ಸಫಾರಿ ಹೊರಟವರ ಮುಂದೆ ಕಾಡಾನೆ ಅಡ್ಡ ಬಂದಿದ್ದು, ಇದನ್ನು ನೋಡಿದ ಕೂಡಲೇ ವಾಹನದಲ್ಲಿದ್ದವರು ಜೋರಾಗಿ ಮಂತ್ರೋಚ್ಚಾರ ಮಾಡಲು ಶುರು ಮಾಡಿದ್ದು, ಇದನ್ನು ಕೇಳಿದ ಆನೆ ನಿಧಾನಕ್ಕೆ ಹಿಂದೆ ಸರಿದು ಹೋಗಿದೆ.
ಬೆಂಗಳೂರು: ಕಾಡು ಪ್ರಾಣಿಗಳ ಮುಂದೆ ಸಾಗುವಾಗ ಬಹಳ ಜಾಗರೂಕವಾಗಿರಬೇಕು. ಅದರಲ್ಲೂ ಕಾಡಾನೆಗಳು ಯಾವಾಗ ಸಿಟ್ಟಿಗೆದ್ದು ದಾಳಿ ಮಾಡಬಲ್ಲವೂ ಎಂದು ಹೇಳಲಾಗದು ಸಾಮಾನ್ಯವಾಗಿ ಮದವೇರಿದ ಸಂದರ್ಭ ಹೊರತುಪಡಿಸಿದರೆ, ಉಳಿದ ಸಮಯದಲ್ಲಿ ತಮಗೆ ಹಾನಿಯಾಗದಿದ್ದರೆ ಏನು ಮಾಡುವುದಿಲ್ಲ. ಆನೆಗಳು ನಡುರಸ್ತೆಯಲ್ಲಿ ವಾಹನವನ್ನು ಅಡ್ಡಗಟ್ಟುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಇಲ್ಲೊಂದು ಕಡೆ ಸಫಾರಿ ಹೊರಟವರ ಮುಂದೆ ಕಾಡಾನೆ ಅಡ್ಡ ಬಂದಿದ್ದು, ಇದನ್ನು ನೋಡಿದ ಕೂಡಲೇ ವಾಹನದಲ್ಲಿದ್ದವರು ಜೋರಾಗಿ ಮಂತ್ರೋಚ್ಚಾರ ಮಾಡಲು ಶುರು ಮಾಡಿದ್ದು, ಇದನ್ನು ಕೇಳಿದ ಆನೆ ನಿಧಾನಕ್ಕೆ ಹಿಂದೆ ಸರಿದು ಹೋಗಿದೆ. ಅಚ್ಚರಿ ಮೂಡಿಸಿದರು ಇದು ನಿಜ ಘಟನೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಅನೇಕರು ಮಂತ್ರ ಕೆಲಸ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತೀಯ ಪೊಲೀಸ್ ಸೇವೆಯ ರೂಪಿನ್ ಶರ್ಮಾ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರಿನಲ್ಲಿದ್ದ ಬ್ರಾಹ್ಮಣರಿಗೆ ಕಾಡಾನೆ ಎದುರಾದಾಗ ಎಂದು ಅವರು ಬರೆದು ಕೊಂಡಿದ್ದಾರೆ. 1.41 ಸೆಕೆಂಡ್‌ಗಳ ಈ ವಿಡಿಯೋವನ್ನು 97 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಅನೇಕರು ಸನಾತನ ಹಿಂದೂ ಧರ್ಮವನ್ನು ಕೊಂಡಾಡಿದ್ದಾರೆ.
