ಮಡ್‌ಪೈಪ್ ಕೆಫೆ ಬ್ಲಾಸ್ಟ್‌ನಿಂದ ಪಾಕ್ ಕ್ರಿಕೆಟಿಗರಿಗೆ ಭದ್ರತಾ ಆತಂಕವಂತೆ, ರಾಜೀವ್ ಚಂದ್ರಶೇಖರ್ ಖಡಕ್ ರಿಪ್ಲೈ!
ಬೆಂಗಳೂರಿನ ಕೋರಮಂಗಲದ ಮಡ್‌ಪೈಪ್ ಕಫೆಯಲ್ಲಿ ಸಂಭವಿಸಿದ ಅಗ್ನಿದುರಂತದ ಪ್ರಕರಣವನ್ನು ಪಾಕಿಸ್ತಾನಿಗಳು ಬೇರೆಯೇ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ. ಇವರಿಗೆ ಕೇಂದ್ರ ಸಚಿವ ಹಾಗೂ ಕರ್ನಾಟಕ ಮೂಲದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಖಡಕ್ ಉತ್ತರ ನೀಡಿದ್ದಾರೆ.
ಬೆಂಗಳೂರು (ಅ.18): ಕೋರಮಂಗಲದಲ್ಲಿ ಬುಧವಾರ ಸಂಭವಿಸಿದ ಭಾರೀ ಬೆಂಕಿ ಅವಗಢದಲ್ಲಿ ಮಡ್‌ಪೈಪ್ ಕಫೆ ಸಂಪೂರ್ಣವಾಗಿ ಸುಟ್ಟಿಹೋಗಿದೆ. ಇಡೀ ಕಟ್ಟಡವೇ ಹೊತ್ತಿ ಉರಿದಿದೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಕಟ್ಟಡದಲ್ಲಿ ಸಿಲುಕಿಕೊಂಡ ಜನರು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ್ದಾರೆ. ನಾಲ್ಕನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಇನ್ನು ಕಫೆಯಲ್ಲಿದ್ದ ಸಿಲಿಂಡರ್‌ಗಳು ಕೂಡ ಸ್ಪೋಟ ಕಂಡಿವೆ. ಈ ಎಲ್ಲಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪಾಕಿಸ್ತಾನದ ಪತ್ರಕರ್ತರು ಇದನ್ನು ಬಾಂಬ್ ಬ್ಲಾಸ್ಟ್ ಅನ್ನೋ ರೀತಿಯಲ್ಲಿ ಬಿಂಬಿಸಲು ನಿರತರಾಗಿದ್ದಾರೆ. ಪಾಕಿಸ್ತಾನ ತಂಡ ಶುಕ್ರವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಪಾಕ್ ತಂಡದ ಆಟಗಾರರು ಕೆಲವು ದಿನಗಳ ಹಿಂದೆ ಬೆಂಗಳೂರಿಗೂ ಆಗಮಿಸಿದ್ದಾರೆ. ಇನ್ನು ಮಡ್‌ಪೈಪ್ ಕಫೆಯಲ್ಲಾದ ಬೆಂಕಿ ಅವಗಢ ಪಾಕಿಸ್ತಾನ ತಂಡದ ಆಟಗಾರರಿಗೆ ಭದ್ರತಾ ಆತಂಕ ನೀಡಿದೆ ಎನ್ನುವ ಅರ್ಥದಲ್ಲಿ ಪಾಕಿಸ್ತಾನದ ಪತ್ರಕರ್ತರು ಪೋಸ್ಟ್ ಮಾಡಿದ್ದಾರೆ. ಇನ್ನು ಪಾಕಿಸ್ತಾನದ ಡಾನ್ ಪತ್ರಿಕೆ ಕೂಡ ಈ ಬಗ್ಗೆ ವರದಿಯನ್ನು ಪ್ರಕಟಿಸಿದ್ದು, ಪಾಕ್ ತಂಡ ಕ್ರಿಕೆಟ್ ಪಂದ್ಯವಾಡುವ ಚಿನ್ನಸ್ವಾಮಿ ಸ್ಟೇಡಿಯಂನಿಂದ 1.15 ಗಂಟೆ ಪ್ರಯಾಣದ ದೂರದಲ್ಲಿರುವ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ.
