Asianet Suvarna News Asianet Suvarna News

ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್‌ ಮಹಿಳಾ ಯೋಧೆಯ ಕಿಡಿನುಡಿ

ಇಸ್ರೇಲ್ ಹಮಾಸ್ ನಡುವಿನ ಯುದ್ಧದ ಭೀಕರತೆಯನ್ನು ನೇರವಾಗಿ ಯುದ್ಧಭೂಮಿಯಿಂದಲೇ  ಏಷ್ಯಾನೆಟ್ ಕನ್ನಡದ ಸಂಪಾದಕರಾದ ಅಜಿತ್ ಹನಮಕ್ಕನವರ್ ವರದಿ ಮಾಡಿದ್ದು, ಅಲ್ಲಿನ ನಿಜ ಚಿತ್ರಣ ಏನು ಎಂಬುದನ್ನು ಅವರೇ ಬರೆದಿದ್ದಾರೆ ಇಲ್ಲಿದೆ ನೋಡಿ.

Israel hamas war Hamas shroud is still to fall we will buried them together Israeli female warrior sparking statement akb
Author
First Published Oct 18, 2023, 11:16 AM IST

ಅಜಿತ್‌ ಹನಮಕ್ಕನವರ್, ಸಂಪಾದಕ, ಏಷ್ಯಾನೆಟ್‌ ಸುವರ್ಣ ನ್ಯೂಸ್‌

ಟೆಲ್‌ ಅವಿವ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದರೆ ಖಾಲಿ ಖಾಲಿ. ಏರ್‌ಪೋರ್ಟ್‌ ಏನೋ ದೊಡ್ಡದು, ಮಾಡರ್ನ್‌ ಕೂಡ ಹೌದು. ಹೊರಗೆ ಬಂದರೆ ನಮ್ಮ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇರುವವರಿಗಿಂತಲೂ ಕಡಿಮೆ ಜನ. ಕಾರಣ ಎರಡು ಹಮಾಸ್‌ಗೂ ಇಸ್ರೇಲ್‌ಗೂ ಕದನ ಹತ್ತಿಕೊಂಡಿರುವ ಗಾಜಾ ಬಾರ್ಡರ್‌ ಇಲ್ಲಿಂದ ಬರೀ ಐವತ್ತು ಕಿಲೋಮೀಟರ್‌. ಹಮಾಸ್‌ ಉಗ್ರರು R-160 ಮಿಸೈಲ್‌ಗಳನ್ನು ದಂಡಿಯಾಗಿ ಇಟ್ಟುಕೊಂಡು ಕುಳಿತಿದ್ದಾರೆ. ಇಸ್ರೇಲಿನ ಮ್ಯಾಪ್‌ ಇಟ್ಟುಕೊಂಡು ಕುಳಿತರೆ ಅರ್ಥವಾಗುತ್ತದೆ. ಗಾಜಾದ ದಕ್ಷಿಣ ಗಡಿಯ ತನಕ ಬಂದು ಹಮಾಸ್‌ ಉಗ್ರರು ಹಾರಿಸುವ R-160ಗಳು ಟೆಲ್‌ ಅವಿವ್‌ ದಾಟಿ ಹೈಫಾ ಮೇಲೂ ಬೀಳುತ್ತಿವೆ. ಅಂಥದ್ದರಲ್ಲಿ ನಾನು ಬಂದ ಹಿಂದಿನ ದಿನವಷ್ಟೆ ಒಂದು ರಾಕೆಟ್‌ ಬೆನ್‌ ಗುರಿಯನ್ ವಿಮಾನ ನಿಲ್ದಾಣದ ದಿಕ್ಕಿಗೆ ಬಂದು ಐರನ್‌ ಡೋಮ್‌ನ ಸೈರನ್‌ಗಳು ಬಾಯಿ ಬಡೆದುಕೊಂಡು ಕೋಲಾಹಲ ಎದ್ದಿತ್ತು. ಬಹುತೇಕ ಏರ್‌ಲೈನ್‌ಗಳು ವಿಮಾನ ಕ್ಯಾನ್ಸಲ್‌ ಮಾಡಿದವು. ಅದ್ಯಾವುದೋ ಧೈರ್ಯದ ಮೇಲೆ ಎತಿಹಾದ್ ಏರ್‌ಲೈನ್ಸ್‌ನವರು ಅಬುಧಾಬಿಯಲ್ಲಿ ಹತ್ತಿಸಿಕೊಂಡು ಅಗ್ನಿಕುಂಡದ ಪಕ್ಕದಲ್ಲಿ ಇಳಿಸಿ ಹೋದರು. ಅವರಿಗೆ ದೇವರು ಒಳ್ಳೆಯದು ಮಾಡಲಿ.

ಏರ್‌ಪೋರ್ಟ್‌ನಲ್ಲಿ ಜನ ಕಡಿಮೆ ಇದ್ದದ್ದಕ್ಕೆ ಇನ್ನೂ ಒಂದು ಕಾರಣ ಇತ್ತು. ಅವತ್ತು ಶಬ್ಬಾತ್‌. ಯಹೂದಿಗಳು ತುಂಬಾ ಶ್ರದ್ಧೆಯಿಂದ ಆಚರಿಸುವ ಪ್ರತಿವಾರದ ಧಾರ್ಮಿಕ ಕ್ರಿಯೆ. ಕ್ರಿಯೆ ಅಂದರೆ ಮತ್ತೇನಲ್ಲ, ಅವತ್ತು ಪೂರ್ತಿ ರೆಸ್ಟ್‌..! ಅದು ಯಹೂದಿಗಳ ಪಾಲಿಗೆ ಕಡ್ಡಾಯ. ದೇವರ ಅಪ್ಪಣೆ ಅದು. ಪ್ರತಿ ಶುಕ್ರವಾರ ಸೂರ್ಯಾಸ್ತಕ್ಕಿಂತ ಹದಿನೆಂಟು ನಿಮಿಷ ಮುಂಚೆ ಮನೆಯಲ್ಲಿ ದೀಪ ಹಚ್ಚುವುದರೊಂದಿಗೆ ಶುರುವಾದರೆ, ಶನಿವಾರ ಆಕಾಶದಲ್ಲಿ ಮೊದಲ ಮೂರು ನಕ್ಷತ್ರಗಳನ್ನು ನೋಡುವುದರೊಂದಿಗೆ ಮುಕ್ತಾಯ. ಆ ಮಧ್ಯದ ಅವಧಿಯಲ್ಲಿ ಬೆಂಕಿ ಹೊತ್ತಿಸಬಾರದು-ನಂದಿಸಬಾರದು, ನೌಕರಿ-ವ್ಯಾಪಾರ ಮಾಡಬಾರದು. ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣಿಸುವುದಕ್ಕೂ ಸಾವಿರ ನಿಯಮಗಳು. ವ್ಯಾಪಾರಿಗಳು ಲಾಭ ತರುವಂಥ ಕೆಲಸ ಮಾಡಬಾರದು. ಯೋಚನೆ ಕೂಡ ಸಲ್ಲದು. ನೌಕರಿ ಮಾಡುವವರಿಗೂ ಅಂಥವೇ ನಿಯಮಗಳು.

ಪ್ರಾರ್ಥನೆ ಮಾಡು, ಸಂಬಂಧಿಕರು-ಬಂಧು ಬಾಂಧವರ ಜೊತೆ ಹರಟೆ ಹೊಡಿ, ವೈನ್‌ ಕುಡಿ, ಕಟ್ಟಿಕೊಂಡ ಹೆಂಡತಿಯ ಜೊತೆ ಸೆಕ್ಸ್‌ ಮಾಡು. ಎಲ್ಲ ಓಕೆ... ಕೆಲಸ-ದುಡಿಮೆ ನಿಷಿದ್ಧ. ಇದನ್ನು ಸಂಪ್ರದಾಯಸ್ಥ ಯಹೂದಿಗಳು ಅದೆಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಅಂದರೆ, ಅವರು ಶಬ್ಬಾತ್‌ ದಿನ ಕರೆಂಟ್‌ ಬಟನ್‌ ಆನ್‌- ಆಫ್‌ ಮಾಡುವುದಕ್ಕೂ ಆಳುಗಳನ್ನು ಇಟ್ಟುಕೊಂಡಿರುತ್ತಾರೆ. ಬೆಂಕಿ ಹೊತ್ತಿಸಬಾರದು- ನಂದಿಸಬಾರದು ಎನ್ನುವುದು ಕಟ್ಟಳೆ. ಕರೆಂಟು ಕೂಡ ಬೆಂಕಿಯೇ ತಾನೆ..? ಪ್ರಾಣ ಹೋಗುತ್ತೆ ಅನ್ನುವ ಸನ್ನಿವೇಶದಲ್ಲಿ ಯಾರನ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು ಅನ್ನುವಂಥ ಕೆಲವು ಸಡಿಲಿಕೆಗಳಿವೆ. ಪ್ರಾಣ ಹೋಗುತ್ತದೆ ಅಂದರೂ ಮಾಡಬಾರದಂಥ ಮೂರು ಕೆಲಸಗಳೆಂದರೆ 1. ಕೊಲೆ 2. ವ್ಯಭಿಚಾರ 3. ಮೂರ್ತಿ ಪೂಜೆ..!

