ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಯಾದ ದಿನವೇ ಅಪಘಾತ, ಮೂವರಿಗೆ ಗಾಯ!
ಅಂದಾಜು ಎಂಟೂವರೆ ಸಾವಿರ ಕೋಟಿ ವೆಚ್ಚದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೊಂಡ ಕೆಲವೇ ಹೊತ್ತಿನಲ್ಲಿ ಅಪಘಾತದಿಂದ ಸುದ್ದಿಯಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಾರು ಅಪಘಾತಕ್ಕೆ ಈಡಾಗಿದೆ.
ಮಂಡ್ಯ (ಮಾ.12): ಬಹುಕೋಟಿ ವೆಚ್ಚದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಭಾನುವಾರ ಮಂಡ್ಯದ ಗೆಜ್ಜಲಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದ್ದರು. ಆದರೆ ಲೋಕಾರ್ಪಣೆಗೊಂಡ ಕೆಲವೇ ಹೊತ್ತಿನಲ್ಲಿ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಅಪಘಾತಕ್ಕೆ ಈಡಾಗಿದೆ. ಬೆಂಗಳೂರು ಮೈಸೂರು ಹೆದ್ದಾರಿಯ ಫ್ಲೈ ಓವರ್ ನಲ್ಲಿ ಕಾರು ಪಲ್ಟಿಯಾಗಿ ಆತಂಕ ಸೃಷ್ಟಿಸಿತ್ತು. ಮಂಡ್ಯ ಜಿಲ್ಲೆ ಮದ್ದೂರು ಬಳಿಕ ಫ್ಲೈಓವರ್‌ನಲ್ಲಿ ಕಾರು ಪಲ್ಟಿಯಾಯಿತು. ಬೆಂಗಳೂರಿನಿಂದ ಮೈಸೂರಿಗೆ ಕಾರು ಹೋಗುತ್ತಿದ್ದಾಗ ಫ್ಲೈಓವರ್ ಬಳಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರ ಪಲ್ಟಿಯಾಗಿತ್ತು. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷಥಾ ತಡೆಗೋಡೆಗಳನ್ನು ನಿರ್ಮಾಣ ಮಾಡಿದ್ದರಿಂದ ಅಪಘಾತ ಗಂಭೀರ ಪ್ರಮಾಣಕ್ಕೆ ತಿರುಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
Photos: ಸಕ್ಕರೆ ನಾಡಿನಲ್ಲಿ ಮೋದಿ ಮೇಲೆ ಕೇಸರಿ ಹೂವಿನ ಮಳೆ, ರೋಡ್‌ಶೋನಲ್ಲಿ ವ್ಯಕ್ತವಾದ ಮಂಡ್ಯ ಪ್ರೀತಿ!
ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆ ಮೂಲಕ ಬೆಂಗಳೂರು-ಮೈಸೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಪುನರಾರಂಭ ಮಾಡಲಾಗಿತ್ತು. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಂಚಾರಕ್ಕೆ ನಿರ್ಬಂಧ ವಿಧಿಸಿತ್ತು. ಆದರೆ, ಲೋಕಾರ್ಪಣೆಯಾದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದೆ.
PM Modi In Karnataka: ಮೈಸೂರಿನ ಒಡೆಯರು, ಸರ್‌ಎಂವಿ ಅವರನ್ನು ನೆನೆದ ಪ್ರಧಾನಿ ಮೋದಿ!
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧಿಸಿ ಆದೇಶಿಸಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿಸಿ ಮೋದಿ ಮಂಡ್ಯದಿಂದ ಹೊರಡುತ್ತಿದ್ದಂತೆ ನಿರ್ಬಂಧ ತೆರವು ಮಾಡಲಾಗಿತ್ತು. ಸಂಚಾರಕ್ಕೆ ಮುಕ್ತ ಅವಕಾಶ ನೀಡಿರುವ ಬಗ್ಗೆ ವಾರ್ತಾ ಇಲಾಖೆ ಮೂಲಕ ಮಾಹಿತಿ ನೀಡಲಾಗಿತ್ತು.