ರಾಯಚೂರಿನಲ್ಲಿ ನಡೆದ ಬುಡಕಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 371(ಜೆ) ಜಾರಿಗೆ ಬರಲು ತಮ್ಮ ಪಾತ್ರವನ್ನು ಸ್ಮರಿಸಿಕೊಂಡ ಅವರು, ಪ್ರಧಾನಿ ಮೋದಿ ಅವರನ್ನು ತೀವ್ರವಾಗಿ ಟೀಕಿಸಿದರು.

ವರದಿ: ಜಗನ್ನಾಥ ಪೂಜಾರ್ , ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು: ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸಮಾರಂಭ ನಡೆಯಿತು. ‌ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ‌ನಡೆದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ನಾಮಕರಣ ಹಾಗೂ 936 ಕೋಟಿ ರೂಪಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ‌ನೀಡಿದ್ರು. ಅಲ್ಲದೇ 371(ಜೆ) ದಶಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ‌ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಚಾಟಿ ವಾಗ್ದಾಳಿ ‌ನಡೆಸಿದ್ರು. ಈಗ ದೇಶದ ಜನರು ಅದರಲ್ಲೂ ನಮ್ಮ ಕಲ್ಯಾಣ ‌ಕರ್ನಾಟಕದ ಜನರು ಜಾಗೃತರಾಗಿದ್ದಾರೆ. ತಮ್ಮ ಅಧಿಕಾರಕ್ಕಾಗಿ ಹೋರಾಟ ಮಾಡುವ ಶಕ್ತಿ ಬಂದಿದೆ. ಈ ಕಲ್ಯಾಣ ಕರ್ನಾಟಕಕ್ಕೆ 371(ಜೆ) ಸಿಗಬೇಕು ಅಂತ ಅನೇಕ ಹೋರಾಟಗಳು ಆಗಿದ್ದವು, ಆದ್ರೆ 371(ಜೆ) ಸಿಕ್ಕಿರಲಿಲ್ಲ. ಸೋನಿಯಾ ಗಾಂಧಿಯವರ ಆರ್ಶೀವಾದದಿಂದ ನಮ್ಮ ಭಾಗಕ್ಕೆ 371(ಜೆ) ಸಿಕ್ಕಿದೆ. ಅಲ್ಲದೆ ನಾನು ಕೇಂದ್ರದ ಮಂತ್ರಿ ಆಗದಿದ್ರೆ 371(ಜೆ) ತರಲು ಆಗುತ್ತಿರಲಿಲ್ಲ. ಇದನ್ನ ಈ ಭಾಗದ ಜನರು ಯಾವತ್ತೂ ಮರೆಯಬಾರದು ಎಂದು ತಿಳಿಸದ್ರು.

ಮೋದಿ ಕೆಳಮಟ್ಟದಲ್ಲಿ ನೋಡಬಾರದು, ಇದು ಸರಿಯಲ್ಲ: ಖರ್ಗೆ ಕಿಡಿ

ಪ್ರಧಾನಿ ನರೇಂದ್ರ ಪೆಹಲ್ಗಾಮ್ ದಾಳಿ ವೇಳೆ ಸರ್ವ ಪಕ್ಷಗಳ ಸಭೆ ಕರೆಯಲು ನಾವು ಹೇಳಿದ್ದೇವು. ಆಗ ಸರ್ವ ಪಕ್ಷಗಳ ಸಭೆ ವೇಳೆ ಬಿಹಾರದ ಚುನಾವಣೆ ಪ್ರಚಾರಕ್ಕೆ ‌ಮೋದಿ ಹೋಗಿದ್ರು. ದೇಶದಲ್ಲಿ ಇದ್ರೂ ಸರ್ವ ಪಕ್ಷಗಳ ಸಭೆಗೆ ಹಾಜರ್ ಆಗಲಿಲ್ಲ.

ಪ್ರಧಾನಿ ಮೋದಿ ವಿರೋಧ ಪಕ್ಷಗಳ ಬಗ್ಗೆ ಕೆಟ್ಟ ಭಾವನೆ ಇಟ್ಟುಕೊಂಡು ಕೆಳಮಟ್ಟದಲ್ಲಿ ವಿರೋಧ ಪಕ್ಷದವರನ್ನ ನೋಡಿದರೆ ನಮ್ಮ ದೇಶದ ಜನ ,ಯುವಕರು ಎಂದೂ ಕ್ಷಮಿಸಲ್ಲ. ಇದು ಸರಿಯಲ್ಲ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ರು.

ನಮ್ಮ ದೇಶದಲ್ಲಿ ಬುದ್ಧ ಬೇಕೋ, ಯುದ್ಧ ಬೇಕೋ- ಮಲ್ಲಿಕಾರ್ಜುನ ಖರ್ಗೆ

ಪ್ರಪಂಚದಲ್ಲಿ ಸಾಕಷ್ಟು ಯುದ್ದ ನಡೆದಿದೆ. ಇರಾನ್ ಮತ್ತು ಇಸ್ರೆಲ್ ಯುದ್ದ ನಡೆಯುತ್ತಿದೆ. ಫಿರ್ ಏಕ್ ಬಾರ್ ಟ್ರಂಪ್ ಸರ್ಕಾರ ಅಂತ ಮೋದಿ ಅಮೆರಿಕಗೆ ಹೋಗಿ ಹೇಳುತಿದ್ರು. ಆದ್ರೆ ಅಮೆರಿಕ ಟ್ಯಾಕ್ಸ್ ಬಗ್ಗೆ ಒಂದು ಮಾತು ಹೇಳಲಿಲ್ಲ. ಇರಾನ್ ನಮಗೆ ಎಲ್ಲಾ ಸಮಯದಲ್ಲೂ ಸಪೋರ್ಟ್ ಮಾಡ್ತಿದೆ. ಅಲ್ಲಿಂದ ಶೇ.50ರಷ್ಟು ಕ್ರೂಡ್ ಆಯಿಲ್ ಬರುತ್ತೆ. ಇರಾನ್ ನಲ್ಲಿ ಯುದ್ಧ ನಡೆದಿದೆ. ಇರಾನ್ ನಿಂದಲೇ ನಮಗೆ ಪೆಟ್ರೋಲ್ ಬರುವುದು. ಆದ್ರೆ ನಮ್ಮ ಪ್ರಧಾನಿ ಅದರ ಬಗ್ಗೆ ಬಾಯಿ ಬಿಚ್ಚಿ ಮಾತನಾಡುತ್ತಿಲ್ಲ. ನಾನು ವಿಶ್ವ ಗುರು ಇದಿನಿ ಅಂತ ಮೋದಿ ಹೇಳ್ತಾರೆ. ನಾವು ದೇಶದ ತುಂಬಾ ಮೆರೆದಾಡಲಿ ಅಂತ ಸಪೋರ್ಟ್ ಮಾಡಿಲ್ಲ.

ದೇಶದ ಜನರಿಗೆ ಊಟ ಬಟ್ಟೆ ವ್ಯವಸ್ಥೆ ಮಾಡಬೇಕು.‌ ಮೊದಲು ‌ನಮ್ಮ ಮನೆ ಸುಧಾರಣೆ ಮಾಡಬೇಕಾಗಿದೆ. ಆರ್ ಎಸ್ ಎಸ್ ಸಿಲೆಬಸ್ ಇವತ್ತು ಶಾಲೆ ಕಾಲೇಜು ಪಠ್ಯದಲ್ಲಿ ಬರುತ್ತಿದೆ. ದೇಶದಲ್ಲಿ 30ಲಕ್ಷಕ್ಕೂ ಅಧಿಕ ನೌಕರಿಗಳು ಖಾಲಿ ಇವೆ. ಆದ್ರೆ ನೌಕರಿಗಳ ಭರ್ತಿ ಆಗುತ್ತಿಲ್ಲ.ಹೀಗಾಗಿ ಯುವಕರು ಬೀದಿಪಾಲು ಆಗುತ್ತಿದ್ದಾರೆ. ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು. ಆಗ ಮಾತ್ರ ದೇಶಗಳು ಬೆಳೆಯುತ್ತವೆ . ಬುದ್ಧ ಬೇಕೋ ಅಥವಾ ಯುದ್ಧ ಬೇಕೋ, ಯುದ್ಧದಿಂದಾಗಿ ಇರಾನ್ ಮತ್ತು ಇಸ್ರೇಲ್ ನಲ್ಲಿ ಅಶಾಂತಿ ಉಂಟಾಗುತ್ತಿದೆ. ಬೃಹತ್ ಕಟ್ಟಡಗಳು ಧ್ವಂಸ ಆಗುತ್ತಿವೆ. 

ಯುದ್ದ ಮಾಡಿದ್ರೆ ಏನೂ ಉಳಿಯಲ್ಲ. ಇಸ್ರೆಲ್ ಇರಾನ್ ಯುದ್ದ ನಿಲ್ಲಬೇಕು, ನಮ್ಮ ಪಕ್ಷ ಈ ಬಗ್ಗೆ ಚಿಂತನೆ ಮಾಡಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಅನೇಕರ ಜೊತೆ ಮಾತನಾಡಿದ್ದೇನೆ. ಪ್ರಪಂಚದಲ್ಲಿ ಶಾಂತಿ ಬರಬೇಕು. ಯಾವುದೇ ದೇಶಯಿರಲಿ ಮುಖ್ಯವಲ್ಲ ಎಲ್ಲರೂ ಸುರಕ್ಷಿತವಾಗಿರಬೇಕು ಎಂದು ಮಲ್ಲಿಕಾರ್ಜುನ ಖರ್ಚು ಅಭಿಪ್ರಾಯ ವ್ಯಕ್ತಪಡಿಸಿದರು.