ಆಸ್ಪತ್ರೆ ಮೇಲೆ ದಾಳಿಗೆ 500 ಬಲಿ: ಇಸ್ರೇಲ್ ಪ್ರಧಾನಿ ಮಹಾ ಸುಳ್ಳುಗಾರ: ಪ್ಯಾಲೇಸ್ತೇನ್ ರಾಯಭಾರಿ ಆಕ್ರೋಶ 


ಇದನ್ನು ಇಷ್ಟು ವಿವರವಾಗಿ ಹೇಳುವುದಕ್ಕೂ ಕಾರಣ ಇದೆ. ನಾನು ಟೆಲ್‌ ಅವಿವ್‌ನ ನಿರ್ಮಾನುಷ ಟರ್ಮಿನಲ್‌ನಿಂದ ಹೊರಗೆ ಬಂದದ್ದು 14ನೇ ತಾರೀಖು ಶನಿವಾರ. ಅವತ್ತು ಶಬ್ಬಾತ್‌. ಆವತ್ತಿಗೆ ಸರಿಯಾಗಿ ಹಮಾಸ್‌ ಉಗ್ರರು ಇಸ್ರೇಲಿನ ಗಡಿ ಗ್ರಾಮಗಳು, ಪಟ್ಟಣಗಳ ಮೇಲೆ ದಾಳಿ ನಡೆಸಿ ಒಂದು ವಾರ. 7ನೇ ತಾರೀಖು ಆ ಬೀಭತ್ಸ ಕೃತ್ಯ ನಡೆದದ್ದು. ಅವತ್ತು ಶಬ್ಬಾತ್‌..! ಸಂಪ್ರದಾಯಸ್ಥ ಯಹೂದಿ ಅವತ್ತು ಬಂದೂಕು ಮುಟ್ಟುವುದಿಲ್ಲ. ಅವನ ಕೈಯಲ್ಲಿ ಹತ್ಯೆ ನಡೆದರೆ ಅದಕ್ಕೆ ಕ್ಷಮೆ ಇಲ್ಲ..! ಶಬ್ಬಾತ್‌ ದಿನವನ್ನೇ ಆರಿಸಿಕೊಂಡಿದ್ದ ಹಮಾಸಿ..!

ಇಸ್ರೇಲಿ ತಂತ್ರಜ್ಞಾನ ಆ ಊರಿಗಲ್ಲ!

Sderot ಅಂತ ಒಂದು ಪಟ್ಟಣ ದಕ್ಷಿಣ ಗಾಜಾ ಗಡಿಯಿಂದ ಎಂಟ್ಹತ್ತು ಕಿಲೋಮೀಟರ್‌ ದೂರ. ಏಳನೇ ತಾರೀಖಿನ ಹಮಾಸ್‌ ದಾಳಿಯ ಬರ್ಬರತೆ ಕಂಡು ನಲುಗಿದ ಊರು. ಈಗಲೂ ಹಮಾಸಿಗರು ಆ ಊರಿನ ಮೇಲೆ ಕಸ್ಸಮ್‌ ರಾಕೆಟ್‌ಗಳನ್ನು ಹಾರಿಸುತ್ತಲೇ ಇದ್ದಾರೆ. ಅಲ್ಲಿ ಐರನ್‌ ಡೋಮ್‌ ಸರಿಯಾಗಿ ಕೆಲಸ ಮಾಡಲ್ಲ. ಗಡಿಯಾಚೆಯಿಂದ ಉಡಾಯಿಸಿದ ಕಸ್ಸಮ್‌ ಹದಿನೈದು ಸೆಕೆಂಡಿಗೆಲ್ಲ ಈ ಊರಿಗೆ ಬಂದು ಬಿಡತ್ತೆ. ಐರನ್‌ ಡೋಮ್‌ ಎಚ್ಚೆತ್ತುಕೊಂಡು ಸೈರನ್‌ ಮೊಳಗಿಸಿ ಜಿಹಾದಿ ರಾಕೆಟ್‌ ಹೊಡೆಯಲು ಇನ್ನೊಂದು ಮಿಸೈಲ್‌ ಲಾಂಚ್‌ ಮಾಡುವಷ್ಟರಲ್ಲಿ ಫಿನಿಷ್‌..! ಅದಕ್ಕೆ Sderot ನಗರವನ್ನು ಖಾಲಿ ಮಾಡಿಸಲಾಗಿದೆ. ಅಲ್ಲಿದ್ದದ್ದೇ ಮೂವತ್ತು ಸಾವಿರ ಜನಸಂಖ್ಯೆ. ಈಗ ಯಾರೂ ಇಲ್ಲ. 

ಆಸ್ಪತ್ರೆ ಮೇಲೆ ದಾಳಿಗೆ 500 ಬಲಿ: ಇಸ್ರೇಲ್ ಪ್ರಧಾನಿ ಮಹಾ ಸುಳ್ಳುಗಾರ: ...

ತುಂಬಾ ಚಂದದ ಊರು. Passionate ವಾಸ್ತು ಶಿಲ್ಪಿಯೊಬ್ಬ ಒಳ್ಳೆಯ ಮೂಡಿನಲ್ಲಿದ್ದಾಗ ಬಿಡಿಸಿಟ್ಟ 3D ಚಿತ್ರದಂತಿದೆ. ಈಗ ನಿರ್ಮಾನುಷ. ಅಲ್ಲಲ್ಲಿ ಮಿಲಿಟರಿಯವರು- ಪೊಲೀಸರು- ಸ್ವಯಂಸೇವಕರು ಊರಲ್ಲಿ ಸುತ್ತಾಡುತ್ತಿದ್ದರೆ, ಅಲ್ಲಲ್ಲಿ 7ನೇ ತಾರೀಖಿನ ನರಮೇಧದ ಕುರುಹುಗಳು. ಆ ಊರಿನ ಪೊಲೀಸ್‌ ಸ್ಟೇಷನ್‌ ಮೇಲೆ ದಾಳಿ ಮಾಡಿ ಒಂದಷ್ಟು ಪೊಲೀಸರನ್ನು ಒತ್ತೆಯಾಳಾಗಿಸಿಕೊಂಡು ಇಸ್ರೇಲಿ ಮಿಲಿಟರಿ ಜೊತೆ ಚೌಕಾಸಿಗೆ ಇಳಿದಿದ್ದರು ಮುಜಾಹಿದೀನ್‌ಗಳು. ತಮ್ಮವರನ್ನೆಲ್ಲ ಸುರಕ್ಷಿತವಾಗಿ ಹೊರಗೆ ತಂದು ತಮ್ಮ ಪೊಲೀಸ್‌ ಸ್ಟೇಷನ್‌ಗೆ ತಾವೇ ಕ್ಷಿಪಣಿ ಬಿಟ್ಟು ಉಡಾಯಿಸಿಬಿಟ್ಟರು ಇಸ್ರೇಲಿಗರು. ಒಳಗೆ ಎಷ್ಟು ಜನ ಸತ್ತರೋ ಲೆಕ್ಕ ಸಿಗಲಿಲ್ಲ - ನಮ್ಮವರು ಮಾತ್ರ ಏಳು ಜನ ಹುತಾತ್ಮರಾದರು ಎಂದು ಕಾವಲಿಗಿದ್ದ ಲೇಡಿ ಪೊಲೀಸ್‌ ಲೆಕ್ಕ ಹೇಳುತ್ತಿದ್ದಳು. ಊರವರೆಲ್ಲ ವಾಪಾಸ್‌ ಬರುವುದು ಯಾವಾಗ ಅಂತ ಕೇಳಿದೆ. ಹಮಾಸ್‌ ಸರ್ವನಾಶ ಆದಮೇಲೆ ಅಂದಳು.

