friends help in poor man's wedding: ಉತ್ತರಪ್ರದೇಶದಲ್ಲೊಂದು ವಿಶೇಷ ಮದುವೆ ನಡೆದಿದೆ. ಆರ್ಥಿಕ ಸಂಕಷ್ಟದಿಂದಾಗಿ ಕಂಗೆಟ್ಟಿದ್ದ ಯುವಕನೋರ್ವನ ಮದುವೆಯಲ್ಲಿ ಸ್ನೇಹಿತರು ದೊಡ್ಡತನ ಮೆರೆದಿದ್ದಾರೆ.

ಉತ್ತರಪ್ರದೇಶದಲ್ಲೊಂದು ವಿಶೇಷ ಮದುವೆ

ಮದುವೆ ಎಂದರೆ ಸಂಭ್ರಮವೇ ಎನಿಸಿದರು ಅದನ್ನು ಸುಧಾರಿಸುವುದು ಅಷ್ಟು ಸುಲಭವಲ್ಲ, ಇದೇ ಕಾರಣಕ್ಕೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತೇ ಇದೆ. ಮದುವೆಯ ಸಮಯದಲ್ಲಿ ಬರುವ ಖರ್ಚುವೆಚ್ಚಗಳು ಅಷ್ಟಿಷ್ಟಲ್ಲ. ಹಾಗಂತ ಮದುವೆಗಳೇನು ನಡೆಯದೇ ಇರುವುದಿಲ್ಲ, ಅವರವರ ಸ್ಥಾನಮಾನಗಳಿಗೆ ಅನುಗುಣವಾಗಿ ಮದುವೆಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಉತ್ತರಪ್ರದೇಶದಲ್ಲೊಂದು ವಿಶೇಷ ಮದುವೆ ನಡೆದಿದೆ. ಆರ್ಥಿಕ ಸಂಕಷ್ಟದಿಂದಾಗಿ ಕಂಗೆಟ್ಟಿದ್ದ ಯುವಕನೋರ್ವನ ಮದುವೆಯಲ್ಲಿ ಸ್ನೇಹಿತರು ದೊಡ್ಡತನ ಮೆರೆದಿದ್ದಾರೆ.

ಆ ಕ್ಷಣವನ್ನು ಆತ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತೆ ಮಾಡಿದ ಸ್ನೇಹಿತರು:

ಹೌದು ಆರ್ಥಿಕ ಸಂಕಷ್ಟದ ಕಾರಣಕ್ಕೆ ಯುವಕನೋರ್ವನಿಗೆ ತನ್ನದೇ ಮದುವೆಯಲ್ಲಿ ಜನರನ್ನು ದಿಬ್ಬಣ ಕರೆದೊಯ್ಯುವುದಕ್ಕೆ ವಾಹನದ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಆತ ಬಡವನಾದರೂ ಸ್ನೇಹದ ವಿಚಾರದಲ್ಲಿ ಶ್ರೀಮಂತ ಹೀಗಾಗಿ ಆತನ ಸ್ನೇಹಿತರ ಬಳಗ ಮಾತ್ರ ತಮ್ಮ ಗೆಳೆಯ ತಲೆಕೆಳಗೆ ಮಾಡುವುದಕ್ಕೆ ಬಿಡಲಿಲ್ಲ. ಆದರ ಬದಲಾಗಿ ಆ ಕ್ಷಣವನ್ನು ಆತ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಇದರ ಜೊತೆಗೆ ಇಡೀ ಊರೇ ಆ ವಿಚಾರದ ಬಗ್ಗೆ ಮಾತನಾಡುವಂತೆ ಮಾಡಿದ್ದಾರೆ.

ತಮ್ಮ ಸ್ನೇಹಿತನಿಗೆ ಮದುವೆ ದಿಬ್ಬಣ ಕರೆದೊಯ್ಯುವುದಕ್ಕೆ ದೊಡ್ಡ ವಾಹನವನ್ನು ಮಾಡುವುದಕ್ಕೆ ಕಷ್ಟವಾಗುತ್ತದೆ ಎಂದು ಅರಿತ ಆತನ ಸ್ನೇಹಿತರು 30 ಈ ರಿಕ್ಷಾಗಳನ್ನು ವ್ಯವಸ್ಥೆ ಮಾಡಿದ್ದು, ಈ ವಿಚಾರ ಈಗ ದೇಶದೆಲ್ಲೆಡೆ ಸಾಕಷ್ಟು ಸುದ್ದಿಯಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ದಿಯೋರಿಯಾದ ಖುಖುಂಡು ಗ್ರಾಮದಲ್ಲಿ.

