ಫೇಕ್ ಐಡಿಕಾರ್ಡ್, ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಅತೀಕ್ ಹಿಂಬಾಲಿಸಿದ್ದ ದಾಳಿಕೋರರು!

ಉತ್ತರಪ್ರದೇಶ ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಕೊಲೆ ಆರೋಪಿಗಳು ಫೇಕ್ ಐಡಿ ಕಾರ್ಡ್ ಧರಿಸಿ ವರದಿಗಾರರಂತೆ ಪೋಸು ಕೊಟ್ಟುಕೊಂಡು ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಇವರನ್ನು (ಅತೀಕ್ ಅಹ್ಮದ್ ಹಾಗೂ ಅಶ್ರಫ್) ಹಿಂಬಾಲಿಸಿದ್ದರು ಎಂದು ತಿಳಿದು ಬಂದಿದೆ.

gangster Atiq Ahmad Murder case Attackers who followed Atiq all day with fake ID card and camera akb

ಪ್ರಯಾಗ್‌ ರಾಜ್: ಉತ್ತರಪ್ರದೇಶ ಗ್ಯಾಂಗ್ ಸ್ಟಾರ್ ಅತೀಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಕೊಲೆ ಆರೋಪಿಗಳು ಫೇಕ್ ಐಡಿ ಕಾರ್ಡ್ ಧರಿಸಿ ವರದಿಗಾರರಂತೆ ಪೋಸು ಕೊಟ್ಟುಕೊಂಡು ಕ್ಯಾಮರಾ ಹಿಡಿದುಕೊಂಡು ಇಡೀ ದಿನ ಇವರನ್ನು (ಅತೀಕ್ ಅಹ್ಮದ್ ಹಾಗೂ ಅಶ್ರಫ್) ಹಿಂಬಾಲಿಸಿದ್ದರು ಇದೊಂದು ತುಂಬಾ ನಾಜೂಕಾಗಿ ಯೋಜನೆ ಸಿದ್ಧಪಡಿಸಿ ಮಾಡಿದ ಕೊಲೆ ಎಂದು ಪೊಲೀಸರು ತಿಳಿಸಿದ್ದಾರೆ.  ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಕರೆತರುತ್ತಿದ್ದ ವೇಳೆ ಪೊಲೀಸರ ಸುಪರ್ದಿಯಲ್ಲಿರುವಾಗಲೇ ಮೀಡಿಯಾ ಕ್ಯಾಮರಾ ಮುಂದೆಯೇ ಇವರಿಬ್ಬರು ಹತ್ಯೆಯಾಗಿದ್ದರು.

ಕೊಲೆ ಆರೋಪಿಗಳಾದ ಲವಲೇಶ್ ತಿವಾರಿ (Lovelesh Tiwari), ಸನ್ನಿ (Sunny) ಹಾಗೂ ಅರುಣ್ ಮೌರ್ಯ (Arun Maurya) ಇವರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು,  ತಾವು ಅತೀಕ್ ಅಹ್ಮದ್‌ನನ್ನು (Atiq Ahmad) ಹತ್ಯೆ ಮಾಡಿ ಅಂಡರ್‌ವರ್ಲ್ಡ್‌ನಲ್ಲಿ (underworld) ಫೇಮಸ್ ಆಗಲು ಬಯಸಿದ್ದೆವು ಎಂದು ಪೊಲೀಸರ ಮುಂದೆ ಹೇಳಿದ್ದಾರೆ.  ಪ್ರಯಾಗ್‌ರಾಜ್‌ಗೆ (Prayagraj)  ಗುರುವಾರ ಬಂದಿದ್ದ ಆರೋಪಿಗಳು ಲಾಡ್ಜೊಂದರಲ್ಲಿ ಉಳಿದಿದ್ದರು.  ಘಟನೆಗೆ ಸಂಬಂಧಿಸಿದಂತೆ ಲಾಡ್ಜ್‌ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.  ಅತೀಕ್ ಹಾಗೂ ಸಹೋದರರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಾರೆ ಎಂಬ ವಿಚಾರ ತಿಳಿದು ಇವರು ದಾಳಿಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ರಕರ್ತರಂತೆ ಸೋಗು ಹಾಕಲು ನಿರ್ಧರಿಸಿದ ಅವರು ಶನಿವಾರ ಇಡೀ ದಿನ ಇತರ ಪತ್ರಕರ್ತರಂತೆ ಅತೀಕ್‌ ಹಾಗೂ ಅಶ್ರಫ್‌ನನ್ನು ಹಿಂಬಾಲಿಸಿದ್ದಾರೆ. 