ಬದುಕಿದ ಬಡ ಜೀವ: ಮಗು ಅಳು ಕೇಳಿ ಮಹಿಳೆಯ ಬಿಟ್ಟು ಹೋದ ಆನೆ
ವೀಡಿಯೋದಲ್ಲಿ ಕಾಣಿಸುವಂತೆ ಸಫಾರಿಗೆ ಹೊರಟವರಿಗೆ ಕಾಡಿನ ಮಧ್ಯೆ ನಡುರಸ್ತೆಯಲ್ಲಿ ಕಾಡಾನೆಯೊಂದು ಎದುರಾಗುತ್ತದೆ. ಇವರತ್ತಲೇ ಬರುತ್ತಿರುವ ಕಾಡಾನೆಯನ್ನು ನೋಡಿ ಕಾರಿನಲ್ಲಿದ್ದವರು ಭಯದಿಂದ ದೇವರ ನಾಮಸ್ಮರಣೆಗೆ ಮುಂದಾಗುತ್ತಾರೆ. ಒಬ್ಬರು ಕೃಷ್ಣ ವಾಸುದೇವ ಎಂದು ಕೃಷ್ಣನ ಸ್ಮರಣೆ ಮಾಡಿದರೆ ಮತ್ತೊಬ್ಬರು ಜೋರಾಗಿ ಯಾವುದೋ ಸ್ತೋತ್ರವೊಂದನ್ನು ಹೇಳಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಆನೆಯೂ ರಸ್ತೆಯಿಂದ ಪಕ್ಕಕ್ಕೆ ಸರಿದು ಇವರ ವಾಹನದಿಂದ ದೂರವಾಗಿ ಇವರಿಗೆ ದಾರಿ ಮಾಡಿಕೊಟ್ಟಿದೆ. ವಾಹನದಲ್ಲಿದ್ದವರೆಲ್ಲರೂ ಕ್ಷೇಮವಾಗಿ ಮುಂದೆ ಹೋಗಿದ್ದಾರೆ.
ಮಂತ್ರಕ್ಕೆ ಮಾವಿನಕಾಯಿ ಉದುರುತ್ತಾ ಗೊತ್ತಿಲ್ಲ. ಆದರೆ ಇಲ್ಲಿ ಆನೆ ಶಾಂತವಾಗಿ ದೂರ ಸರಿದು ಹೋಗಿದ್ದಂತು ನಿಜ, ಜೊತೆಗೆ ವಾಹನದಲ್ಲಿದ್ದವರು ಕೂಡ ಬಹಳ ಸಂಯಮದಿಂದ ಆನೆಗೆ ಯಾವುದೇ ಕಿರಿಕಿರಿ ಮಾಡದೇ ಶಾಂತವಾಗಿ ವರ್ತಿಸಿದ್ದಾರೆ. ಆನೆ ಹಾಗೂ ಮನುಷ್ಯರ ಈ ಪರಸ್ಪರ ಗೌರವವನ್ನು ಅನೇಕರು ಶ್ಲಾಘಿಸಿದ್ದಾರೆ. ಮಂತ್ರ ಕೆಲಸ ಮಾಡಿದೆ, ಆನೆ ದೂರ ಹೋಗಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮಂತ್ರ ಕೆಲಸ ಮಾಡಿದೆ ವೀಡಿಯೋದ ಕೊನೆಯನ್ನು ನೋಡಿ ಆನೆ ಅವರನ್ನು ಆಶೀರ್ವದಿಸಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕೆಲವರು ನಗುವಿನ ಇಮೋಜಿ ಹಾಕಿದ್ದು, ಇದರಲ್ಲಿ ನಗುವಂತಹದ್ದೇನಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ
ಇದು ಜಾತಿವಾದ ಅಲ್ಲ, ನಮ್ಮ ಕೆಲವು ಮಂತ್ರಗಳ ನಿಜವಾದ ಪರಿಣಾಮ ಇದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಮಂತ್ರಕ್ಕೆ ಆನೆ ದೂರ ಸರಿಯಿತೋ ಅಥವಾ ಅವರ ಶಾಂತ ಸಹಜ ವರ್ತನೆಗೆ ಸುಮ್ಮನಾಯಿತೋ ನಿಮ್ಮ ನಿಮ್ಮ ಆಲೋಚನೆ, ಚಿಂತನೆಗೆ ಬಿಟ್ಟಿದ್ದು, ಆದರೆ ಈಗ ಈ ವಿಡಿಯೋ ವೈರಲ್ ಆಗಿರುವುದಂತೂ ನಿಜ.
