ಕೋರ್ಟ್ ಪೀಠದ ಮುಂದೆ ವಾದ ಮಾಡಿದ್ದರು.
ಜಾಮೀನು ನಿರಾಕರಿಸಿದ ನಾಲ್ವರ ಪೈಕಿ, ಒಬ್ಬ ವ್ಯಕ್ತಿಯಿಂದ ಕಬ್ಬಿಣದ ರಾಡ್‌ಅನ್ನು ವಶಪಡಿಸಿಕೊಳ್ಳಾಗಿತ್ತು. ಇನ್ನೊಬ್ಬನ ಬಳಿಯಿಂದ ಕುಡಗೋಲು ರೀತಿಯ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇನ್ನೊಬ್ಬ ಅಪರಾಧ, ಪೆಟ್ರೋಲ್‌ಗಳನ್ನು ಖರೀದಿಸಿ ಅದನ್ನು ಸ್ಟೋರ್ ಮಾಡಿಕೊಂಡಿದ್ದ ಎನ್ನುವುದು ಕೂಡ ಪೊಲೀಸ್ ತನಿಖೆಯಲ್ಲಿ ಸಾಬೀತಾಗಿತ್ತು. ಇದೇ ಪೆಟ್ರೋಲ್‌ನಿಂದ ರೈಲಿನ ಬೋಗಿಯನ್ನು ಸುಡಲಾಗಿತ್ತು. ಮತ್ತೊಬ್ಬ ವ್ಯಕ್ತಿ ರೈಲಿನಲ್ಲಿದ್ದ ಕರಸೇವಕರ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ಅವರ ಲೂಟಿ ಕೂಡ ಮಾಡಿದ್ದ' ಎಂದು ಸಾಲಿಸಿಟರ್ ಜನರಲ್ ವಾದಿಸಿದ್ದರು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಉನ್ನತ ಕಾನೂನು ಅಧಿಕಾರಿ ವಿರೋಧಿಸಿದ ನಾಲ್ವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು ಮತ್ತು ಇತರ ಅಪರಾಧಿಗಳಿಗೆ ಜಾಮೀನು ನೀಡಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು. 'ನಾಳೆ ಅವರಿಗೆ ಹಬ್ಬ ಇರುವ ಕಾರಣ ಈ ಸಲಹೆಯನ್ನು ನೀಡುತ್ತಿದ್ದೇನೆ' ಎಂದು ರಂಜಾನ್ ಹಬ್ಬವನ್ನು ಉಲ್ಲೇಖಿಸಿದ ಸಂಜಯ್ ಹೆಗ್ಡೆ ವಾದಿಸಿದರು. ಈ ನಾಲ್ವರ ಜಾಮೀನು ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆ ನಡೆಸುವಂತೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. "ನಾವು ಹೇಳಲು ಬಹಳಷ್ಟು ಇದೆ" ಎಂದು ಹಿರಿಯ ವಕೀಲರು ಸುಪ್ರೀಂ ಕೋರ್ಟ್‌ಗೆ ವಾದಿಸಿದರು. ನಾಲ್ವರು ಅಪರಾಧಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಬದಲು ಮುಂದೂಡಬೇಕೆಂಬ ಹೆಗ್ಡೆ ಅವರ ಮನವಿಯನ್ನು ಹಿರಿಯ ವಕೀಲ ಎಸ್.ನಾಗಮುತ್ತು ಕೂಡ ಬೆಂಬಲಿಸಿದ್ದಾರೆ.
ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್, ಸುಪ್ರೀಂ ಕೋರ್ಟ್ ಮುಂದೂಡಿಕೆ ಮಾಡುವ ಗೋಜಿಗೆ ಹೋಗಬಾರದು. ಇದನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು. ಇಲ್ಲದೇ ಇದ್ದಲ್ಲಿ, ಇದನ್ನು ಒಂದು ವರ್ಷಗಳ ಕಾಲ ಮುಕ್ತವಾಗಿಡಬೇಕು. ಆ ಬಳಿಕ ಅವರು ಇದೇ ಜಾಮೀನಿನ ಅರ್ಜಿಯನ್ನು ಮತ್ತೆ ಪರಿಷ್ಕರಣೆ ಮಾಡಬಹುದು ಎಂದು ಹೇಳಿದರು.
ಬಿಲ್ಕಿಸ್ ಬಾನು ಪ್ರಕರಣ, ಯಾವ ಆಧಾರದಲ್ಲಿ ರೇಪಿಸ್ಟ್‌ಗಳಿಗೆ ಕ್ಷಮೆ : ಸುಪ್ರೀಂಕೋರ್ಟ್ ಪ್ರಶ್ನೆ
ಈಗಾಗಲೇ ಪ್ರಕರಣದಲ್ಲಿ 17-18 ವರ್ಷಗಳ ಕಾಲ ಅಪರಾಧಿಗಳು ಶಿಕ್ಷೆಯನ್ನು ಅನುಭವಿಸಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅವರ ವೈಯಕ್ತಿಕ ಪಾತ್ರಗಳನ್ನು ಗಮನದಲ್ಲಿಟ್ಟು ಎಂಟು ಮಂದಿಯ ಅರ್ಜಿಯನ್ನು ಪುರಸ್ಕರಿಸಿ ಜಾಮೀನು ನೀಡಲಿದೆ. ಇನ್ನು ಜಾಮೀನು ಅರ್ಜಿ ತಿರಸ್ಕೃತರಾದವರು ಸಲ್ಲಿಸಿರುವ ಅರ್ಜಿಯ ಮೇಲ್ವಿಚಾರಣೆಯನ್ನು ಶೀಘ್ರದಲ್ಲಿ ಮಾಡಲಾಗುವುದಿಲ್ಲ ಎಂದೂ ಇದೇ ವೇಳೆ ತಿಳಿಸಿದೆ. ಸೆಷನ್ಸ್ ಕೋರ್ಟ್ ತಿಳಿಸುವ ಷರತ್ತುಗಳಿಗೆ ಅನ್ವಯವಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಡಿವೈ ಚಂದ್ರಚೂಡ್ ಹಾಗೂ ಪಿಎಸ್ ನರಸಿಂಹ ಇದ್ದ ದ್ವಿಸದಸ್ಯ ಪೀಠ ಆದೇಶ ನೀಡಿದೆ. ಇನ್ನು ಉಳಿದ ನಾಲ್ವರಿಗೆ ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅಬ್ದುಲ್ ರೆಹಮಾನ್ ದಂತಿಯಾ, ಹಾಗೂ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಫಾರುಖ್‌ಗೆ ವೈಯಕ್ತಿಕ ಕಾರಣಗಳಿಗಾಗಿ ಷರತ್ತುಬದ್ಧ ಜಾಮೀನು ನೀಡಿತ್ತು.
Godhra Train Burning Case: ಗೋಧ್ರಾ ರೈಲಿನ ಮೇಲೆ ಕಲ್ಲು ತೂರಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು!
ಏನಿದು ಘಟನೆ: 2002ರ ಫೆಬ್ರವರಿ 27 ರಂದು ಅಯೋಧ್ಯೆಯಿಂದ ಸಾಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಬರುತ್ತಿದ್ದ ಕರಸೇವಕರನ್ನು ಇವರುಗಳು ಬೆಂಕಿ ಹಚ್ಚಿದ್ದರು. ಗೋಧ್ರಾದಲ್ಲಿ ರೈಲನ್ನು ತಡೆದು ಎಸ್-6 ಬೋಗಿಯಲ್ಲಿದ್ದ ಕರಸೇವಕರ ಮೇಲೆ ಹಲ್ಲೆ ಮಾಡಿ ಇಡೀ ಕೋಚ್‌ಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದರು. ಇದರಲ್ಲಿ 58 ಮಂದಿ ಸಾವು ಕಂಡಿದ್ದರು. ಇದು ಗೋಧ್ರಾ ಗಲಭೆಗೂ ಕಾರಣವಾಗಿತ್ತು. ಪ್ರಕರಣದಲ್ಲಿ ಒಟದಟು 31 ಮಂದಿಯನ್ನು ಅಪರಾಧಿಗಳು ಎಂದು ಕೋರ್ಟ್ ಘೋಷಣೆ ಮಾಡಿ 11 ಮಂದಿಗೆ ಮರಣದಂಡನೆ ಶಿಕ್ಷೆ ನೀಡಿತ್ತು.ಉಳಿದ 20 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. 2017ರಲ್ಲಿ ಗುಜರಾತ್ ಹೈಕೋರ್ಟ್, ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.