ಪೊಲೀಸರೆದುರೇ ಗ್ಯಾಂಗ್ ಸ್ಟಾರ್ ಹತ್ಯೆ ಪ್ರಕರಣ: ಕಾನೂನು ಹದಗೆಟ್ಟಿದೆ ಎಂದ ಅಖಿಲೇಶ್ ಯಾದವ್

ಸಾಕ್ಷಿಗಳ ಪ್ರಕಾರ ಈ ಮೂವರು ದಾಳಿಕೋರರು, ಕೈಕೋಳ ಹಾಕಿದ್ದ ಅತೀಕ್ ಹಾಗೂ ಅಶ್ರಫ್ ಅವರನ್ನು ಗೇಟ್‌ಗಳಿಂದ ಒಳಗೆ ಕರೆದೊಯ್ಯುತ್ತಿದ್ದಾಗ ಪ್ರಯಾಗ್‌ ರಾಜ್‌ನ ಮೋತಿಲಾಲ್‌ ನೆಹರೂ ವಿಭಾಗೀಯ ಆಸ್ಪತ್ರೆಯ ( Motilal Nehru Divisional Hospital) ಮುಂದೆ ರಾತ್ರಿ 10 ಗಂಟೆಗೆ ಎದುರಾಗಿದ್ದಾರೆ.  ಬಂದೂಕುಗಳನ್ನು ಅಡಗಿಸಿಟ್ಟುಕೊಂಡಿದ್ದ ಅವರು ಮೊದಲಿಗೆ ತಾವು ಮಾಧ್ಯಮದ ಭಾಗವಾಗಿ ನಟಿಸಿದರು. ನಂತರ ಹತ್ತಿರದಿಂದ ಅತೀಕ್‌ ತಲೆಗೆ ಗುಂಡು ಹಾರಿಸಿದ್ದಾರೆ. ಹಂತಕರು 20ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದು, ಅತೀಕ್ ಅಶ್ರಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಆರೋಪಿಗಳಿಂದ ಮೂರು ಫೇಕ್ ಐಡಿಕಾರ್ಡ್‌ಗಳು (fake media ID cards), ಒಂದು ಮೈಕ್ರೋಫೋನ್ ಹಾಗೂ ಕ್ಯಾಮರಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿ ಬಳಿಕ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಪ್ರಮುಖ ಆರೋಪಿ ಲವಲೇಶ್ ಕಾಲೀಗೂ ಗುಂಡು ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

ಅತೀಕ್ ಅಹ್ಮದ್ ಹತ್ಯೆ ಕೇಸ್‌: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಅತೀಕ್ ಅಹ್ಮದ್ ಉತ್ತರಪ್ರದೇಶದ (Uttar Pradesh) ಫುಲ್‌ಪುರ್‌ (Uttar Pradesh) ಲೋಕಸಭಾ ಕ್ಷೇತ್ರದ ಮಾಜಿ ಸಂಸದನಾಗಿದ್ದು, ಈತನ ವಿರುದ್ಧ ಕೊಲೆ, ಅಪಹರಣ ಹಾಗೂ ದರೋಡೆ ಸೇರಿದಂತೆ 90ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದ್ದವು. ಅಲ್ಲದೇ 2018ರಲ್ಲಿ  ಅಲಹಾಬಾದ್ ವಿಶ್ವವಿದ್ಯಾಲಯದ  ಫ್ರೊಫೆಸರ್‌ ಓರ್ವರ ಮೇಲೆ ಹಲ್ಲೆ ಮಾಡಿದ ಆರೋಪವೂ ಈತನ ಮೇಲಿದೆ. 2019ರಿಂದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಈತ ಜೈಲಿನಲ್ಲಿದ್ದ, ಈತನ ಸಹೋದರ ಅಶ್ರಫ್ ಕೂಡ ಗ್ಯಾಂಗ್ ಸ್ಟಾರ್ ಆಗಿದ್ದು, ಈತನ ವಿರುದ್ಧವೂ ಹಲವರು ಕೇಸ್‌ಗಳಿದ್ದವು. 

ಇನ್ನಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಸಂಜಯ್ ಪ್ರಸಾದ್ ಮತ್ತು ಮುಖ್ಯಮಂತ್ರಿ ಮತ್ತು ಉತ್ತರಪ್ರದೇಶ ಪೊಲೀಸ್‌ ಇಲಾಖೆಯ ಇತರ ಉನ್ನತ ಅಧಿಕಾರಿಗಳ ನಡುವೆ ಉನ್ನತ ಮಟ್ಟದ ಸಭೆ ನಡೆದಿದೆ. ನಂತರ ಯೋಗಿ ಆದಿತ್ಯನಾಥ್ ಸರ್ಕಾರ ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಅಲ್ಲದೇ ಸಿಎಂ ಆದಿತ್ಯನಾಥ್ಲಕ್ನೋದಲ್ಲಿ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೊಡ್ಡ ಸಭೆ ನಡೆಸಿದ್ದಾರೆ.

ಕೊಲೆ ಆರೋಪಿ ಲವಲೇಶ್ ತಿವಾರಿ ಈ ಹಿಂದೆಯೂ ಜೈಲುವಾಸ ಅನುಭವಿಸಿ ಹೊರಬಂದಿದ್ದ,  ಆತನೊಂದಿಗೆ ನಮ್ಮ ಕುಟುಂಬಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಆತನ ತಂದೆ ಹೇಳಿದ್ದಾರೆ. ತುಂಬಾ ಅಪರೂಪಕ್ಕೆ ಆತ ಮನೆಗೆ ಬರುತ್ತಿದ್ದ. ಆತನ ಬಗ್ಗೆ ನಾವು ಟಿವಿಯಲ್ಲಿ ನೋಡಿದ್ದೇವೆ. ಆತನ ಕೃತ್ಯದ ಬಗ್ಗೆ ನಮಗೆ ತಿಳಿದಿಲ್ಲ. ಆತನಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆತ ಇಲ್ಲಿ ವಾಸಿಸುತ್ತಿರಲಿಲ್ಲ ನಮ್ಮ ಕುಟುಂಬದ ಭಾಗವೂ ಆಗಿರಲಿಲ್ಲ ಐದಾರು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ. ಆತನ ವಿರುದ್ಧ ಹಲವು ಪ್ರಕಣಗಳು ದಾಖಲಾಗಿದ್ದವು. ಈ ಹಿಂದೆಯೂ ಆತ ಜೈಲುವಾಸಿಯಾಗಿದ್ದ ಎಂದು ಲವಲೇಶ್ ತಿವಾರಿ ತಂದೆ ಯಗ್ಯಾ ತಿವಾರಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios