ರಾಜೀವ್‌ ಗಾಂಧಿ ಟ್ರಸ್ಟ್‌ಗೆ ಚೀನಾ ಹಣ; ಒಂದಿಂಚೂ ಜಾಗ ಬಿಟ್ಟುಕೊಡಲ್ಲ ಎಂದ ಅಮಿತ್ ಶಾ

ಚೀನಾದಿಂದ ರಾಜೀವ್‌ ಪ್ರತಿಷ್ಠಾನ ಅಕ್ರಮ ದೇಣಿಗೆ ಪಡೆದಿತ್ತು. ಇದನ್ನು ಸದನದಲ್ಲಿ ಹೇಳಲು ಉತ್ತರ ಸಿದ್ಧಪಡಿಸಿದ್ದೆವು. ಇದರ ಸುಳುಹು ಅರಿತ ಕಾಂಗ್ರೆಸ್‌ ಕೋಲಾಹಲ ಸೃಷ್ಟಿಸಿದೆ. ಭಾರತ-ಚೀನಾ ಸಂಘರ್ಷದ ನೆಪ ಇರಿಸಿಕೊಂಡು ಗಲಾಟೆ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಟಿ ಬೀಸಿದ್ದಾರೆ. 

fcra registration of rajiv gandhi foundation cancelled after it received funds from chinese embassy amit shah  ash

ನವದೆಹಲಿ: ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅಧ್ಯಕ್ಷೆಯಾಗಿರುವ ರಾಜೀವ್‌ ಗಾಂಧಿ ಪ್ರತಿಷ್ಠಾನವು (Rajiv Gandhi Foundation) ಚೀನಾದಿಂದ (China) 1.35 ಕೋಟಿ ರೂ. ಮತ್ತು ವಿವಾದಿತ ಧಾರ್ಮಿಕ ನಾಯಕ ಝಾಕಿರ್‌ ನಾಯ್ಕ್‌ (Zakir Naik) ಸಂಸ್ಥೆಯಿಂದ 60 ಲಕ್ಷ ರೂ. ಅಕ್ರಮ ದೇಣಿಗೆ ಸ್ವೀಕರಿಸಿತ್ತು ಎಂದು ಕೆಂದ್ರ ಸಚಿವ ಅಮಿತ್‌ ಶಾ (Amit Shah) ಆರೋಪಿಸಿದ್ದಾರೆ. ರಾಜೀವ್‌ ಟ್ರಸ್ಟ್‌ಗೆ ವಿದೇಶಿ ದೇಣಿಗೆ ಸ್ವೀಕರಿಸದಂತೆ ನಿರ್ಬಂಧ ಹೇರಲು ಏನು ಕಾರಣ ಎಂಬುದರ ಬಗ್ಗೆ ಇದೇ ಮೊದಲ ಬಾರಿಗೆ ಕೆಂದ್ರ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ. 

‘ಕಾಂಗ್ರೆಸ್‌ (Congress) ಪಕ್ಷ ಚೀನಾ-ಭಾರತ ಗಡಿ (China - India Border) ಸಂಘರ್ಷಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲಿ (Session) ಕೋಲಾಹಲ ಎಬ್ಬಿಸಲಿಲ್ಲ. ಬದಲಾಗಿ, ಚೀನಾದಿಂದ ರಾಜೀವ್‌ ಗಾಂಧಿ ಪ್ರತಿಷ್ಠಾನ 1.35 ಕೋಟಿ ರೂ. ಅಕ್ರಮ ದೇಣಿಗೆ ಸ್ವೀಕರಿಸಿತ್ತು. ಈ ತಪ್ಪನ್ನು ಮುಚ್ಚಿಡುವ ಉದ್ದೇಶದಿಂದ ಕೋಲಾಹಲ ನಡೆಸಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಸಂಸತ್‌ ಕಲಾಪ ಮುಂದೂಡಿಕೆ ಆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ನೇತೃತ್ವದ ರಾಜೀವ್‌ ಗಾಂಧಿ ಪ್ರತಿಷ್ಠಾನದ ಮೂಲ ಉದ್ದೇಶ ಸಮಾಜ ಸೇವೆ. ಆದರೆ, ಈ ಮೂಲ ಉದ್ದೇಶ ಬಿಟ್ಟು ವಿದೇಶಿ ದೇಣಿಗೆ ಕಾಯ್ದೆಯಡಿ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಭಾರತ-ಚೀನಾ ಬಾಂಧವ್ಯದ ಅಭಿವೃದ್ಧಿ ಬಗ್ಗೆ ಸಂಶೋಧನೆ ಮಾಡುವ ಉದ್ದೇಶಕ್ಕೆ ದೇಣಿಗೆ ಪಡೆದಿತ್ತು. ಹಾಗಾಗಿ ಕೆಲವು ತಿಂಗಳ ಹಿಂದೆ ನಾವು ಪ್ರತಿಷ್ಠಾನವು ವಿದೇಶಗಳಿಂದ ದೇಣಿಗೆ ಪಡೆಯುವುದನ್ನು ನಿರ್ಬಂಧಿಸಿದ್ದೆವು’ ಎಂದು ಹೇಳಿದರು.

