ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ ನರೇಂದ್ರ ಮೋದಿ, ಬಿಜೆಪಿ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂಬ ಭಯ ಕಾಂಗ್ರೆಸ್‌ನವರಿಗೆ ಇದೆ. ಅದಕ್ಕಾಗಿಯೇ ಅವರು ಈ ನೀತಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ ಮಾಡಿದ್ದಾರೆ.
ಕಲಬುರಗಿ (ಜೂ.15): ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದರೆ ನರೇಂದ್ರ ಮೋದಿ, ಬಿಜೆಪಿ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂಬ ಭಯ ಕಾಂಗ್ರೆಸ್‌ನವರಿಗೆ ಇದೆ. ಅದಕ್ಕಾಗಿಯೇ ಅವರು ಈ ನೀತಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ ಮಾಡಿದ್ದಾರೆ. ನಗರದಲ್ಲಿ ಶನಿವಾರ ನಡೆದ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರ ಸಂಕಿರಣದಲ್ಲಿ ಮಾತನಾಡಿ, ಬ್ರಿಟೀಷರು ಬರುವ ಮುನ್ನವೇ ಭಾರತ ಒಂದು ದೇಶವಾಗಿತ್ತು. ಹಾಗಾಗಿಯೇ ಕಾಶಿಗೆ ಹೋದವರು ರಾಮೇಶ್ವರಕ್ಕೆ ಹೋಗಬೇಕು ಎನ್ನುವ ಅಲಿಖಿತ ನಿಯಮವಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಎಂದ ತಕ್ಷಣ ಸದ್ಯ ಭಾರತದಲ್ಲಿ ಕೆಲವರಿಗೆ ತಲೆ ಕೆಡುತ್ತಿದೆ.
ವಿಪಕ್ಷಗಳು ವಿರೋಧ ಮಾಡಿದ್ದ ಒನ್ ನೇಷನ್ ಒನ್ ರೇಷನ್ ಕಾರ್ಡ್, ಒನ್ ನೇಷನ್ ಒನ್ ರ್‍ಯಾಂಕ್, ಒನ್ ನೇಷನ್ ಒನ್ ಗ್ರಿಡ್ ಜಾರಿಯಾಗಿವೆ. ಮುಂದೆ ಒನ್ ನೇಷನ್ ಒನ್ ಲೀಡರ್ ಮಾಡಿ ಬಿಡ್ತಾರೆ ಅಂತ ಕಾಂಗ್ರೆಸ್‌ಗೆ ಭಯವಿದೆ. ಇದು ನಿಮಗೂ ಅನ್ವಯವಾಗಲ್ವಾ ಅಂತ ಕೇಳಿದರೆ ನಮ್ಮಲ್ಲಿ ಲೀಡರ್ ಇಲ್ಲ ಅಂತಿದ್ದಾರೆ. ಅವರಿಗೆ ನಾಯಕರನ್ನೂ ನಾವೇ ಕೊಡಬೇಕಾಗಿದೆ ಎಂದು ವ್ಯಂಗ್ಯವಾಡಿದರು. ಯಾರೂ ಒನ್ ನೇಷನ್ ಒನ್ ಎಲೆಕ್ಷನ್‌ಗೆ ಗಾಬರಿಯಾಗುವ ಅಗತ್ಯವಿಲ್ಲ. ಭಾರತ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದು, 2047ಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಒನ್ ಎಲೆಕ್ಷನ್ ನೀತಿಯಿಂದ ದೇಶದ ಆರ್ಥಿಕತೆಗೆ ನಾಲ್ಕುವರೆ ಲಕ್ಷ ಕೋಟಿ ರು. ಉಳಿತಾಯ ಆಗಲಿದ್ದು, ದೇಶದ ಜಿಡಿಪಿಯಲ್ಲಿ 1.5% ಹೆಚ್ಚಳ ಆಗುತ್ತದೆ ಎಂದರು.
ಸಿಎಂ, ಡಿಸಿಎಂ ರಾಜೀನಾಮೆ ನೀಡಲಿ: ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತದ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ ಮನೆಗೆ ಹೋಗಬೇಕು ಎಂಬುದು ನಮ್ಮ ಮೊದಲ ಡಿಮ್ಯಾಂಡ್. ಜನರು ಕಾಲ್ತುಳಿತಕ್ಕೆ ಮೃತಪಟ್ಟಿದ್ದನ್ನು ಕಮಿಷನರ್ ದಯಾನಂದ ನಮಗೆ ತಿಳಿಸಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಮೊದಲು ಡಿ.ಕೆ. ಶಿವಕುಮಾರ ಅವರನ್ನು ಅಮಾನತು ಮಾಡಿ ಎಂದ ಅವರು, ನಿಂಬಾಳ್ಕರ್ ನಿಮ್ಮದೇ ಅಧಿಕಾರಿ, ಏನು ಮಾಡುತ್ತಿದ್ದರು ಅವರು? ನಿಂಬಾಳ್ಕರ್ ನಿಮ್ಮ ಪಕ್ಷದ ಕಾರ್ಯಕರ್ತ, ಅವರನ್ನು ಏಕೆ ಅಮಾನತು ಮಾಡಿಲ್ಲ? ಅವರನ್ನು ಕೇವಲ ವರ್ಗಾವಣೆ ಏಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬೇಕಾದವರಿಗೆ ಬೆಣ್ಣೆ, ಬೇಡವಾದವರಿಗೆ ಸುಣ್ಣನಾ? ಎಂದ ಅವರು, ಬೇಗಾನಿ ಶಾದಿ ಮೇ ಅಬ್ದುಲ್ ದಿವಾನಾ... ಶಾಯರಿ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
