ಗಜರಾಜ ಎಕ್ಸ್ಪ್ರೆಸ್: ಪಾರ್ವತಿಪುರಂ ರೈಲು ನಿಲ್ದಾಣದಲ್ಲಿ ಆನೆಯ ಓಡಾಟ : ವೀಡಿಯೋ ವೈರಲ್
ಬೀದಿ ನಾಯಿಗಳು ಬೆಕ್ಕುಗಳು ರೈಲು ನಿಲ್ದಾಣಗಳಲ್ಲಿ ಸುತ್ತಾಡುವುದನ್ನು ನೀವು ನೋಡಿರಬಹುದು. ಆದರೆ ಆಂಧ್ರಪ್ರದೇಶದಲ್ಲಿ ಒಂದು ಕಡೆ ರೈಲು ನಿಲ್ದಾಣದಲ್ಲಿ ಕಾಡಾನೆಯೊಂದು ಅಡ್ಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ವಿಶಾಖಪಟ್ಟಣ: ಬೀದಿ ನಾಯಿಗಳು ಬೆಕ್ಕುಗಳು ರೈಲು ನಿಲ್ದಾಣಗಳಲ್ಲಿ ಸುತ್ತಾಡುವುದನ್ನು ನೀವು ನೋಡಿರಬಹುದು. ಆದರೆ ಆಂಧ್ರಪ್ರದೇಶದಲ್ಲಿ ಒಂದು ಕಡೆ ರೈಲು ನಿಲ್ದಾಣದಲ್ಲಿ ಕಾಡಾನೆಯೊಂದು ಅಡ್ಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಆಂಧ್ರಪ್ರದೇಶದ ಪಾರ್ವತಿಪುರಂ ರೈಲು ನಿಲ್ದಾಣದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಆನೆಯ ಆಗಮನದ ವೇಳೆ ಅಲ್ಲಿದ್ದ ಪ್ರಯಾಣಿಕರು ಆನೆಯ ಫೋಟೋ ವೀಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಿರಾಜ್ ನೂರಾನಿ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಆನೆಯೊಂದು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅತ್ತಿಂದಿತ್ತ ಓಡಾಡುವುದನ್ನು ಕಾಣಬಹುದು. ಈ ಒಂಟಿ ಆನೆ ಕೆಲ ದಿನಗಳ ಹಿಂದಷ್ಟೇ ತನ್ನ ಹಿಂಡಿನಿಂದ ಬೇರ್ಪಟ್ಟಿದೆ. ಹೀಗಾಗಿ ಎಚ್ಚರದಿಂದ ಇರುವಂತೆ ಸ್ಥಳೀಯ ಜನರಿಗೆ ಸೂಚಿಸಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೇ ಆ ಭಾಗದಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಪೆಟ್ರೋಲಿಂಗ್ ಹೆಚ್ಚಿಸಿದೆ. ಜನರಿಗೆ ಬೆಳ್ಳಂಬೆಳಗ್ಗೆ ಹಾಗೂ ಸಂಜೆಯ ನಂತರ ಈ ಪ್ರದೇಶದಲ್ಲಿ ತಿರುಗಾಡದಂತೆ ಸೂಚಿಸಲಾಗಿದೆ.
ನೀಲಿ ಬೆಂಕಿಯುಗುಳುವ ಜ್ವಾಲಾಮುಖಿ: ಯುರೋಪಿಯನ್ ಸ್ಪೇಸ್ ಏಜೆನ್ಸಿ ಸೆರೆ ಹಿಡಿದ ಅಪರೂಪದ ದೃಶ್ಯ
ಈ ವಿಚಾರಕ್ಕೆ ಸಂಬಂಧಿಸಿದಂತೆ ಮನ್ಯಾಮ್ ಡಿಎಫ್ ಒ ಪ್ರಸುನ್ನಾ ಮಾತನಾಡಿದ್ದು, ಆನೆಯೊಂದು ಹಿಂಡಿನಿಂದ ಬೇರ್ಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹೆಚ್ಚಿನ ಮುತುವರ್ಜಿ ವಹಿಸಿದೆ ಎಂದರು. ಎರಡು ಕಾರಣದಿಂದ ಗಂಡಾನೆಗಳು ಗುಂಪಿನಿಂದ ಬೇರ್ಪಡುತ್ತವೆ. ಹೆಣ್ಣಾನೆಗಳು ಗರ್ಭಿಣಿಯಾಗಿರುವ ಸಮಯದಲ್ಲಿ ಅವುಗಳು ಗಂಡು ಆನೆಗಳನ್ನು ಗುಂಪಿನಿಂದ ಬೇರೆ ಕಳಿಸುತ್ತವೆ. ಅಲ್ಲದೇ ಸಂತಾನೋತ್ಪತಿಯ ಸಮಯದಲ್ಲೂ ಗಂಡು ಆನೆಗಳು ಹಿಂಡಿನಿಂದ ಬೇರಾಗುತ್ತವೆ. ನಂತರ ಅವುಗಳು ಒಂಟಿಯಾಗಿ ಬಿಡುತ್ತವೆ ಎಂದು ಹೇಳಿದರು. ಸದ್ಯ ಗಂಡು ಆನೆ ರಾತ್ರಿ ವೇಳೆ 50 ರಿಂದ 60 ಕಿ.ಮೀ ದೂರದಲ್ಲಿ ಸಂಚರಿಸುತ್ತಿದ್ದು, ಗ್ರಾಮಗಳಿಗೆ ಹಾನಿಯಾಗುವ ರೀತಿಯಲ್ಲಿ ಗಂಡು ಆನೆ ವರ್ತಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಕಳ್ಳನಿಂದಾಗಿ ಆಟೋದಿಂದ ಬಿದ್ದು BTech ವಿದ್ಯಾರ್ಥಿನಿ ಸಾವು: ಪೊಲೀಸರಿಂದ ಫೋನ್ ಕಳ್ಳನ ಎನ್‌ಕೌಂಟರ್
ಆದರೆ ಕಾಡಾನೆಯ ಓಡಾಟದಿಂದ ಸುತ್ತಮುತ್ತಲ ಗ್ರಾಮಸ್ಥರು ಭಯಗೊಂಡಿದ್ದು, ಬೆಳೆ ನಾಶಗೊಂಡರೆ ಏನು ಗತಿ ಎಂಬ ಭೀತಿಯಲ್ಲಿದ್ದಾರೆ.