ಎಮ್ಮೆಯಂತೆ ಉಬ್ಬಿಹೋಗಿದ್ದ ಎರಡು ಹೆಣಗಳು..!

Sderot ಪಟ್ಟಣದಿಂದ ಹೊರಕ್ಕೆ ಬಂದು ಬಲಕ್ಕೆ ತಿರುಗಿ ಹೈವೇ ಹಿಡಿದು ಐದಾರು ಕಿಲೋಮೀಟರ್‌ ಮುಂದೆ ಹೋದರೆ ನಾಲ್ಕು ರಸ್ತೆಗಳು ಸೇರುವುದೊಂದು ಸರ್ಕಲ್‌ ಸಿಗುತ್ತೆ. ಅಲ್ಲಿಂದ ಎಡಕ್ಕೆ ಬಲಕ್ಕೆ ಹೋಗುವ ರೋಡಿರೋದೇ ಗಾಜಾ ಗಡಿಗುಂಟ. IDF (Israel Defense Force) ನವರು ಸಾವಿರ ಪ್ರಶ್ನೆ ಕೇಳಿ ಸಮಾಧಾನವಾದರೆ ಮಾತ್ರ ಆ ರೋಡಿಗೆ ಬಿಡುತ್ತಾರೆ. ಸ್ಥಳೀಯರಿಗೆ ಮಾತ್ರ ಅನ್ನುವಂಥಾಗಿರುವ ರಸ್ತೆಗಳವು. ಸರ್ಕಲ್‌ನಿಂದ ನೇರ ಹೋದರೆ ಸೀದಾ ಗಾಜಾ..! ಎರಡೇ ಕಿಲೋಮೀಟರ್‌ ದೂರ. ಅಲ್ಲೇ ಅಕ್ಕಪಕ್ಕದಲ್ಲಿ ಇಸ್ರೇಲಿ ಆರ್ಟಿಲರಿಯವರು ತೋಪು ನಿಲ್ಲಿಸಿಕೊಂಡು ಹಮಾಸಿ ದಿಕ್ಕಿಗೆ ಶಲ್ಲು ಕಳಿಸುತ್ತಿದ್ದಾರೆ. ಅಲ್ಲಿಂದ ಮುಂದಕ್ಕೆ ಮಾಧ್ಯಮದವರಿಗೆ ನೋ ಎಂಟ್ರಿ.

ಅಲ್ಲಿ ನಿಂತುಕೊಂಡಿದ್ದಾಗಲೇ ಏಳೆಂಟು IDF ಯೋಧ-ಯೋಧೆಯರು ಬಂದು From India..? ಅಂತ ಕೇಳಿದರು. ಓ... ವಿ ಲವ್‌ ಇಂಡಿಯಾ’ ಅಂದಳು ಅವರಲ್ಲೊಬ್ಬಳು. ವಯಸ್ಸಿನ್ನೂ ಇಪ್ಪತ್ತೊಂದಂತೆ. ಒಬ್ಬ ಹುಡುಗನಿಗಂತೂ ಹತ್ತೊಂಭತ್ತು. ಹದಿನೆಂಟು ತುಂಬಿದ ಪ್ರತಿ ಇಸ್ರೇಲಿಯೂ, ಹುಡುಗಿಯರಾದರೆ ಎರಡು ವರ್ಷ- ಹುಡುಗರಾದರೆ ಮೂರು ವರ್ಷ, ಕಡ್ಡಾಯವಾಗಿ ಸೈನ್ಯದಲ್ಲಿರಬೇಕು. ಅದಾದ ನಂತರ ಬೇರೆ ಬೇರೆ ಉದ್ಯೋಗ ಹುಡುಕಿಕೊಳ್ಳುವುದು. ಮಿಲಿಟರಿ ಸೇವೆ ಮುಗಿಸಿ ಬೇರೆ ಉದ್ಯೋಗ ಹುಡುಕಿಕೊಳ್ಳುವ ಮಧ್ಯದಲ್ಲಿ ಆರೆಂಟು ತಿಂಗಳು ಭಾರತ ಸುತ್ತಿ ಬರುವ ಟ್ರೆಂಡ್‌ ಇಸ್ರೇಲಿ ಮಿಲಿಟರಿಯಲ್ಲಿದೆ. ನಮ್ಮ ಸೀನಿಯರ್‌ಗಳು ಹೋಗಿ ಬಂದಿದ್ದಾರೆ. ನಾವು ಬರ್ತೀವಿ ಅಂದರು. ಬೆಂಗಳೂರು ಕಡೆ ಬಂದರೆ ನನಗೊಂದು ಫೋನ್‌ ಮಾಡಿ ಅಂತ ಕಾರ್ಡು ಕೊಟ್ಟೆ.

