* ನಿದ್ದೆಗಣ್ಣಿನಲ್ಲಿ ವಾಹನ ಓಡಿಸುವುದನ್ನು ತಡೆಯಲು ಹೊಸ ವ್ಯವಸ್ಥೆ* ಚಾಲಕರು ನಿದ್ದೆಗೆ ಜಾರುತ್ತಿದ್ದಂತೆ ಸೆನ್ಸರ್‌ನಿಂದ ಎಚ್ಚರಿಕೆ ಸಂದೇಶ* ಲಾರಿ ಚಾಲ​ಕ​ರ ಕರ್ತ​ವ್ಯಕ್ಕೆ ಸಮಯ ಮಿತಿ ಹೇರಲೂ ಚಿಂತ​ನೆ

ನವದೆಹಲಿ(ಸೆ.21): ವಾಹನ ಓಡಿಸುವ ವೇಳೆ ಚಾಲಕರು ನಿದ್ದೆಗೆ ಜಾರುವುದರಿಂದ ಅಪಘಾತಗಳು ಆಗುವುದನ್ನು ತಪ್ಪಿಸಲು ವಾಣಿಜ್ಯವಾಹನಗಳು ಹಾಗೂ ಟ್ರಕ್‌ಗಳಿಗೆ ‘ನಿದ್ದೆ ಪತ್ತೆ ಸೆನ್ಸರ್‌’ಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಯುರೋಪ್‌ ರಾಷ್ಟ್ರಗಳಲ್ಲಿ ಇರುವಂತೆ ಭಾರತದಲ್ಲಿಯೂ ವಾಣಿಜ್ಯ ವಾಹನಗಳಿಗೆ ನಿದ್ದೆ ಪತ್ತೆ ಸೆನ್ಸರ್‌ಗಳ ಅಳವಡಿಸುವ ಸಂಬಂಧ ಯೋಜನೆಯೊಂದನ್ನು ರೂಪಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್‌ ಹೈವೇ​ಯಲ್ಲಿ ಗಡ್ಕ​ರಿ 170 ಕಿ.ಮೀ. ವೇಗದ ಟೆಸ್ಟ್‌ ಡ್ರೈವ್‌!

ಸರಣಿ ಟ್ವೀಟ್‌ಗಳನ್ನು ಮಾಡಿರುವ ಗಡ್ಕರಿ, ನಿರಂತರ ವಾಹನ ಚಾಲನೆಯ ಒತ್ತಡದಿಂದ ಉಂಟಾಗುತ್ತಿರುವ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ವಿಮಾನಗಳ ಪೈಲಟ್‌ಗಳ ರೀತಿ ಟ್ರಕ್‌ ಚಾಲಕರಿಗೂ ಚಾಲನಾ ಅವಧಿಯನ್ನು ನಿಗದಿಪಡಿಸಲು ಉದ್ದೇಶಿಸಲಾಗಿದೆ. ಜೊತೆಗೆ ಜಿಲ್ಲಾ ರಸ್ತೆ ಸಮಿತಿ ಸಭೆಯನ್ನು ನಿಯಮಿತವಾಗಿ ಕರೆಯುವುದನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ತಾವು ಪತ್ರ ಬರೆಯುವುದಾಗಿಯೂ ಗಡ್ಕರಿ ತಿಳಿಸಿದ್ದಾರೆ.

ವಾಹನಗಳಿಗೆ ಶೀಘ್ರ ತಬಲಾ, ಕೊಳಲು, ಪಿಟೀಲು ಹಾರ್ನ್: ಕರ್ಕಶ ಧ್ವನಿ ತಪ್ಪಿಸಲು ಗಡ್ಕರಿ ಪ್ಲಾನ್!

ಏನಿದು ನಿದ್ದೆ ಪತ್ತೆ ಉಪಕರಣ?:

ಕಾರು ಅಥವಾ ಟ್ರಕ್‌ನ ಸ್ಟೇರಿಂಗ್‌ ಮೇಲ್ಭಾಗದಲ್ಲಿ ನಿದ್ದೆ ಪತ್ತೆ ಸೆನ್ಸರ್‌ ಅನ್ನು ಅಳವಡಿಸಲಾಗಿರುತ್ತದೆ. ದೀರ್ಘ ಪ್ರಯಾಣದ ವೇಳೆ ಈ ಯಂತ್ರ ಚಾಲಕನ ಆಯಾಸ ಮಟ್ಟಹಾಗೂ ಡ್ರೈವಿಂಗ್‌ನಲ್ಲಿ ಆದ ಬದಲಾವಣೆಯನ್ನು ಗುರುತಿಸುತ್ತದೆ. ಚಾಲಕ ಮುಖದ ಹಾವಭಾವ ಮತ್ತು ಕಣ್ಣಿನ ಚಲನೆಯ ಮೇಲೆ ನಿಗಾ ಇಡುತ್ತದೆ. ಒಂದು ವೇಳೆ ಚಾಲಕ ತೂಕಡಿಸಲು ಅಥವಾ ನಿದ್ದೆಗೆ ಜಾರಿದರೆ ಕೂಡಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ. ಫೇಸ್‌ ರೆಕಗ್ನೇಷನ್‌ ಅಪ್ಲಿಕೇಷನ್‌ನಲ್ಲಿರುವ ತಂತ್ರಜ್ಞಾನವನ್ನು ಇಲ್ಲಿ ಕೂಡ ಬಳಕೆ ಮಾಡಿಕೊಳ್ಳಲಾಗಿದೆ.