ಎಕ್ಸ್‌ಪ್ರೆಸ್‌ವೇಯಿಂದ ಪ್ರಯಾಣದ ಮಿತಿ ಅರ್ಧಕ್ಕೆ ಕಡಿಮೆಯಾಗುತ್ತದೆ. ಆದರೆ ಅಪಾಯವೂ ಅಷ್ಟೇ ಇದೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಅತೀವೇಗದ ಪರಿಣಾಮ ಕಾರು ಟ್ರಕ್‌ಗೆ ಡಿಕ್ಕಿಯಾಗಿ ಐವರು ಮೃತಪಟ್ಟ ಘಟನೆ ನಡೆದಿದೆ.
ಸುಲ್ತಾನಪುರ(ಮಾ.12): ಭಾರತದಲ್ಲಿ ರಸ್ತೆ ಅಪಘಾತ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅತೀ ವೇಗ, ನಿಯಮಗಳ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣಗಳಿಂದ ಅಪಘಾತ ಸಂಭವಿಸುತ್ತಿದೆ. ಅದರಲ್ಲೂ ಎಕ್ಸ್‌ಪ್ರೆಸ್‌ವೇನಲ್ಲಿ ಅತೀವೇಗದ ಪರಿಣಾಮ ಅಪಘಾತದ ಪ್ರಮಾಣ ಜಾಸ್ತಿಯಾಗಿದೆ. ಇದೀಗ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಅತೀವೇಗದಿಂದ ಕಾರು ಟ್ರಕ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ವೇಳೆ ಯುಪಿಯ ಸುಲ್ತಾನಪುರ್ ಜಿಲ್ಲೆ ಬಳಿ ಈ ಘಟನೆ ನಡೆದಿದೆ.
ಮೃತರನ್ನು 19 ವರ್ಷದ ಸಾಹಿಲ್ ಖಂದ್, ಶಾರುಖ್(25), ಸೈನಾ ಖಟೂನ್(37), ಜಮೀಲಾ(33) ಹಾಗೂ ರುಕ್ಸರ್(31) ಎಂದು ಗುರುತಿಸಲಾಗಿದೆ. ದೆಹಲಿಯಿಂದ ಬಿಹಾರದ ಸಸರಾಂಗೆ ತೆರಳಲು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಮೂಲಕ ಸಾಗಿದ್ದಾರೆ. ಅತೀ ವೇಗದದಲ್ಲಿ ಕಾರು ಚಲಾಯಿಸಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದ ದಿನವೇ ಅಪಘಾತ, ಮೂವರಿಗೆ ಗಾಯ!
ಅಪಘಾತ ಸಂಭವಿಸಿದ ಬೆನ್ನಲ್ಲೇ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆ ಸೇರುವ ಮೊದಲೇ ಐವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಿಂದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಭೀಕರ ಅಪಘಾತ ಎಕ್ಸ್‌ಪ್ರೆಸ್‌ವೇನಲ್ಲಿನ ಅತೀವೇಗದ ಚಾಲನೆಗೆ ನೀಡಿದ ಮುನ್ನಚ್ಚೆರಿಕಿಯಾಗಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳ ಪ್ರಮಾಣ ಇತರ ಹೆದ್ದಾರಿಗಳಿಗಿಂತ ಕಡಿಮೆಯಾಗಿದೆ. ಆದರೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳು ಅತ್ಯಂತ ಭೀಕರ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇತ್ತ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಎಕ್ಸ್‌ಪ್ರೆಸ್‌ವೇ ಅವೈಜ್ಞಾನಿಕ ಅನ್ನೋ ಮಾತುಗಳು ಕೇಳಿಬಂದಿದೆ.
ರಸ್ತೆ ಅಪಘಾತ ವೇಳೆ ಗಾಯಾಳುಗಳ ಚಿಕಿತ್ಸೆಗೆ ತರಬೇತಿ: ಏನಿದು ರಾಸ್ತ ಟ್ರೈನಿಂಗ್?
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಈ ಹೆದ್ದಾರಿಯಲ್ಲೂ ಅಪಘಾತ ಸಂಖ್ಯೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಹಿಂದೆ ಇದ್ದ ಮೈಸೂರು ಬೆಂಗಳೂರು ರಸ್ತೆಯಲ್ಲಿನ ಅಪಘಾತ ಸಂಖ್ಯೆ ನೋಡಿದ್ದೀರಾ ಅನ್ನೋ ತಿರುಗೇಟುಗಳು ಕೂಡ ವ್ಯಕ್ತವಾಗಿದೆ. ಆದರೆ ಎಕ್ಸ್‌ಪ್ರೆಸ್‌ವೇನಲ್ಲಿ ನಿಯಮಿತ ವೇಗದಲ್ಲಿ ಸಂಚರಿಸಿದರೆ ಒಳಿತು. ಇಲ್ಲದಿದ್ದರೆ ಅಪಾಯ ಹೆಚ್ಚು ಅನ್ನೋದು ಸತ್ಯ.
ಒಡಿಶಾದ ಅಂಗುಲು ಜಿಲ್ಲಿಯೆಲಲ್ಲಿ ಇಂದು ತ್ರಿಬಲ್ ರೈಡಿಂಗ್ ಮೂಲಕ ಸಾಗುತ್ತಿದ್ದ ಬೈಕ್ ರೈಡರ್ಸ್ ಜೀಪ್‌ಗೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಅತೀ ವೇಗದಿಂದ ಸಾಗುತ್ತಿದ್ದ ಬೈಕ್ ಸವಾರರು ಜೀಪ್‌ಗೆ ಡಿಕ್ಕಿಯಾಗಿದ್ದಾರೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