ಅಲ್ಲಿಂದ ಇನ್ನೇನು ಹೊರಡಬೇಕು. ಯೋಧೆಯೊಬ್ಬಳು ಹತ್ತಿರ ಬಂದು ಹಮಾಸ್‌ನವರ ಹೆಣ ನೋಡಬೇಕಾ..? ಅಂದಳು. ಉತ್ಸಾಹದಿಂದಲೇ ಹೂ ಅಂದೆ. ಫರ್ಲಾಂಗು ದೂರದಲ್ಲಿ ಬೇವಿನ ಮರದಂತಿದ್ದ ಯಾವುದೋ ಮರ ತೋರಿಸಿ, ಅಲ್ಲಿ ಬಿದ್ದಿದ್ದಾವೆ ಅಂದಳು. ಕ್ಯಾಮರಾಮ್ಯಾನ್‌ ಮೋಹನ್‌ನ ಕರೆದುಕೊಂಡು ಆ ದಿಕ್ಕಿಗೆ ಹೋದರೆ ಅನತಿ ದೂರದಿಂದಲೇ ವಾಸನೆ. ಎರಡು ಹೆಣಗಳು ಒಂದರ ಮೇಲೊಂದರಂತೆ ಬಿದ್ದಿದ್ದವು. ಒಂದು ವಾರದ ಹಿಂದೆಯೇ ಇಸ್ರೇಲಿ ಸೈನ್ಯ ಹೊಡೆದು ಹಾಕಿರುವ ಜಿಹಾದಿಗಳವರು. ಕೊಳೆತು ಸಣ್ಣ ಎಮ್ಮೆಯ ಗಾತ್ರಕ್ಕೆ ಉಬ್ಬಿದ್ದವು. ಬಾಯಲ್ಲಿ ಗಟ್ಟಿಯಾಗಿ ಕರ್ಚೀಫು ಹಾಕಿಕೊಂಡು ಮೋಹನ ಹತ್ತಿರಕ್ಕೆ ಹೋಗಿ ಚಿತ್ರಿಸಿಕೊಂಡರು. ಕ್ರೈಮ್‌ ರಿಪೋರ್ಟಿಂಗ್‌ನಲ್ಲಿ ನಾನೂ ಸಾವಿರಾರು ಹೆಣ ನೋಡಿದ್ದೇನೆ. ಈ ಹೆಣಗಳ ಮುಂದೆ ತೊಳೆಸಿದಂತೆ ಯಾವತ್ತೂ ಹೊಟ್ಟೆ ತೊಳೆಸಿರಲಿಲ್ಲ.

ವಾಪಸ್ಸು ಅವಳ ಹತ್ತಿರನೇ ಬಂದು, ಹೂಳೋದಿಲ್ವಾ ಅವನ್ನಾ..? ಅಂತ ಕೇಳಿದೆ. ಇನ್ನು ಸುಮಾರು ಹೆಣ ಬೀಳೋದಿದೆ. ಎಲ್ಲ ಒಟ್ಟಿಗೆ ಹೂಳ್ತೀವಿ... ಅಂದಳು. ಆಕೆಯ ಕೈಯಲ್ಲಿನ ಎಂ16 ಗನ್ನು , ಯುದ್ಧ ಸನ್ನದ್ಧ ಪೋಷಾಕು, ಕಣ್ಣಲ್ಲಿನ ಕ್ಷಾತ್ರ, ಮಾತಿನಲ್ಲಿನ ಸೇಡು, ಅನುರೂಪ ಸೌಂದರ್ಯ...! ಒಂದಕ್ಕೊಂದು ತಾಳೆಯೇ ಆಗಲಿಲ್ಲ..!

Follow Us:
Download App:
  • android
  • ios