Five state By election result: ಐದು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಗುಜರಾತ್‌ನ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಬಿಜೆಪಿ ಮತ್ತು ಇನ್ನೊಂದರಲ್ಲಿ ಎಎಪಿ ಗೆಲುವು ಸಾಧಿಸಿದೆ. 

Assembly Bypoll Election Results: ದೇಶದೆಲ್ಲೆಡೆ ಐದು ಕೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬಿದ್ದಿದೆ. ಉಪಚುನಾವಣೆ ನಡೆದ ಕ್ಷೇತ್ರಗಳು ಹಾಗೂ ಅಲ್ಲಿ ಗೆದ್ದ ಪಕ್ಷಗಳ ವಿವರ ಇಲ್ಲಿದೆ ನೋಡಿ.

  • ಗುಜರಾತ್‌ನ ವಿಶಾವದರ್ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಗೆಲುವು ಬಿಜೆಪಿಗೆ ಸೋಲು
  • ಪಂಜಾಬ್‌ನ ಲೂಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರ ಎಎಪಿಗೆ ಗೆಲುವು
  • ಕೇರಳದ ನಿಲಂಬೂರ್ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು
  • ಪಶ್ಚಿಮ ಬಂಗಾಳದ ಕಾಳಿಗಂಜ್ ವಿಧಾನಸಭಾ ಕ್ಷೇತ್ರ: ಆಡಳಿತರೂಢ ಟಿಎಂಸಿ ಗೆಲುವು
  • ಗುಜರಾತ್‌ನ ಕಾಡಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಗೆಲುವು

ವಿಶಾವದರ್ ಉಪಚುನಾವಣೆ(Visavadar Bypoll Result)

2022 ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದ ಭೂಪೇಂದ್ರ ಭಯಾನಿ ಅವರ ರಾಜೀನಾಮೆಯಿಂದ ಇಲ್ಲಿ ಚುನಾವಣೆ ನಡೆದಿದೆ. ಮೂರು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ವಿಧಾನಸಭಾ ಸ್ಥಾನ ಭದ್ರಪಡಿಸಿಕೊಂಡ ಐದು ಎಎಪಿ ನಾಯಕರಲ್ಲಿ ಭೂಪೇಂದ್ರ ಭಯಾನಿ ಕೂಡ ಒಬ್ಬರಾಗಿದ್ದರು. ಈ ಮೂಲಕ ಗುಜರಾತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷವು ತಮ್ಮ ಚುನಾವಣಾ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಗಮನಾರ್ಹ ಸಾಧನೆ ಮಾಡಿತ್ತು. ಆದರೆ ಒಂದು ವರ್ಷದೊಳಗೆ ಭೂಪೇಂದ್ರ ಭಯಾನಿ ಅವರು ಪಕ್ಷ ತೊರೆದು ಬಿಜೆಪಿ ಸೇರಿದರು. ಹೀಗಾಗಿ ಇಲ್ಲಿ ಉಪ ಚುನಾವಣೆ ನಡೆದಿದೆ.

ಈಗ ನಡೆದ ಉಪ ಚುನಾವಣೆಯಲ್ಲಿ ಇಲ್ಲಿ ಕಿರಿಟ್ ಪಟೇಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದರೆ ಅವರಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧ್ಯವಾಗಿಲ್ಲ. ಇಲ್ಲಿ ಎಎಪಿಯ ಗೋಪಾಲ್ ಇಟಾಲಿಯಾ 17,500 ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರವೂ 2015 ರ ಪಾಟಿದಾರ್ ಆಂದೋಲನದ ಕೇಂದ್ರಬಿಂದುವಾಗಿತ್ತು.

ನಿಲಂಬೂರ್ ಉಪಚುನಾವಣೆ(Nilambur Bypoll Result)

ಕೇರಳದ ನಿಲಂಬೂರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಭೇರಿ ಬಾರಿಸಿದೆ. ಇಲ್ಲಿ ಯುಡಿಎಫ್‌ನ ಆರ್ಯದಾನ್ ಶೌಕತ್ ಅವರು ಸಿಪಿಐಎಂನ ಅಭ್ಯರ್ಥಿ ಎಂ ಸ್ವರಾಜ್ ಅವರನ್ನು 11,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ 1987 ರಿಂದ 2011 ರವರೆಗೆ ತನ್ನದೇ ಸುಪರ್ದಿಯಲ್ಲಿದ್ದ ಈ ಕೇತ್ರವನ್ನು 14 ವರ್ಷಗಳ ಬಳಿಕ ಯುಡಿಎಫ್ ಮರಳಿ ಪಡೆದಿದೆ.