ಇದನ್ನೂ ಓದಿ: 2029ರೊಳಗೆ ಭಾರತದ ನೌಕಾಪಡೆ ಮಡಿಲು ಸೇರಲಿದೆ ರಾಫೆಲ್ ಎಂ ಫೈಟರ್ ಜೆಟ್

ಅಲ್ಲಿ ದಿವಂಗತ ರಾಮ್ ಅವತಾರ್ ಪ್ರಸಾದ್ ಅವರ ಮಗ ದುರ್ಗೇಶ್ ಪ್ರಸಾದ್ ಅವರ ಮದುವೆ ಭಾನುವಾರ ರಾತ್ರಿ ನಿಗದಿಯಾಗಿತ್ತು. ಆದರೆ ದಿನಗೂಲಿ ಕೆಲಸ ಮಾಡಿ ಕುಟಂಬದವರ ಹೊಟ್ಟೆ ಹೊರೆಯುವ ದುರ್ಗೇಶ್ ಅವರಿಗೆ ಮದುವೆ ದಿಬ್ಬಣಕ್ಕೆ ಕಾರುಗಳನ್ನು ವ್ಯವಸ್ಥೆ ಮಾಡುವುದು ಸುಲಭವಿರಲಿಲ್ಲ, ಆತನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ದುರ್ಗೇಶ್‌ನ ಸ್ನೇಹಿತರು ಜೊತೆಯಾಗಿ ಆತನ ಸಹಾಯಕ್ಕೆ ಬಂದಿದ್ದು, ಅವರೇ ಮದುವೆ ದಿಬ್ಬಣಕ್ಕಾಗಿ ವಧುವಿನ ಮನೆಗೆ ಹೋಗುವುದಕ್ಕೆ 30 ಇ- ರಿಕ್ಷಾಗಳನ್ನು ವ್ಯವಸ್ಥೆ ಮಾಡಿದ್ದಾರೆ. ಹೀಗೆ ಇ-ರಿಕ್ಷಾಗಳ ವ್ಯವಸ್ಥೆ ಮಾಡಿ ದಿಬ್ಬಣ ಹೊರಟಂತೆ, ಗ್ರಾಮಸ್ಥರು ಈ ಅಸಾಧಾರಣ ದೃಶ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು.

ಒಂದು ಅದ್ಭುತ ದೃಶ್ಯವಾಗಿ ಮಾರ್ಪಟ್ಟ ಮದುವೆ ದಿಬ್ಬಣ:

ಸ್ನೇಹಿತರ ಈ ಉದಾರತೆಯಿಂದಾಗಿ ಮದುವೆಯ ಉಡುಪನ್ನು ಧರಿಸಿದ ಮದುಮಗ ದುರ್ಗೇಶ್, ತಮ್ಮ ಸ್ನೇಹಿತರ ಬಗ್ಗೆ ಹೆಮ್ಮೆ ಹಾಗೂ ಸಂತೋಷದಿಂದ ಇ-ರಿಕ್ಷಾದ ಮೇಲೆ ಸವಾರಿ ಮಾಡಿದ್ದಾರೆ. ಸಿಂಗಾರಗೊಂಡ ಈ 30 ಇ-ರಿಕ್ಷಾಗಳು ಹಳ್ಳಿಯ ದಾರಿಯ ಮೂಲಕ ಒಟ್ಟಿಗೆ ಸಾಗಿದಾಗ ಅದೊಂದು ನೋಡುಗರ ಕಣ್ಣಿಗೆ ಅದ್ಭುತ ದೃಶ್ಯವಾಗಿ ಕಾಣಿಸಿತು. ಅಲ್ಲದೇ ದುರ್ಗೇಶ್ ಸ್ನೇಹಿತರ ಈ ಕ್ರಮವೂ ಒಂದು ಕ್ರಿಯೇಟಿವ್ ಆಗಿರುವ ಬಜೆಟ್ ಸ್ನೇಹಿ ಹಾಗೂ ಪರಿಸರ ಸ್ನೇಹಿ ದಿಬ್ಬಣವಾಗಿ ರೂಪುಗೊಂಡಿತ್ತು. ಈ ಕಾರ್ಯಕ್ಕೆ ಅನೇಕರು ದುರ್ಗೇಶ್ ಸ್ನೇಹಿತರನ್ನು ಶ್ಲಾಘಿಸಿದರು.

ಮೆರವಣಿಗೆ ಪ್ರಾರಂಭವಾದ ತಕ್ಷಣ, ಬೀದಿಗಳಲ್ಲಿ ಸಾಲುಗಟ್ಟಿ ನಿಂತ ಜನರು ನಗುತ್ತಲೇ ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡುವುದು ಕಂಡುಬಂತು. ಒಬ್ಬರಿಗೆ ನಿಜವಾದ ಸ್ನೇಹಿತರಿದ್ದರೆ, ಜೀವನದಲ್ಲಿ ಯಾವುದೇ ಸಮಸ್ಯೆಗಳು ಸಮಸ್ಯೆಯಲ್ಲ ಎಂದು ಅಲ್ಲಿನ ಜನ ಹೇಳುವುದು ಕೇಳಿಸುತ್ತಿತ್ತು.

ಇದನ್ನೂ ಓದಿ: ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ: ತನಿಖೆಗೆ ಡಿಜಿಸಿಎ ಆದೇಶ

ಹೀಗೆ ಇ-ರಿಕ್ಷಾದಲ್ಲಿ ದಿಬ್ಬಣ ಬಂದ ವರನ ಕಡೆಯವರನ್ನು ವಧುವಿನ ಕಡೆಯವರು ಅದ್ದೂರಿಯಾಗೆ ಸ್ವಾಗತಿಸಿದರು. ದುರ್ಗೇಶ್ ಅವರು ದುಮಾರಿಯಾ ಲಾಲಾ ಗ್ರಾಮದ ದಿವಂಗತ ಬುಲು ಪ್ರಸಾದ್ ಮತ್ತು ಅನಿತಾ ದೇವಿ ಅವರ ಪುತ್ರಿ ಶಿಲ್ಪಿಯನ್ನು ವಿವಾಹವಾದರು. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಸವಾಲುಗಳ ಹೊರತಾಗಿಯೂ, ವರನ ಸ್ನೇಹಿತರ ಉತ್ಸಾಹವು ಈ ಮದುವೆಯ ಆಚರಣೆಯನ್ನು ಚಿರಕಾಲ ಸ್ಮರಣೀಯವಾಗುಳಿಯುವಂತೆ ಮಾಡಿತು.