ಇದನ್ನು ಓದಿ: ಭಾರತ-ಚೀನಾ ಗಡಿ ಸಂಘರ್ಷಕ್ಕೆ ನೆಹರು ಕಾರಣ: ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

‘ಇದೇ ವಿಷಯವನ್ನು ನಾವು ಇಂದು ಪ್ರಶ್ನೋತ್ತರ ಕಲಾಪದಲ್ಲಿ ಹೇಳಬೇಕು ಎಂದುಕೊಂಡಿದ್ದೆವು. ಕಾಂಗ್ರೆಸ್‌ ಸದಸ್ಯರೊಬ್ಬರೇ, ದೇಣಿಗೆ ನಿರ್ಬಂಧಕ್ಕೆ ಕಾರಣ ಕೇಳಿ ಪ್ರಶ್ನೆ ಕೇಳಿದ್ದರು. ಆದರೆ ಸರ್ಕಾರದ ಉತ್ತರ ತನಗೆ ತಿರುಗುಬಾಣ ಆಗಬಹುದು ಎಂದು ಭಾವಿಸಿದ ಕಾಂಗ್ರೆಸ್‌ ಚೀನಾ-ಭಾರತ ಸಂಘರ್ಷದ ಚರ್ಚೆಯ ನೆಪ ಒಡ್ಡಿ ಕಲಾಪ ಮುಂದೂಡುವಂತೆ ಮಾಡಿತು’ ಎಂದು ಆರೋಪಿಸಿದರು.

‘ಒಂದು ವೇಳೆ ಚೀನಾ-ಭಾರತ ಬಾಂಧವ್ಯ ಅಭಿವೃದ್ಧಿ ಬಗ್ಗೆ ಪ್ರತಿಷ್ಠಾನವು ಸಂಶೋಧನೆ ಮಾಡಿದ್ದೇ ಆದಲ್ಲಿ ಸಂಶೋಧನೆಯ ಫಲಶ್ರುತಿ ಏನಾಗಿದೆ? 1962ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಭಾರತದ ಪ್ರದೇಶಗಳನ್ನು ಚೀನಾಗೆ ಬಿಟ್ಟುಕೊಟ್ಟಿತು. ಅದರ ಬಗ್ಗೆ ಸಂಶೋಧನೆ ನಡೆಸಿದೆಯೇ? ನೆಹರು ಅವರು ಭಾರತಕ್ಕೆ ಸಿಗಬೇಕಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸ್ಥಾನವನ್ನು ಚೀನಾಗೆ ಬಿಟ್ಟುಕೊಟ್ಟರು. ಅದರ ಬಗ್ಗೆ ಸಂಶೋಧನೆ ನಡೆಸಿದೆಯೇ?’ ಎಂದು ಅಮಿತ್‌ ಶಾ ಪ್ರಶ್ನಿಸಿದರು.

ಇದನ್ನೂ ಓದಿ: ಲಡಾಖ್ ಬಳಿಕ ತವಾಂಗ್‌‌ನಲ್ಲಿ ಚೀನಾ ಕಿರಿಕ್, ಸೇನಾ ಚಕಮಕಿಯಲ್ಲಿ ಯೋಧರಿಗೆ ಗಾಯ!

ಒಂದಿಂಚೂ ಜಾಗ ಬಿಟ್ಟುಕೊಡಲ್ಲ: ಅಮಿತ್ ಶಾ
‘ಎಲ್ಲಿಯವರೆಗೆ ನರೇಂದ್ರ ಮೋದಿ ಸರ್ಕಾರ ಅಧಿಕಾರದಲ್ಲಿ ಇರುತ್ತದೋ ಅಲ್ಲಿಯವರೆಗೆ ಚೀನಾಗೆ ಭಾರತದ ಒಂದಿಂಚು ಜಮೀನು ಕೂಡ ಅತಿಕ್ರಮಿಸಿಕೊಳ್ಳಲು ಆಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀಕ್ಷ್ಣವಾಗಿ ಹೇಳಿದ್ದಾರೆ. ಚೀನಾ-ಭಾರತ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಬಿಜೆಪಿ ಸರ್ಕಾರ ಭಾರತದ ಜಮೀನು ಅತಿಕ್ರಮಣ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ. ನಾವು ಒಂದಿಂಚು ಜಮೀನನ್ನೂ ಬಿಟ್ಟುಕೊಡುವುದಿಲ್ಲ. ನಮ್ಮ ಯೋಧರು ತೋರಿದ ಶೌರ್ಯ ಪ್ರಶಂಸನೀಯ. ನಮ್ಮ ಭೂಮಿಯನ್ನು ಅವರು ಉಳಿಸಿದ್ದಾರೆ. ಒಂದು ಮಾತು ಹೇಳಲು ನಾನು ಇಷ್ಟಪಡುತ್ತೇನೆ. ಮೋದಿ ಸರ್ಕಾರ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಚೀನಾಗೆ ಭಾರತದ ಒಂದಿಂಚೂ ಜಮೀನು ಕಬಳಿಸಲು ಆಗುವುದಿಲ್ಲ’ ಎಂದರು.

Latest Videos
Follow Us:
Download App:
  • android
  • ios