2016 ಮತ್ತು 2021 ರಲ್ಲಿ ನೀಲಂಬೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ.ವಿ. ಅನ್ವರ್ ಗೆದ್ದಿದ್ದರು. ಆದರೆ ಅವರು ಸ್ಥಾಪಿಸಿದ್ದ ಹೊಸ ಪಕ್ಷವಾದ ಡೆಮಾಕ್ರಟಿಕ್ ಮೂವ್‌ಮೆಂಟ್ ಆಫ್ ಕೇರಳ ಅಲ್ಲಿ ತೃಣಮೂಲ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡ ನಂತರ ಜನವರಿಯಲ್ಲಿ ಅವರು ರಾಜೀನಾಮೆ ನೀಡಿದರು. ಹೀಗಾಗಿ ಇಲ್ಲಿ ಉಪಚುನಾವಣೆ ಘೋಷಣೆಯಾಗಿತ್ತು.

ಕಾಳಿಗಂಜ್ ಉಪಚುನಾವಣೆ (Kaliganj Bypoll Result)

ಪಶ್ಚಿಮ ಬಂಗಾಳದ ಕಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಅಲಿಫಾ ಅಹ್ಮದ್ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಆಶಿಷ್ ಘೋಷ್ ಅವರನ್ನು 50 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. ಕಾಳಿಗಂಜ್ ಕ್ಷೇತ್ರದ ಹಾಲಿ ಶಾಸಕ ತೃಣಮೂಲ ಕಾಂಗ್ರೆಸ್‌ನ ನಾಸಿರುದ್ದೀನ್ ಅಹ್ಮದ್ ಅವರ ನಿಧನದಿಂದಾಗಿ ಇಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ತಂದೆಯ ನಿಧನದ ನಂತರ ಈ ಕ್ಷೇತ್ರದಲ್ಲಿ ಅವರ ಪುತ್ರಿ ಅಲಿಫಾ ಅಹ್ಮದ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಾಳಿಗಂಜ್ ಮುಸ್ಲಿಂ ಮತಗಳೇ ಪ್ರಧಾನವಾಗಿರುವ ಕ್ಷೇತ್ರವಾಗಿದೆ. ಇಲ್ಲಿನ ಜನಸಂಖ್ಯೆಯ ಶೇಕಡಾ 54 ರಷ್ಟು ಜನ ಮುಸ್ಲಿಮರಾಗಿದ್ದಾರೆ.

ಲುಧಿಯಾನ ಪಶ್ಚಿಮ ಉಪಚುನಾವಣೆ(Ludhiana West Bypoll Result)

ಪಂಜಾಬ್‌ನ ಲೂಧಿಯಾನ ಪಶ್ಚಿಮ ವಿಧಾನಸಭಾ ಕೇತ್ರದಲ್ಲಿ ಎಎಪಿ ಗೆಲುವು ಸಾಧಿಸಿದೆ. ಇಲ್ಲಿ ಎಎಪಿಯ ಸಂಜಯ್ ಅರೋರಾ ಅವರು ಕಾಂಗ್ರೆಸ್‌ನ ಭರತ್ ಅಶು ಅವರನ್ನು 10 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ. ಈ ಸ್ಥಾನವನ್ನು ಉಳಿಸಿಕೊಳ್ಳಲು ಎಎಪಿ ಸರ್ವ ಪ್ರಯತ್ನ ಮಾಡಿತ್ತು. ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಸಂಜಯ್ ಅರೋರಾ ಪರ ಪ್ರಚಾರ ಮಾಡಿದ್ದರು. ಅವರ ಪ್ರಯತ್ನ ಈಗ ಯಶಸ್ವಿಯಾಗಿದೆ. ಎಎಪಿ ಶಾಸಕ ಗುರುಪ್ರೀತ್ ಗೋಗಿ ಜನವರಿಯಲ್ಲಿ ನಿಧನರಾದ ಕಾರಣ ಈ ಸ್ಥಾನ ಖಾಲಿಯಾಗಿತ್ತು.

ಕಾಡಿ ಉಪ ಚುನಾವಣೆ(Kadi Bypoll Result)

ಗುಜರಾತ್‌ನ ಕಾಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ರಾಜೇಂದ್ರ ಚಾವ್ಡಾ ಅವರು ಕಾಂಗ್ರೆಸ್‌ನ ರಮೇಶ್ ಚಾವ್ಡಾ ಅವರನ್ನು ಸುಮಾರು 40,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ಶಾಸಕರಾಗಿದ್ದ ಕರ್ಷನ್ ಸೋಲಂಕಿ ಅವರು ಫೆಬ್ರವರಿಯಲ್ಲಿ ನಿಧನರಾದ ಹಿನ್ನೆಲೆ ಇಲ್ಲಿ ಉಪಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ಗೆಲ್ಲುವ ಮೂಲಕ ತನ್ನ ಸ್ಥಾನ ಉಳಿಸಿಕೊಂಡಿದೆ.