ಅನಾಥ ಆನೆ ಮರಿಗಳನ್ನು ಮಕ್ಕಳಂತೆ ಸಾಕಿದ ಬೊಮ್ಮನ್-ಬೆಳ್ಳಿ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ 'ಆಸ್ಕರ್' ಗರಿ
ಬೊಮ್ಮನ್-ಬೆಳ್ಳಿ ದಂಪತಿ ಅನಾಥ ಆನೆ ಮರಿಗಳನ್ನು ತನ್ನ ಮಕ್ಕಳಂತೆ ಸಾಕಿದ ಸ್ಫೂರ್ತಿದಾಯಕ ಜೀವನವನ್ನು ದಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕಿ ಕಾರ್ತಿಕಿ.
ಭಾರತೀಯರಿಗೆ ಆಸ್ಕರ್ ದೂರದ ಮಾತಾಗಿತ್ತು. ಆದರೀಗ ಕಾಲ ಬದಲಾಗಿದೆ. ಆಸ್ಕರ್ ಅಂಗಳದಲ್ಲಿ ಭಾರತೀಯ ಸಿನಿಮಾಗಳು ರಾರಾಜಿಸುತ್ತಿವೆ. ಆಸ್ಕರ್ ಎತ್ತಿ ಹಿಡಿಯುವ ಮೂಲಕ ಭಾರತೀಯ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಭಾರತದ ಚಿತ್ರಗಳಿಗೆ ಜಾಗತಿಕ ಮನ್ನಣೆ ಸಿಗುತ್ತಿದೆ. ಈ ಬಾರಿಯ ಆಸ್ಕರ್ ನಲ್ಲಿ ಭಾರತ ಎರಡು ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಪ್ರಶಸ್ತಿ ಮುಡಿಗೇರಿಸಿಕೊಂಡರೇ ಡಾಕ್ಯುಮೆಂಟರಿ ವಿಭಾಗದಲ್ಲಿ 'ದಿ ಎಲಿಎಫೆಂಟ್ ವಿಸ್ಪರ್ಸ್' ಪ್ರಶಸ್ತಿ ಗೆದ್ದು ಬೀಗಿದೆ. ದಿ ಎಲಿಫೆಂಟ್ ವಿಸ್ಪರ್ಸ್ ಸಾಕ್ಷ್ಯಚಿತ್ರ ಈಗ ಜಗತ್ತಿನ ಗಮನ ಸೆಳೆಯುತ್ತಿದೆ.
'ದಿ ಎಲಿಫೆಂಟ್ ವಿಸ್ಪರ್ಸ್' ಸಾಕ್ಷ್ಯಚಿತ್ರದಲ್ಲಿ ತಮಿಳುನಾಡಿನ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯ ಜೀವನ ಅನಾವರಣವಾಗಿದೆ. ಅನಾಥ ಆನೆ ಮರಿಗಳನ್ನು ಸಾಕಿದ ಈ ದಂಪತಿಯ ಸ್ಫೂರ್ತಿದಾಯಕ ಜೀವನಕ್ಕೆ ಕನ್ನಡಿ ಹಿಡಿದಿದ್ದಾರೆ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್. ಅನಾಥವಾಗಿದ್ದ ಪುಟ್ಟ ಆನೆ ಮರಿಯನ್ನು ತನ್ನ ಮಕ್ಕಳಂತೆ ಸಾಕಿ ಬೆಳೆಸಿದ್ದಾರೆ ಬೊಮ್ಮನ್ ಮತ್ತು ಬೆಳ್ಳಿ ದಂಪತಿ. ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಸಾಕ್ಷ್ಯಚಿತ್ರವನ್ನು ಸೆರೆಹಿಡಿಯಲಾಗಿದೆ. ಅಲ್ಲಿನ ನೈಸರ್ಗಿಕ ಸೌಂದರ್ಯ ಕೂಡ ಈ ಸಾಕ್ಷ್ಯ ಚಿತ್ರದ ಹೈಲೆಟ್ಸ್‌ಗಳಲ್ಲಿ ಒಂದಾಗಿದೆ. ಬುಡಕಟ್ಟು ಜನರ ಜೀವನ, ಪ್ರಕೃತಿಯೊಂದಿಗಿನ ಸಾಮರಸ್ಯದ ಬಗ್ಗೆಯೂ ಈ ಸಾಕ್ಷ್ಯ ಚಿತ್ರದಲ್ಲಿ ಅನಾವರಣ ಆಗಿದೆ.
ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಸಾಕಾಣಿಕೆ ಶಿಬಿರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆಂಕಣಿಕೊಟ್ಟೈ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆ ಮರಿಯನ್ನು ಕರೆತಂದು ಸಾಕಿದರು. ಬಳಿಕ 2018ರಲ್ಲಿ ಸತ್ಯಮಂಗಲಂ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಆನೆ ಮರಿಯನ್ನು ಮುದುಮಲೈ ಶಿಬಿರಕ್ಕೆ ಕರೆತಂದು ಸಾಕಿದರು. ಮುದ್ದಾದ ಮರಿಗಳಿಗೆ ರಘು ಮತ್ತು ಬೊಮ್ಮಿ ಎಂದು ಹೆಸರಿಟ್ಟರು. ಎರಡು ಪುಟ್ಟ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮ್ಮ ಮಕ್ಕಳಂತೆ ಮುದ್ದಾಗಿ ಬೆಳೆಸಿದರು. ಇವರ ಸ್ಫೂರ್ತಿದಾಯಕ ಜೀವನವನ್ನು ಸೆರೆ ಹಿಡಿದು ಆಸ್ಕರ್ ಅಂಗಳಕ್ಕೆ ಕೊಂಡೊಯ್ದಿದ್ದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್.
ಆನೆ ಸಾಕಿದ ಬೆಳ್ಳಿ ಪ್ರತಿಕ್ರಿಯೆ
ಎರಡು ಆನೆ ಮರಿಗಳು ಸಿಕ್ಕಿದ ಬಗ್ಗೆ ಬೆಳ್ಳಿ ಮಾತನಾಡಿದ್ದಾರೆ. ಮೊದಲ ಆನೆ ರಘು ತೆಂಕಣಿಯಿಂದ ಬಂತು. ಅದನ್ನು ನೋಡಿಕೊಳ್ಳುವಂತೆ ನನಗೆ ಹೇಳಿದರು. ರಘು ತುಂಬಾ ದುರ್ಬಲನಾಗಿದ್ದ. ಬಾಲವನ್ನು ಕಟ್ಟಲಾಗಿತ್ತು. ಹಾಗಾಗಿ ನಾನು ಅದನ್ನು ನೋಡಿಕೊಳ್ಳಲು ಹಿಂದೇಟು ಹಾಕಿದೆ. ನಾವು ನೋಡಿಕೊಳ್ಳುತ್ತೇವೆ ಎಂದು ತನ್ನ ಪತಿ ಹೇಳಿದರು. ರಘು ಚೆನ್ನಾಗಿ ಬೆಳೆದ. ಬಿಸಿ ನೀರು ಕೊಟ್ಟು ಬೆಳೆಸಿದೆವು. ಬಳಿಕ ಸತ್ಯಮಂಗಲದಿಂದ ಮತ್ತೊಂದು ಆನೆ ಬಂತು. ಅದು ಬೊಮ್ಮಿ. ನಾವು ಬೊಮ್ಮಿಗೆ ಹಾಲು ಕೊಟ್ಟೆವು. ಅದು ಕೂಡ ತುಂಬಾ ಚೆನ್ನಾಗಿ ಬೆಳೆದಿದ್ದಾರೆ. ಒಬ್ಬಳು ಮಹಿಳೆ ಆನೆಗಳನ್ನು ಚಿತ್ರೀಕರಿಸಬೇಕೆಂದು ಸರ್ಕಾರದ ಆದೇಶದೊಂದಿಗೆ ಬಂದಳು. ಈಗ ಪ್ರಶಸ್ತಿ ಸಿಕ್ಕಿದೆ. ಮುದುಮಲೈ ಅರಣ್ಯದ ಬಗ್ಗೆ ನಮಗೆ ಹೆಮ್ಮೆಯಿದೆ' ಎಂದು ಹೇಳಿದ್ದಾರೆ.
