ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿರುವ ಹಿರಿಯ ಕಾಂಗ್ರೆಸ್ಸಿಗ ಶಶಿ ತರೂರ್‌ಗೆ ಪರೋಕ್ಷ ಟಾಂಗ್‌ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿ ಮೊದಲು’ ಎಂದು ವ್ಯಂಗ್ಯವಾಡಿದ್ದಾರೆ.

ನವದೆಹಲಿ (ಜೂ.26): ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿರುವ ಹಿರಿಯ ಕಾಂಗ್ರೆಸ್ಸಿಗ ಶಶಿ ತರೂರ್‌ಗೆ ಪರೋಕ್ಷ ಟಾಂಗ್‌ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿ ಮೊದಲು ಎಂದು ವ್ಯಂಗ್ಯವಾಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿಗೆ ಪತ್ರಕರ್ತರು, ಪ್ರಧಾನಿಯನ್ನು ಹೊಗಳಿ ತರೂರ್ ಬರೆದಿದ್ದ ಇತ್ತೀಚಿನ ಲೇಖನದ ಬಗ್ಗೆ ಕೇಳಿದರು. ಅದಕ್ಕೆ ಉತ್ತರಿಸಿದ ಖರ್ಗೆ, ನನಗೆ ಇಂಗ್ಲಿಷ್ ಓದಲು ಅಷ್ಟಾಗಿ ಬರುವುದಿಲ್ಲ.

ಆದರೆ ಅವರಿಗೆ (ತರೂರ್‌ಗೆ) ಇಂಗ್ಲಿಷ್ ಮೇಲೆ ಉತ್ತಮ ಹಿಡಿತವಿದೆ, ಆದ್ದರಿಂದ ನಾವು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸದಸ್ಯರನ್ನಾಗಿ ಮಾಡಿದ್ದೇವೆ. ನಮಗೆ ದೇಶ ಮೊದಲು. ಆದರೆ ಕೆಲವರು ಮಾತ್ರ ಮೋದಿ ಮೊದಲು ಮತ್ತು ರಾಷ್ಟ್ರ ನಂತರ ಎಂದು ಹೇಳುತ್ತಾರೆ. ಇದಕ್ಕೆ ನಾವೇನು ಮಾಡಬೇಕು? ಎಂದು ಪ್ರಶ್ನಿಸಿದರು. ಪಾಕ್‌ ವಿರುದ್ಧದ ಆಪರೇಶನ್‌ ಸಿಂದೂರ ನಂತರ ಮೋದಿ ಅವರಿಗೆ ತರೂರ್‌ ಹತ್ತಿರವಾಗಿದ್ದಾರೆ. ಇದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ಕೊಡಿ: ಬೆಂಗಳೂರನ್ನು ಸಿಂಗಾಪುರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿರುವುದು ಸಂತೋಷದ ವಿಚಾರ. ಆದರೆ, ಕಲ್ಯಾಣ ಕರ್ನಾಟಕ ಭಾಗವನ್ನು ಬೆಂಗಳೂರು-ಮೈಸೂರು ಮಾದರಿಯಲ್ಲಿ ಅಭಿವೃದ್ದಿ ಮಾಡಿದರೆ ಇಲ್ಲಿನ ಜನ ರಾಜ್ಯ ಸರ್ಕಾರಕ್ಕೆ ಚಿರಋುಣಿಯಾಗಿರುತ್ತಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು. ‘ಆರೋಗ್ಯ ಅವಿಷ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯನವರ ಮೈಸೂರು ಮತ್ತು ಡಿ.ಕೆ.ಶಿವಕುಮಾರ್‌ ಅವರ ಬೆಂಗಳೂರಿನಂತೆ ಈ ಪ್ರದೇಶದ ಅಭಿವೃದ್ಧಿ ಮಾಡಿದರೆ ಜನ ನಿಮ್ಮನ್ನು ಮರೆಯಲ್ಲ ಎಂದು ವೇದಿಕೆ ಮೇಲಿದ್ದ ಸಿಎಂ., ಡಿಸಿಎಂಗೆ ಅವರು ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2025-26ನೇ ಸಾಲಿಗೆ 5,000 ಕೋಟಿ ರೂ. ಅನುದಾನ ನೀಡಿದ್ದಾರೆ. ಅಷ್ಟೂ ಹಣವನ್ನು ಇದೇ ವರ್ಷದಲ್ಲಿ ಖರ್ಚು ಮಾಡುವ ಮೂಲಕ ಈ ಪ್ರದೇಶದ ಜನರ ಅಭ್ಯುದಯಕ್ಕೆ ಶ್ರಮಿಸಬೇಕು. ಇಂದಿಲ್ಲಿ ಚಾಲನೆ ನೀಡಿದ ಎಲ್ಲಾ ಕೆಲಸಗಳನ್ನು ಇದೇ ವರ್ಷದಲ್ಲಿ ಪೂರ್ಣಗೊಳಿಸಿ. ಮುಂದಿನ ವರ್ಷ ಮತ್ತೆ ಹೊಸ ಯೋಜನೆಗಳತ್ತ ಮುಂದಾಗಿ ಎಂದು ಸಲಹೆ ನೀಡಿದರು. ಈ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ.

ಹೀಗಾಗಿ, ಇಲ್ಲಿನ ಶಿಕ್ಷಣ ವ್ಯವಸ್ಥೆ, ಗುಣಮಟ್ಟ ಕುಂಠಿತವಾಗಿದೆ. ಗಣಿತ, ವಿಜ್ಞಾನ, ಆಂಗ್ಲ ಶಿಕ್ಷಕರ ಕೊರತೆ ಹೆಚ್ಚಿದೆ. ಬೇರೆ ಪ್ರದೇಶದಿಂದ ಇಲ್ಲಿಗೆ ನೇಮಕವಾಗುವ ಶಿಕ್ಷಕರು ಒಂದೇ ವರ್ಷದಲ್ಲಿ ವರ್ಗಾವಣೆ ಮಾಡಿಕೊಂಡು ಹೋಗುವ ದುಃಸ್ಥಿತಿ ಇಲ್ಲಿದೆ. ಪರಿಣಾಮ ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಈ ಪ್ರದೇಶದ ಜಿಲ್ಲೆಗಳನ್ನು ರ‍್ಯಾಂಕ್ ಪಟ್ಟಿಯಲ್ಲಿ ಕೆಳಗಿನಿಂದ ನೋಡಬೇಕಾದ ಅನಿವಾರ್ಯತೆ ಇದೆ. ಈ ಭಾಗದಲ್ಲಿ ಉದ್ಯೋಗ ನೇಮಕಾತಿಗೆ 371ಜೆ ಕಾಯ್ದೆಯಲ್ಲಿ ಹಣಕಾಸು ಇಲಾಖೆ ಅನುಮೋದನೆ ಪಡೆಯುವ ಅವಶ್ಯಕತೆ ಇಲ್ಲ. ಹೀಗಾಗಿ, ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಸ್ಥಳೀಯರಿಗೆ ಉದ್ಯೋಗ ನೀಡುವತ್ತ ಗಮನ ಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು.