Asianet Suvarna News Asianet Suvarna News

ಉತ್ತರ ಭಾರತಕ್ಕೆ ಮತ್ತೆ ಜಲಾಘಾತ: 3 ದಿನದಲ್ಲಿ ವರುಣನಬ್ಬರಕ್ಕೆ 128 ಮಂದಿ ಬಲಿ

ಕಂಡು ಕೇಳರಿಯದ ಮಳೆಗೆ ಮತ್ತೆ ಉತ್ತರ ಭಾರತದ 10 ರಾಜ್ಯಗಳು ತತ್ತರಿಸಿದ್ದು, ಜಲಪ್ರಳಯ ಸೃಷ್ಟಿಯಾಗಿದೆ. ಎಲ್ಲ ರಾಜ್ಯಗಳಿಗಿಂತ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ರಾಜ್ಯವಾದ ಹಿಮಾಚಲ ಪ್ರದೇಶ ಹೆಚ್ಚು ಬಾಧಿತವಾಗಿವೆ.

Flooding again in North India 128 people died in 3 days combined attack of West wind, Monsoon winds are reason for the heavy rains akb
Author
First Published Jul 11, 2023, 6:56 AM IST | Last Updated Jul 11, 2023, 7:24 AM IST

ನವದೆಹಲಿ: ದೇಶದ ಉತ್ತರ ಭಾಗದಲ್ಲಿ ಅನಾಹುತ ಸೃಷ್ಟಿಸಿರುವ ಭಾರೀ ಮಳೆಗೆ ಹವಾಮಾನ ಬದಲಾವಣೆಗೆ ಕಾರಣವಾಗುವ ಪಾಶ್ಚಿಮಾತ್ಯ ಮಾರುತಗಳು ಮತ್ತು ಮುಂಗಾರು ಮಾರುತಗಳು ಒಂದಾಗಿರುವುದೇ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಉಪಗ್ರಹ ಚಿತ್ರಗಳು ನೀಡಿರುವ ಈ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಕೂಡಾ ಖಚಿತಪಡಿಸಿದೆ.  2013ರಲ್ಲಿ ಉತ್ತರಾಖಂಡದಲ್ಲಿ ‘ಹಿಮಾಲಯ ಸುನಾಮಿ’ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಭಾರೀ ಮಳೆ, ಪ್ರವಾಹಕ್ಕೂ (flood) ಇದೇ ರೀತಿಯ ಬೆಳವಣಿಗೆ ಕಾರಣವಾಗಿತ್ತು. ಇದೀಗ ಸರಿಯಾಗಿ 10 ವರ್ಷಗಳ ನಂತರ ಮತ್ತೆ ಅದೇ ರೀತಿಯ ಬೆಳವಣಿಗೆ ಕಾಣಿಸಿಕೊಂಡು ಉತ್ತರ, ಪಶ್ಚಿಮ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತಕ್ಕೆ ಕಾರಣವಾಗಿದೆ.

ಪಾಶ್ಚಿಮಾತ್ಯ ಮಾರುತ:

ಮೆಡಿಟರೇನಿಯನ್‌ ಪ್ರದೇಶದಲ್ಲಿ ಸೃಷ್ಟಿಯಾಗುವ ವಾಯುಭಾರತ ಕುಸಿತ ಅಥವಾ ಉಷ್ಣವಲಯದ ಮಾರುತಗಳು ಪೂರ್ವ ವಲಯವಾದ ಮಧ್ಯಪ್ರಾಚ್ಯ, ಇರಾನ್‌ ಕಡೆ ತೆರಳುವ ವೇಳೆ ಭಾರತೀಯ ಉಪಖಂಡ ವಲಯದಲ್ಲಿ ಹವಾಮಾನ ಬದಲಾವಣೆಗೆ ಕಾರಣವಾಗಿ ಭಾರೀ ಮಳೆ ಮತ್ತು ಹಿಮಪಾತಕ್ಕೆ ಕಾರಣವಾಗುತ್ತದೆ. ಸದ್ಯ ದೇಶದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಕಾರಣಕ್ಕಾಗಿ ಮಳೆಯಾಗುತ್ತಿದೆ.

ಮುಂಗಾರು ಮಾರುತ:

ಇನ್ನು ಜುಲೈ ತಿಂಗಳಲ್ಲಿ ಭಾರತೀಯ ಉಪಖಂಡದಲ್ಲಿ ಬೀಸುವ ಮುಂಗಾರು ಮಾರುತಗಳು ದೇಶಾದ್ಯಂತ ಮಳೆ ಸುರಿಸುತ್ತವೆ. ಅದೇ ರೀತಿಯಲ್ಲಿ ಇದೀಗ ನೈಋುತ್ಯ ಮುಂಗಾರು ಮಾರುತಗಳು ದೇಶದ ಉತ್ತರ ಭಾಗ ಸೇರಿದಂತೆ ದೇಶಾದ್ಯಂತ ಮಳೆ ಸುರಿಸುತ್ತಿದೆ. ಈ ಪೈಕಿ ಉತ್ತರ ಭಾಗದಲ್ಲಿ ಪಾಶ್ಚಿಮಾತ್ಯ ಮಾರುತ ಮತ್ತು ಮುಂಗಾರು ಮಾರುತ ಎರಡೂ ಒಂದಾದ ಕಾರಣ ಮಳೆಯ ಪ್ರಮಾಣ ಭಾರೀ ಹೆಚ್ಚಿದೆ.

ಭೂಕುಸಿತಕ್ಕೆ ಕೊಚ್ಚಿ ಹೋದ ಗ್ರಾಮ; ಕಟ್ಟಡ, ಸೇತುವೆ, ವಾಹನ, ಮನೆ ನೀರು ಪಾಲು!

3 ದಿನದಲ್ಲಿ ವರುಣನಬ್ಬರಕ್ಕೆ 128 ಮಂದಿ ಬಲಿ

 ಕಂಡು ಕೇಳರಿಯದ ಮಳೆಗೆ ಮತ್ತೆ ಉತ್ತರ ಭಾರತದ 10 ರಾಜ್ಯಗಳು ತತ್ತರಿಸಿದ್ದು, ಜಲಪ್ರಳಯ ಸೃಷ್ಟಿಯಾಗಿದೆ. ಎಲ್ಲ ರಾಜ್ಯಗಳಿಗಿಂತ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ರಾಜ್ಯವಾದ ಹಿಮಾಚಲ ಪ್ರದೇಶ ಹೆಚ್ಚು ಬಾಧಿತವಾಗಿವೆ. ಅನೇಕ ರಾಜ್ಯಗಳಲ್ಲಿ ನದಿಗಳು ಉಕ್ಕೇರಿದ್ದು, ಭೂಕುಸಿತ ಉಂಟಾಗಿದೆ. ಪ್ರವಾಹದಲ್ಲಿ ಕಟ್ಟಡಗಳು, ಮನೆ-ಮಠಗಳು, ವಾಹನಗಳು ಕೊಚ್ಚಿಹೋಗಿವೆ. ಸೋಮವಾರ ಮಳೆ ಸಂಬಂಧಿ ಘಟನೆಗಳಿಗೆ ನಾಲ್ವರು ಬಲಿಯಾಗಿದ್ದಾರೆ. ಇನ್ನು ಕಳೆದ 3 ದಿನಗಳಿಂದ ಸೃಷ್ಟಿಯಾಗಿರುವ ಪ್ರವಾಹಕ್ಕೆ ಒಟ್ಟು 128 ಜನರು ಬಲಿಯಾಗಿದ್ದಾರೆ.

ಪ್ರವಾಹದ ಭೀಕರತೆಯನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ (Narendra Modi) ಖುದ್ದು ಮಧ್ಯಪ್ರವೇಶ ಮಾಡಿ ಹಿರಿಯ ಮಂತ್ರಿಗಳ ಜತೆ ಸಭೆ ನಡೆಸಿದ್ದಾರೆ. ಹಿಮಾಚಲ ಹಾಗೂ ಉತ್ತರಾಖಂಡ (Uttarakhand) ಮುಖ್ಯಮಂತ್ರಿಗಳ ಜತೆ ಮಾತನಾಡಿ ಪರಿಸ್ಥಿತಿ ನಿಭಾಯಿಸುವ ಸಲಹೆ ಸೂಚನೆಗಳನ್ನು ನೀಡಿದ್ದಾರೆ. 39 ರಾಷ್ಟ್ರೀಯ ವಿಪತ್ತು ನಿಗ್ರಹ ಪಡೆಯ ತುಕಡಿಗಳು ಹಾಗೂ ವಿವಿಧ ರಾಜ್ಯಗಳ ವಿಪತ್ತು ನಿಗ್ರಹ ಪಡೆಗಳು ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿವೆ. 
ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ 3 ದಿನಗಳ ಕಾಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಆದರೆ ಇಷ್ಟೊಂದು ಪ್ರವಾಹ ಸೃಷ್ಟಿಯಾದರೂ, ಇದರ ಮುನ್ಸೂಚನೆ ಹವಾಮಾನ ಇಲಾಖೆಗೆ ಲಭಿಸಿರಲಿಲ್ಲವೇ ಎಂಬುದು ಪ್ರಶ್ನೆಯಾಗಿದ್ದು, ದೇಶದ ಹವಾಮಾನ ಮುನ್ಸೂಚನಾ ವ್ಯವಸ್ಥೆ ಇನ್ನಷ್ಟು ಬಲವಾಗಬೇಕು ಎಂಬ ವಾದಕ್ಕೆ ಪುಷ್ಟಿನೀಡಿದೆ.

ಭಾರಿ ಮಳೆಗೆ ತತ್ತರಿಸಿದ ಭಾರತ, 5 ರಾಜ್ಯಗಳ ಶಾಲಾ ಕಾಲೇಜಿಗೆ ರಜೆ!

ಹಿಮಾಚಲ ಹೆಚ್ಚು ಬಾಧಿತ:

ಹಿಮಾಚಲ ಪ್ರದೇಶದಲ್ಲಿ ಸೋಮವಾರ ನಾಲ್ವರು ಅಸುನೀಗಿದ್ದು, ಒಟ್ಟಾರೆ 3 ದಿನದಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ. ಹೆದ್ದಾರಿಗಳ ಭೂಕುಸಿತದ ಕಾರಣ ಪ್ರವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡು 200 ಜನರು ಸಿಲುಕಿಕೊಂಡಿದ್ದಾರೆ. ವಿವಿಧೆಡೆ ಸಿಲುಕಿದ 300 ಜನರನ್ನು ರಕ್ಷಿಸಲಾಗಿದೆ. ರಾಜ್ಯದಲ್ಲಿ ನದಿಗಳು ಉಕ್ಕೇರಿ ಅಬ್ಬರಿಸುತ್ತಿರುವ ದೃಶ್ಯಗಳನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ರಾಜ್ಯದ ಸುಮಾರು 5000 ಸ್ಥಳಗಳಲ್ಲಿ ಪೈಪ್‌ಗಳಿಗೆ ಹಾನಿಯಾಗಿ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಪ್ರವಾಹದಿಂದ 785.51 ಕೋಟಿ ರು. ಹಾನಿಯಾಗಿದೆ. ರಾಜ್ಯದಲ್ಲಿ ಭಾರೀ ಪ್ರಮಾಣದ ರಸ್ತೆ, ಸೇತುವೆ, ಹೆದ್ದಾರಿ, ಕಟ್ಟಡಗಳು ಕೊಚ್ಚಿ ಹೋಗಿವೆ.

ಉಳಿದಂತೆ ಉತ್ತರ ಪ್ರದೇಶದಲ್ಲಿ 3 ದಿನದಲ್ಲಿ 34, ಉತ್ತರಾಖಂಡದಲ್ಲಿ 5, ದಿಲ್ಲಿಯಲ್ಲಿ 12 ಹಾಗೂ ರಾಜಸ್ಥಾನದಲ್ಲಿ 5 ಮಂದಿ ಸಾವನ್ನಪ್ಪಿದ್ದು, ಇಲ್ಲಿ ಮಳೆ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಮಧ್ಯಪ್ರದೇಶ (Madhya Pradesh), ಗುಜರಾತ್‌, ಹರ್ಯಾಣ(Haryana), ಜಮ್ಮು-ಕಾಶ್ಮೀರ, ಪಂಜಾಬ್‌ನಲ್ಲೂ ಜನಜೀವನ ಅಸ್ತವ್ಯಸ್ತವಾಗಿದೆ ಹಾಗೂ ಶಾಲೆ-ಕಾಲೇಜಿಗೆ ರಜೆ ಸಾರಲಾಗಿದೆ.
 

Latest Videos
Follow Us:
Download App:
  • android
  • ios