ಒಡಿಶಾ ಕರಾವಳಿಯಿಂದ ಸಂತಾನೋತ್ಪತ್ತಿಗಾಗಿ ಹೊರಟ ಆಲಿವ್ ರಿಡ್ಲಿ ಆಮೆಯೊಂದು ಬರೋಬ್ಬರಿ 3,500 ಕಿಲೋ ಮೀಟರ್ ಪ್ರಯಾಣಿಸಿದೆ. 2021ರಲ್ಲಿ ಟ್ಯಾಗ್ ಮಾಡಲಾಗಿದ್ದ ಈ ಆಮೆ, ಸಾಗರ ಪ್ರವಾಹಗಳ ನೆರವಿನಿಂದ ಮಹಾರಾಷ್ಟ್ರದ ಪಶ್ಚಿಮ ಕರಾವಳಿಯನ್ನು ತಲುಪಿ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಒಂದು ಆಮೆ ಎಷ್ಟು ಕಿಲೋ ಮೀಟರ್ ಪ್ರಯಾಣಿಸಬಹುದು? ಈ ಪ್ರಶ್ನೆಗೆ ತಜ್ಞರಿಗೂ ಉತ್ತರ ಸಿಗುವುದು ಕಷ್ಟಸಾಧ್ಯ. ಆದರೆ ಒಡಿಶಾದ ಕಡಲ ತೀರದಲ್ಲಿ ಕಂಡು ಬರುವ ಆಲಿವ್ ರಿಡ್ಲಿ ಸಮುದ್ರ ಆಮೆಯೊಂದು ಸಂತಾನೋತ್ಪತ್ತಿಗಾಗಿ ಬರೋಬ್ಬರಿ 3,500 ಕಿಲೋ ಮೀಟರ್ ಪ್ರಯಾಣಿಸಿದೆ ಎಂದು ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಹೇಳಿದ್ದಾರೆ.
3,500 ಕಿ.ಮೀ ಈಜಿದ ಆಲಿವ್ ರಿಡ್ಲಿ ಆಮೆಯ ನಿಗೂಢ ಪಯಣ!
ಭಾರತದ ಪೂರ್ವ ಕಡಲ ತೀರಿದಂದ ಪ್ರಯಾಣ ಆರಂಭಿಸಿ, ಪಶ್ಚಿಮ ತೀರವನ್ನು ತಲುಪಿದೆ. ಒಡಿಶಾದ ಝೂಲಾಜಿಕಲ್ ಆಫ್ ಇಂಡಿಯಾ ಜೀವಶಾಸ್ತ್ರ ಕೇಂದ್ರದ ವಿಜ್ಞಾನಿಗಳಾದ ಅನಿಲ್ ಮೊಹಾಪಾತ್ರ, ಆಶಿಶ್ ಕುಮಾರ್ ದಾಸ್, ಸಂದೀಪ್ ಕುಮಾರ್ ಮೊಹಾಪಾತ್ರ, ಐಐಟಿ ಬಾಂಬೆ ಸಿವಿಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಅಮಿತ್ ಕುಮಾರ್ ಜೀನಾ, ಭಾರತೀಯ ರಾಷ್ಟ್ರಿಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ವಿಜ್ಞಾನಿ ಸಂಜೀಬ ಕುಮಾರ್, ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ ವಿಜ್ಞಾನಿ ಬಸುದೇವ್ ತ್ರಿಪಾಠಿ ಅವರು ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ಒಡಿಶಾ ಕರಾವಳಿಯು ಆಮೆಗಳಿಗೆ ಅತಿದೊಡ್ಡ ಸಂತಾನೋತ್ಪತ್ತಿ ಸ್ಥಳವಾಗಿದೆ. ಭಾರತ ಕರಾವಳಿಯಲ್ಲಿ ಕಂಡು