Oscars 2023: ಭಾರತಕ್ಕೆ ಮೊದಲ ಗೆಲುವು: ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಶಾರ್ಟ್ ಫಿಲ್ಮ್ ಪ್ರಶಸ್ತಿ
ಕಾರ್ತಿಕಿ ಗೊನ್ಸಾಲ್ವಿಸ್ ಬಗ್ಗೆ
ಕಾರ್ತಿಕಿ ಗೊನ್ಸಾಲ್ವಿಸ್ ಖ್ಯಾತ ಡಾಕ್ಯುಮೆಂಟರಿ ನಿರ್ದೇಶಕಿ. ಊಟಿಯಲ್ಲಿ ಹುಟ್ಟಿ ಬೆಳೆದ ಕಾರ್ತಿಕಿ ಇಂದು ದಿ ಎಲಿಫೆಂಟ್ ವಿಸ್ಪರ್ಸ್ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಈ ಸಾಕ್ಷ್ಯಚಿತ್ರ ತಯಾರಿಸಲು ಕಾರ್ತಿಕಿ ಬರೋಬ್ಬರಿ 6 ವರ್ಷಗಳು ಶ್ರಮಿಸಿದ್ದಾರೆ. ಸುಮಾರು 6 ವರ್ಷಗಳಿಂದ ಬೆಟ್ಟದ ಜನರೊಂದಿಗೆ ಪ್ರಯಾಣಿಸಿ ಈ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಬುಡಕಟ್ಟು ಜನರ ಬದುಕು ಮತ್ತು ಆನೆಗಳ ಜೀವನವನ್ನು ತುಂಬಾ ಸುಂದರವಾಗಿ ದಿ ಎಲಿಎಫೆಂಟ್ ವಿಸ್ಪರ್ಸ್ ಮೂಲಕ ಕಟ್ಟಿಕೊಟ್ಟಿದ್ದಾರೆ ಕಾರ್ತಿಕಿ. 6 ವರ್ಷಗಳ ಪಯಣವನ್ನು 41 ನಿಮಿಷಗಳಲ್ಲಿ ತೋರಿಸಿದದ್ದಾರೆ ನಿರ್ದೇಶಕಿ ಕಾರ್ತಿಕಿ. ಜನರಿಗೆ ಅರ್ಥವಾಗುವ ಹಾಗೆ ತುಂಬಾ ಸರಳವಾಗಿ ವಿವರಣೆ ನೀಡಿದ್ದಾರೆ. ಕೊರೊನಾ ಸಮಯದಲ್ಲೂ ಕಾರ್ತಿಕಿ ಕಷ್ಟಪಟ್ಟು ಕಾಡಿನ ಜನರ ಜೊತೆ, ಆನೆಗಳ ಜೊತೆ ಬೆರೆತು ಸಾಕ್ಷ್ಯಚಿತ್ರ ಸೆರೆಹಿಡಿದಿದ್ದಾರೆ.
ಇದೀಗ ಅವರ ಶ್ರಮ, ಪ್ರತಿಭೆಗೆ ಫಲ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್ ಗಮನ ಸೆಳೆಯುತ್ತಿದೆ. ನಿರ್ದೇಶಕಿ ಕಾರ್ತಿಕಿ ಅವರಿಗೆ ಬೇಷ್ ಎನ್ನುತ್ತಿದ್ದಾರೆ. ಅಭಿನಂದನೆಗಳ ಸುರಿಮಳೆಯೇ ಬರುತ್ತಿದೆ. ದಿ ಎಲಿಫೆಂಟ್ ವಿಸ್ಪರ್ಸ್ ಕಳೆದ ವರ್ಷ ಡಿಸೆಂಬರ್ ನಲ್ಲಿ ನೆಟ್ಫಿಕ್ಸ್‌ನಲ್ಲಿ ರಿಲೀಸ್ ಆಗಿದೆ. ಈಗಾಗಲೇಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ದಿ ಎಲಿಫೆಂಟ್ ವಿಸ್ಪರ್ಸ್ ಇದೀಗ ಪ್ರತಿಷ್ಠಿತ ಆಸ್ಕರ್ ಗೆದ್ದು ಹೆಮ್ಮೆ ಪಡುವಂತೆ ಮಾಡಿದೆ.