ಪಾಕಿಸ್ತಾನದ ಪ್ರಮುಖ ಡಾನ್ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರನಾಗಿರುವ ಇಮ್ರಾನ್ ಸಿದ್ಧಿಕಿ ಮಡ್‌ಪೈಪ್ ಕಫೆಯ ಬ್ಲಾಸ್ಟ್‌ನ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದಾರೆ. 'ಬೆಂಗಳೂರಿನಲ್ಲಿ ನಡೆದ ಸ್ಫೋಟವು ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ಇತರ ತಂಡಗಳಿಗೆ ಭದ್ರತಾ ಕಾಳಜಿಯನ್ನು ಹೆಚ್ಚಿಸಿದೆ' ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೆ ಎಕ್ಸ್‌ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, 'ಕೆಲವು ಪಾಕಿಸ್ತಾನಿಗಳು ತಮ್ಮನ್ನು ವಿಶ್ವ ದರ್ಜೆಯ ಕೋಡಂಗಿಗಳಾಗಿ ಹೇಗೆ ಮುಜುಗರಕ್ಕೆ ಒಳಗಾಗುತ್ತಾರೆ ಎನ್ನುವುದರಲ್ಲಿ ದೊಡ್ಡ ಮಟ್ಟದ ಸ್ಥಿರತೆ ಕಾಣುತ್ತಿದೆ. (ಇದು ಸರ್ಕಸ್ ಪ್ರಕಾರವೂ ಅಲ್ಲ). ಕೆಲವರನ್ನು ನೋಡೋಕೆ ಬಹಳ ಹತಾಶರಾದಂತೆ ಕಾಣುತ್ತಿದೆ. ಭಾರತದಿಂದ ಯಾವುದಾದರೂ ಕೆಟ್ಟ ಸುದ್ದಿ ಬರಲಿ ಎಂದೇ ಅವರು ಕಾಯ್ತಾ ಇರುತ್ತಾರೆ. ಅವರಿಗೆ ರೆಸ್ಟೋರೆಂಟ್‌ನಲ್ಲಿ ಆಗಿರುವ ಒಂದು ಸಿಲಿಂಡರ್ ಸ್ಫೋಟ ಸಂಭ್ರಮಿಸಿ, ತೆಗಳಲು ಒಂದು ಅವಕಾಶದ ರೀತಿ ಕಾಣುತ್ತಿದೆ.
ಪಾಕಿಸ್ತಾನದ ಕ್ರಿಕೆಟಿಗರು ಬಹುಶಃ ಪಾಕಿಸ್ತಾನಕ್ಕಿಂತ ಭಾರತದಲ್ಲಿಯೇ ಹೆಚ್ಚು ಸುರಕ್ಷಿತವಾಗಿದ್ದಾರೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪಾಕಿಸ್ತಾನದ ಜೋಕರ್ಸ್ ಎನ್ನುವ ಹ್ಯಾಶ್ ಟ್ಯಾಗ್‌ಅನ್ನೂ ಬಳಸಿದ್ದಾರೆ.
ಕೋರಮಂಗಲ ಮಡ್‌ಪೈಪ್ ಕೆಫೆಯಲ್ಲಿ ಭಾರಿ ಬೆಂಕಿ ಅವಘಡ: ಕಟ್ಟಡದಿಂದ ಹಾರುತ್ತಿರುವ ಜನರು
ರಾಜೀವ್ ಚಂದ್ರಶೇಖರ್ ಅವರ ಟ್ವೀಟ್‌ಗೆ ಹೆಚ್ಚಿನವರು ಪ್ರತಿಕ್ರಿಯೆ ನೀಡಿದ್ದು, ಇನ್ನೂ ಸೂಕ್ತವಾಗಿ ಹೇಳುವುದಾದರೆ ವಿಶ್ವಕಪ್ ನಂತರ ಪಾಕಿಸ್ತಾನದ ಆಟಗಾರರು ನಾವೇ ಬೇಗ ಹೊರಕಳಿಸಬೇಕು. ಉತ್ತಮ ಆಹಾರ ಹಾಗೂ ಹೆಚ್ಚಿನ ಸುರಕ್ಷತೆಯನ್ನು ಕಂಡು ಅವರು ತಾವಾಗಿಯೇ ಪಾಕಿಸ್ತಾನಕ್ಕೆ ಹೋಗಲು ಸಿದ್ಧರಾಗೋದಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಜಗತ್ತಿನಲ್ಲಿ ಯಾರಾದರೂ ಪ್ರಮಾಣಪತ್ರ ಜೋಕರ್ಸ್‌ಗಳಿದ್ದರೆ, ಅದು ಪಾಕಿಸ್ತಾನಿಯರು ಮಾತ್ರ ಎಂದು ಬರೆದಿದ್ದಾರೆ.
ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್ ಮಹಿಳಾ ಯೋಧೆಯ ಕಿಡಿನುಡಿ