ಬರುವ ಬಹುತೇಕ ಸಮುದ್ರಗಳಲ್ಲಿ ಶೇಕಡಾ 90 ಆಮೆಗಳು ಇಲ್ಲಿ ಕಂಡು ಬರುತ್ತವೆ. ಜಗತ್ತಿನ ಆಲಿವ್ ರಿಡ್ಲಿ ಆಮೆಗಳಲ್ಲಿ ಶೇಕಡಾ 30 ಆಮೆಗಳು ಇಲ್ಲಿಯೆ ಕಂಡು ಬರುತ್ತವೆ. ಸಾಮಾನ್ಯವಾಗಿ ಸಮುದ್ರಗಳು ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಈಜುತ್ತವೆ. ಇದರಂತೆ ಆಲಿವ್ ರೆಡ್ಲಿ ಆಮೆಗಳು ಭಾರತ ಮತ್ತು ಶ್ರೀಲಂಕಾ ಕರಾಳಿಯವರೆಗೂ ಈಜುತ್ತವೆ. ಆದರೆ ಇದೇ ಮೊದಲ ಬಾರಿಗೆ ಆಲಿವ್ ರೆಡ್ಲಿ ಆಮೆಗಳು ಪಶ್ಚಿಮ ಕರಾವಳಿಯಲ್ಲಿ ಕಂಡು ಬಂದಿದೆ ಎಂದು ಅನಿಲ್ ಮೊಹಾಪಾತ್ರ ಬಿಬಿಸಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವಿಜ್ಞಾನಿಗಳು 2021ರಲ್ಲಿ ಒಡಿಶಾದಲ್ಲಿ 11,632 ಆಲಿವ್ ರಿಡ್ಲಿ ಆಮೆಗೆ ಸಂಶೋಧನೆಯ ಭಾಗವಾಗಿ ಟ್ಯಾಗ್ ಅಳವಡಿಕೆ ಮಾಡಿದ್ದರು. ಪ್ರತಿಯೊಂದು ಆಮೆಗೂ ಒಂದು ವಿಶಿಷ್ಟ ಕೋಡ್ ನೀಡಲಾಗಿತ್ತು. ಈ ಆಮೆಗಳು ಆ ಬಳಿಕ ಶ್ರೀಲಂಕಾ ಕಡಲ ತೀರದಲ್ಲಿ ಕಂಡು ಬಂದಿದ್ದವು. ಆದರೆ ಈ ಆಮೆಗಳಲ್ಲಿ ಒಂದು ಆಮೆ 3,500 ಕಿಲೋ ಮೀಟರ್ ಪ್ರಯಾಣಿಸಿ 2025ರ ಜನವರಿಯಲ್ಲಿ ಮಹಾರಾಷ್ಟ್ರದ ಕರಾವಳಿಯ ಗುಹಾಗರ್ ಪ್ರದೇಶದಲ್ಲಿ ಕಂಡು ಬಂದಿದ್ದನ್ನು ಗುರುತಿಸಿದ್ದರು.
ಪಶ್ಚಿಮ ತೀರಕ್ಕೆ ಒಂದು ಹೆಣ್ಣು ಆಮೆ ತಲುಪಿದ್ದು ವಿಜ್ಞಾನಿಗಳು ಕುತೂಹಲವನ್ನು ಹೆಚ್ಚಿಸಿತ್ತು. ಸಮುದ್ರದ ಆಮೆಗಳ ವಲಸೆ ಸಮುದ್ರದ ಅಲೆಗಳ ಪ್ರವಾಹ ನೆರವು ನೀಡುತ್ತದೆ. ಇದರಂತೆ ಸುಲಭವಾಗಿ, ಕಡಿಮೆ ಶ್ರಮದಿಂದ ಈಜುಲು ಅನುಕೂಲ ಆಗುವಂತೆ ಮಾಡುತ್ತವೆ. ಇದರಂತೆ ಆಮೆ ಅರೇಬಿಯನ್ ಸಮುದ್ರ ತಲುಪಿದ ಬಳಿಕ ಆಹಾರ ಹುಡುಕುತ್ತಾ ಈಜುತ್ತಿದ್ದಾಗ ಸಾಗರ ಪ್ರವಾಹಗಳ ಆಮೆಯನ್ನು ಮಹಾರಾಷ್ಟ್ರದ ಕರಾವಳಿಗೆ ಕರೆತಂದಿರಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.


